ಸಾರಾಂಶ
ಗ್ರಾಪಂಗಳಲ್ಲಿ ದಾಖಲೆಗಳ ನೋಂದಣಿ, ಆಡಳಿತ ಎಲ್ಲವೂ ಈಗ ಯಾಂತ್ರಿಕೃತಗೊಂಡು, ಕಂಪ್ಯೂಟರಿಕರಣವಾಗುತ್ತಿದೆ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ತಾಂತ್ರಿಕ ಸಮಸ್ಯೆಗಳ ಅಡೆತಡೆಗಳು ಅನೇಕ, ಕೆಲಸ ಕಾರ್ಯಭಾರದ ಒತ್ತಡದ ನಡುವೆಯೂ ಕಂಪ್ಯೂಟರ್ ಡಾಟಾ ಎಂಟ್ರಿ ಆಪರೇಟರ್ ಗಳು ಗ್ರಾಪಂಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಾಪಂ ಇಒ ಪಿ.ಎಸ್. ಅನಂತರಾಜು ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಕ್ಲಾರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಸಂಘದಿಂದ ಆಯೋಜಿಸಿದ್ದ ಕಂಪ್ಯೂಟರ್ ಆಪರೇಟರ್ ಗಳ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕಿನ ಕ್ಲಾರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳ ಜೊತೆಗೂಡಿ ಚಾಲ್ಸ್ ಬ್ಯಾಬೆಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗ್ರಾಪಂಗಳಲ್ಲಿ ದಾಖಲೆಗಳ ನೋಂದಣಿ, ಆಡಳಿತ ಎಲ್ಲವೂ ಈಗ ಯಾಂತ್ರಿಕೃತಗೊಂಡು, ಕಂಪ್ಯೂಟರಿಕರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಗಳ ಕಾರ್ಯನಿರ್ವಹಣೆ ನಿತ್ಯವು ನಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ತಾಲೂಕಿನ ಅಧ್ಯಕ್ಷ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಕಾರ್ಯಕ್ರಮ ನಿರೂಪಣೆ ಮಾಡಿದ ಸಿದ್ದರಾಜು ಅವರು ಚಾರ್ಲ್ಸ್ ಬೆಬೇಜ್ ಅವರ ಕಿರುಪರಿಚಯದ ಮಾಹಿತಿ ನೀಡಿದರು. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಶಶಿಕುಮಾರ್, ತಾಲೂಕು ಯೋಜನಾಧಿಕಾರಿ ರಂಗಸ್ವಾಮಿ, ಸಹಾಯಕ ಲೆಕ್ಕಾಧಿಕಾರಿಗಳು, ಪಿಡಿಒಗಳು, ಕಾರ್ಯದರ್ಶಿ ಗಳು, ಲೆಕ್ಕ ಸಹಾಯಕರು, ಮ-ನರೇಗ ಯೋಜನೆಯ ತಾಂತ್ರಿಕ ಸಹಾಯಕರು, ಗ್ರಾಪಂ ಹಾಗೂ ತಾಪಂ ಸಿಬ್ಬಂದಿ ಇದ್ದರು.