ಸಾರಾಂಶ
ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಗೊರುಚ ಹೇಳಿಕೆ
ಕನ್ನಡಪ್ರಭ ವಾರ್ತೆ ಸಿರಿಗೆರೆ
ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆ ತರಳಬಾಳು ಮಠದ ಆಚರಣೆಯಾಗಿದ್ದರೂ ಅದು ಯಾವುದೇ ಪದ್ಧತಿಗಳ ಆಚರಣೆ ಮಾಡುವುದಿಲ್ಲ. ಅದು ಸರ್ವರನ್ನೂ ಒಳಗೊಳ್ಳುವ ಚಿಂತನೆಗಳಿಗೆ ತೆರೆದುಕೊಳ್ಳುತ್ತದೆ ಎಂದು ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಹೇಳಿದರು.ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಬಾರಿಯ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ದೇಶದ ಹಲವು ರಾಜ್ಯಗಳಿಂದ ಪ್ರಾತಿನಿಧಿಕವಾದ ವಿದ್ವಾಂಸರು ಭಾಗವಹಿಸುತ್ತಿದ್ದಾರೆ. ಜಗತ್ತಿನ ಹಲವು ರಾಷ್ಟ್ರಗಳಿಂದಲೂ ವಿಜ್ಞಾನಿಗಳು, ಚಿಂತಕರು ಆಗಮಿಸುತ್ತಿದ್ದಾರೆ. ಹೀಗಾಗಿ ಹುಣ್ಣಿಮೆಗೆ ಜಾಗತಿಕ ಹಬ್ಬದ ರೂಪ ಬಂದಿದೆ ಎಂದರು.ಇದು ತರಳಬಾಳು ಪೀಠದ ಕಾರ್ಯಕ್ರಮವಾಗಿದ್ದರೂ ಇದರಲ್ಲಿ ಸಾಹಿತಿಗಳು, ವಿಜ್ಞಾನಿಗಳು, ಕಲಾವಿದರು, ರಾಜಕಾರಣಿಗಳು ಭಾಗವಹಿಸುತ್ತಿರುವುದರಿಂದ ಇದಕ್ಕೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಹತ್ವ ದೊರೆತಿದೆ. ಇದೊಂದು ಮಾದರಿ ಕಾರ್ಯಕ್ರಮ, ಶಿಸ್ತಿನ ಆಚರಣೆ ಎಂಬುದು ಮನೆಮಾತಾಗಿದೆ ಎಂದು ಹೇಳಿದರು.
ನಮ್ಮ ಚಿಂತನೆಗಳು ಸಮಾಜವನ್ನು ಒಗ್ಗೂಡಿಸಲು ಇರಬೇಕೇ ಹೊರತು ವಿಘಟನೆಗೆ ಅವಕಾಶವಾಗಬಾರದು. ಸಮಾಜದಲ್ಲಿ ಸಂಘರ್ಷಕ್ಕೆ ಅವಕಾಶ ಆಗಬಾರದು ಎಂದು ಕಿವಿ ಮಾತು ಹೇಳಿದರು. ನನ್ನಲ್ಲಿ ಏನೂ ಇಲ್ಲದಿರುವ ಕಾಲಘಟ್ಟ 1945ರಲ್ಲಿ ಹಿರಿಯ ಗುರುಗಳು ಬೀರೂರಿನಲ್ಲಿ ಉಚಿತ ಪ್ರಸಾದ ನಿಲಯ ಆರಂಭಿಸಿದರು. ಅವರ ಆಶೀರ್ವಾದದ ಫಲವೇ ನನ್ನ ಬೆಳವಣಿಗೆ ಎಂದು ಪೂಜ್ಯ ಶ್ರೀಗಳನ್ನು ನೆನೆದರು.ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗೊ.ರು.ಚ ಅವರು ಕನ್ನಡ ಸಾಹಿತ್ಯ ಮತ್ತು ಶರಣ ಸಾಹಿತ್ಯಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಹಿರಿಯ ಗುರುಗಳ ಕಾಲದಿಂದಲೂ ಮಠದ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದವರು. ಅವರ ವ್ಯಕ್ತಿತ್ವದ ಛಾಯೆ ಈಗಿನ ಎಳೆಯ ಮಕ್ಕಳಿಗೆ ಆಗಬೇಕು ಎಂದು ನುಡಿದರು.