ಟಿಎಪಿಸಿಎಸ್ ಚುನಾವಣೆ ಮುಂಬರುವ ಜಿಪಂ, ತಾಪಂ, ನಗರಸಭೆ ಮತ್ತು ಗ್ರಾಪಂ ಚುನಾವಣೆಗಳಿಗೆ ಮೆಟ್ಟಿಲಾಗಿದೆ. ಕಾರ್ಯಕರ್ತರಿಗೆ ಶಕ್ತಿ ತುಂಬಿರುವ ಶಾಸಕ ಕೆ.ಎಂ.ಉದಯ್ ಅವರ ಅಭಿವೃದ್ದಿ ಕಾರ್ಯಗಳ ಪರಿಗಣನೆ ಮೂಲಕ ಮತದಾರರನ್ನು ಮನವೊಲಿಸುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ(ಟಿಎಪಿಸಿಎಂಎಸ್) ಚುನಾವಣೆ ಸಂಬಂಧ ನಗರದ ಶಿವಪುರದ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆಯಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಚುನಾಯಿತ ಸದಸ್ಯರ ಸಭೆ ನಡೆಯಿತು.

ಸಭೆಯಲ್ಲಿ ಬಹುತೇಕ ಮುಖಂಡರು ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಮಾತನಾಡಿ, ಸೆ.23 ರಂದು ನಡೆಯುವ ಟಿಎಂಪಿಸಿಎಂಎಸ್ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ, ಅಗತ್ಯ ಸಿದ್ಧತೆ ಕುರಿತಾಗಿ ಚರ್ಚಿಸಲಾಯಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕರದ ತಾಲೂಕು ಅಧ್ಯಕ್ಷ ಬಿ.ಬಸವರಾಜು ಮಾತನಾಡಿ, ಟಿಎಪಿಸಿಎಸ್ ಚುನಾವಣೆ ಮುಂಬರುವ ಜಿಪಂ, ತಾಪಂ, ನಗರಸಭೆ ಮತ್ತು ಗ್ರಾಪಂ ಚುನಾವಣೆಗಳಿಗೆ ಮೆಟ್ಟಿಲಾಗಿದೆ. ಕಾರ್ಯಕರ್ತರಿಗೆ ಶಕ್ತಿ ತುಂಬಿರುವ ಶಾಸಕ ಕೆ.ಎಂ.ಉದಯ್ ಅವರ ಅಭಿವೃದ್ದಿ ಕಾರ್ಯಗಳ ಪರಿಗಣನೆ ಮೂಲಕ ಮತದಾರರನ್ನು ಮನವೊಲಿಸುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕು ಎಂದರು.

ಶಾಸಕ ಕೆ.ಎಂ.ಉದಯ್ ಮಾತನಾಡಿ, ಮುಂದಿನ ಚುನಾವಣೆಗಳಲ್ಲಿ ಪ್ರತಿಯೊಬ್ಬರಿಗೂ ಪಕ್ಷದಲ್ಲಿ ಅವಕಾಶ, ಹಿರಿಯ-ಕಿರಿಯ ಕಾರ್ಯಕರ್ತರಿಗೆ, ಮುಖಂಡರಿಗೆ ಜವಾಬ್ದಾರಿಗಳು ತಾನಾಗಿಯೇ ಒದಗಿ ಬರಲಿವೆ. ಚುನಾವಣೆಯಲ್ಲಿ ಟಿಕಿಟ್ ಸಿಗಲಿ, ಸಿಗದಿರಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಶಕ್ತಿ ತುಂಬುವಂತೆ ಮನವಿ ಮಾಡಿದರು.

ಗಣೇಶೋತ್ಸವ, ಸಾಹಿತ್ಯ ಸಮ್ಮೇಳನ ಆಯೋಜನೆ

ಸೆ.14 ರಿಂದ ಒಂದು ವಾರಗಳ ಕಾಲ ನಗರದ ಸರಕಾರಿ ಕ್ರೀಡಾಂಗಣದಲ್ಲಿ ಮದ್ದೂರು ಗಣೇಶೋತ್ಸವವನ್ನು ಆಯೋಜಿಸಲಾಗಿದೆ.

ಸೆ.17 ರಂದು ಮದ್ದೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನು ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರುವುದು, ವಿವಿಧ ಗೋಷ್ಠಿಗಳು, ಸಮಾರೋಪ ಮತ್ತು ಯಕ್ಷಗಾನ ಕಾರ್ಯಕ್ರಮ ಜೊತೆಗೆ ದಿನವಿಡಿ ಪಾಲ್ಗೊಳ್ಳುವ ಕನ್ನಡಭಿಮಾನಿಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆ ಲಘು ಉಪಹಾರ, ವಿಘ್ನೇಶ್ವರನಿಗೆ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಆಯೋಜಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಸಂಬಂಧ ಈಗಾಗಲೇ ಪ್ರವಾಸಿ ಮಂದಿರ ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ಪೇಟೆಬೀದಿಯನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮನ್ಮುಲ್ ಅಧ್ಯಕ್ಷ ಹರೀಶ್‌ಬಾಬು ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ ಮಾತನಾಡಿದರು. ಮಹಿಳಾ ಕಾಂಗ್ರೆಸ್ ತಾಲೂಕು ಅಧ್ಯಕ್ಷೆ ಮಮತಾ ಶಂಕರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಲುವರಾಜು, ಅಣ್ಣೂರು ರಾಜೀವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗಿಗೌಡ, ಮನ್ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಎಸ್‌ಸಿ.ಎಸ್‌ಟಿ. ವಿಭಾಗದ ತಾಲೂಕು ಅಧ್ಯಕ್ಷ ಮಹದೇವಯ್ಯ ಇತರರಿದ್ದರು.