ತರಳಬಾಳು ಹುಣ್ಣಿಮೆ: ಅಡ್ಡಪಲ್ಲಕ್ಕಿ ಉತ್ಸವ ಬೇಡವೆಂದ ಶ್ರೀ

| Published : Feb 09 2024, 01:45 AM IST

ಸಾರಾಂಶ

೧೯೫೦ ರಿಂದ ಆರಂಭಗೊಂಡ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆ ಸಂದರ್ಭದಲ್ಲಿ ನಡೆಯುವ ಅಡ್ಡಪಲ್ಲಕ್ಕಿ ಉತ್ಸವ ಭಕ್ತರಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಪಲ್ಲಕ್ಕಿಯಲ್ಲಿ ಕುಳಿತ ಶ್ರೀಗಳ ಮೆರವಣಿಗೆಯನ್ನು ಕಣ್ಣುತುಂಬಿಕೊಂಡು ಭಾವಪರವಶರಾಗುತ್ತಿದ್ದ ಭಕ್ತರಿಗೆ ಈ ಬಾರಿ ನಿರಾಶೆಯಾದಂತಾಗಿದೆ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಅಡ್ಡಪಲ್ಲಕ್ಕಿ ಉತ್ಸವವನ್ನು ಈ ಬಾರಿ ಹಮ್ಮಿಕೊಳ್ಳದೇ ಇರುವಂತೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕರ್ತರಿಗೆ ಸೂಚಿಸಿದರು.

ಗುರುವಾರ ಸಂಜೆ ಮಠದ ನ್ಯಾಯಪೀಠದ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಬೆಳ್ಳಿಪಲ್ಲಕ್ಕಿಯಲ್ಲಿ ಶ್ರೀಗಳವರು ಆಸೀನರಾಗಿರುವ ಉತ್ಸವವನ್ನು ಕಣ್ಣುತುಂಬಿಕೊಳ್ಳುವುದು ಭಕ್ತರಿಗೆ ಸಿಗುವ ಸದಾವಕಾಶ. ಅದನ್ನು ಪರಂಪರೆಯಂತೆ ನಡೆಸಲು ಅನುವು ಮಾಡಿಕೊಡಬೇಕೆಂದು ಕಾರ್ಯಕರ್ತರು ಇರಿಸಿದ ಬೇಡಿಕೆ ನಿರಾಕರಿಸಿದ ಶ್ರೀಗಳು ಅಡ್ಡಪಲ್ಲಕ್ಕಿ ಉತ್ಸವ ಬೇಡ, ಬದಲಿಗೆ ಹುಣ್ಣಿಮೆ ಆಚರಣೆ ಕೊನೆಯ ದಿನದಂದು ತೆರೆದ ವಾಹನದಲ್ಲಿ ಸಿರಿಗೆರೆ ಬೀದಿಗಳಲ್ಲಿ ಯಾತ್ರೆ ನಡೆಸುವುದಾಗಿ ತಿಳಿಸಿದರು.

೧೯೫೦ ರಿಂದ ಆರಂಭಗೊಂಡ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆ ಸಂದರ್ಭದಲ್ಲಿ ನಡೆಯುವ ಅಡ್ಡಪಲ್ಲಕ್ಕಿ ಉತ್ಸವ ಭಕ್ತರಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಪಲ್ಲಕ್ಕಿಯಲ್ಲಿ ಕುಳಿತ ಶ್ರೀಗಳ ಮೆರವಣಿಗೆಯನ್ನು ಕಣ್ಣುತುಂಬಿಕೊಂಡು ಭಾವಪರವಶರಾಗುತ್ತಿದ್ದ ಭಕ್ತರಿಗೆ ಈ ಬಾರಿ ನಿರಾಶೆಯಾದಂತಾಗಿದೆ.

೩ ದಿನ ಆಚರಣೆ:

ಸಂಪ್ರದಾಯದಂತೆ ಹುಣ್ಣಿಮೆ ಮಹೋತ್ಸವವು ೯ ದಿನಗಳ ಕಾಲ ನಡೆಯಬೇಕಿತ್ತು. ಈ ವರ್ಷ ಬರದ ಛಾಯೆ ಆವರಿಸಿರುವುದರಿಂದ ೯ ದಿನಗಳ ಸಡಗರದ ಆಚರಣೆ ರದ್ದುಪಡಿಸಿ, ಫೆ.೨೨ರಿಂದ ೨೪ರ ವರೆಗೆ ಕೇವಲ ಮೂರು ದಿನಗಳ ಕಾಲ ಸರಳವಾಗಿ ಸಿರಿಗೆರೆಯಲ್ಲಿ ಆಚರಿಸಲಾಗುತ್ತಿದೆ. ಹುಣ್ಣಿಮೆ ಆಚರಣೆ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ, ಮಹಿಳಾ ಗೋಷ್ಠಿ, ವಿಜ್ಞಾನ ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು. ರಾಜ್ಯದ ಹಲವು ಕಡೆಯಿಂದ ಅತಿಥಿ ಗಣ್ಯರನ್ನು ಆಹ್ವಾನಿಸಲಾಗುವುದು. ಹಲವು ಜನಪ್ರತಿನಿಧಿಗಳೂ ಹುಣ್ಣಿಮೆಯಲ್ಲಿ ಪಾಲುಗೊಳ್ಳುವರು.

ದಾಸೋಹ:

ಹುಣ್ಣಿಮೆ ಮಹೋತ್ಸವ ಸಂದರ್ಭದಲ್ಲಿ ಮಠಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಅದಕ್ಕಾಗಿ ವಿಶಾಲ ದಾಸೋಹ ಮಂಟಪವನ್ನು ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿರ್ಮಿಸಲಾಗುವುದು ಎಂದು ಪ್ರಕಟಿಸಲಾಯಿತು. ಆಚರಣೆ ಯಶಸ್ಸಿಗೆ ಶ್ರಮಿಸಲು ಹಲವು ಸಮಿತಿ ರಚಿಸಲಾಯಿತು.

ತರಳಬಾಳು ಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಜತ್ತಿ, ಭರಮಸಾಗರ ಕೆರೆ ಹೋರಾಟ ಸಮಿತಿ ಚೌಲಿಹಳ್ಳಿ ಶಶಿ ಪಾಟೀಲ್‌, ಸಿ.ಆರ್.‌ ನಾಗರಾಜ್‌, ಓಬವ್ವನಾಗತಿಹಳ್ಳಿ ಮಂಜುನಾಥ್‌, ಇಂಜಿನಿಯರ್‌ ಮನೋಜ್‌ ಕುಮಾರ್‌, ಸಂಸ್ಥೆಯ ಇಂಜಿನಿಯರ್‌ ರವಿಕುಮಾರ್‌, ರಾಜು ಮುಂತಾದವರು ಭಾಗವಹಿಸಿದ್ದರು.