ಮುಚ್ಚುವ ಭೀತಿಯಲ್ಲಿ ತಾರಾನಾಥ ಕಾಲೇಜಿನ ಫಿಜಿಯೋಥೆರಪಿ, ನ್ಯಾಚರೋಪತಿ ವಿಭಾಗ!

| Published : Jul 04 2025, 11:53 PM IST

ಮುಚ್ಚುವ ಭೀತಿಯಲ್ಲಿ ತಾರಾನಾಥ ಕಾಲೇಜಿನ ಫಿಜಿಯೋಥೆರಪಿ, ನ್ಯಾಚರೋಪತಿ ವಿಭಾಗ!
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆ ಸೇರಿದಂತೆ ನೆರೆ ಆಂಧ್ರ, ತೆಲಂಗಾಣ ರಾಜ್ಯಗಳಿಂದ ಆಯುರ್ವೇದ ಚಿಕಿತ್ಸೆಗೆಂದು ಬರುವವರಿಗೆ ವರವಾಗಿ ಪರಿಣಮಿಸಿದ್ದ ಇಲ್ಲಿನ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಫಿಜಿಯೋಥೆರಪಿ ಹಾಗೂ ನ್ಯಾಚರೋಪತಿ ವಿಭಾಗಗಳು ಬಂದ್ ಆಗುವ ಭೀತಿ ಎದುರಾಗಿದೆ.

ಕಾರ್ಯನಿರ್ವಹಿಸುತ್ತಿದ್ದ ವೈದ್ಯಾಧಿಕಾರಿಗಳ ವರ್ಗಾವಣೆ

ಎರಡುವರೆ ದಶಕಗಳಿಂದ ನ್ಯಾಚರೋಪತಿ ಹಾಗೂ ಯೋಗಚಿಕಿತ್ಸಕರ ಹುದ್ದೆ ಖಾಲಿ

ಮಂಜುನಾಥ ಕೆ.ಎಂ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆ ಸೇರಿದಂತೆ ನೆರೆ ಆಂಧ್ರ, ತೆಲಂಗಾಣ ರಾಜ್ಯಗಳಿಂದ ಆಯುರ್ವೇದ ಚಿಕಿತ್ಸೆಗೆಂದು ಬರುವವರಿಗೆ ವರವಾಗಿ ಪರಿಣಮಿಸಿದ್ದ ಇಲ್ಲಿನ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಫಿಜಿಯೋಥೆರಪಿ ಹಾಗೂ ನ್ಯಾಚರೋಪತಿ ವಿಭಾಗಗಳು ಬಂದ್ ಆಗುವ ಭೀತಿ ಎದುರಾಗಿದೆ.

ಈ ಎರಡು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯಾಧಿಕಾರಿಗಳನ್ನು ಬೇರೆಡೆ ವರ್ಗಾವಣೆಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಇಬ್ಬರು ವೈದ್ಯಾಧಿಕಾರಿಗಳು ಬೇರೆಡೆ ನಿಯೋಜನೆಗೊಂಡಲ್ಲಿ ತಾರಾನಾಥ ಆಯುರ್ವೇದ ಕಾಲೇಜಿನ ಎರಡು ಪ್ರಮುಖ ವಿಭಾಗಗಳು ಮುಚ್ಚುವ ಸಾಧ್ಯತೆಯಿದ್ದು, ಇದರಿಂದ ಆಯುರ್ವೇದ ಚಿಕಿತ್ಸೆ ಬಯಸಿ ಬರುವವರಿಗೆ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.

ಡಿಎಂಎಫ್‌ನಿಂದ ₹25 ಲಕ್ಷ ಮೌಲ್ಯದ ಉಪಕರಣ ಖರೀದಿ:

ಕಳೆದ ಎರಡುವರೆ ದಶಕಗಳಿಂದ ನ್ಯಾಚರೋಪತಿ ಹಾಗೂ ಯೋಗಚಿಕಿತ್ಸಕರ ಹುದ್ದೆ ಖಾಲಿ ಇದ್ದವು. ಎರಡುವರೆ ವರ್ಷಗಳ ಹಿಂದೆ ಈ ಎರಡು ವಿಭಾಗಕ್ಕೆ ವೈದ್ಯರು ನೇಮಕವಾದ ಬಳಿಕ ಜಿಲ್ಲಾ ಖನಿಜನಿಧಿಯಿಂದ (ಡಿಎಂಎಫ್‌) ₹25 ಲಕ್ಷ ಖರ್ಚು ಮಾಡಿ ಫಿಜಿಯೋಥೆರಪಿ ಸಂಬಂಧಿ ಉಪಕರಣಗಳನ್ನು ಖರೀದಿಸಿ, ಫಿಜಿಯೋಥೆರಪಿ ವಿಭಾಗವನ್ನು ಅಗತ್ಯ ಸೌಕರ್ಯಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಪ್ರತಿ ತಿಂಗಳು 300ರಿಂದ 400 ಜನ ರೋಗಿಗಳು ಫಿಜಿಯೋಥೆರಪಿ ಚಿಕಿತ್ಸೆ ಪಡೆಯುತ್ತಾರೆ. ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳ ಖರೀದಿಯಿಂದಾಗಿ ಚಿಕಿತ್ಸೆಯ ಗುಣಮಟ್ಟ ಮತ್ತಷ್ಟೂ ಸುಧಾರಿತ ಕಂಡು ಬಂದಿದ್ದು, ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ರೋಗಿಗಳ ಸಂಖ್ಯೆಯಲ್ಲಿಯೇ ಏರಿಕೆಯಾಗಿದೆ. ಫಿಜಿಯೋಥೆರಪಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಹಾಗೂ ಬಳ್ಳಾರಿ ಮೆಡಿಕಲ್ ಕಾಲೇಜಿನಿಂದ ಸಹ ಹೆಚ್ಚುವರಿ ಚಿಕಿತ್ಸೆಗೆ ತಾರಾನಾಥ ಆಯುರ್ವೇದ ಕಾಲೇಜಿಗೆ ಕಳಿಸಿಕೊಡಲಾಗುತ್ತದೆ. ಅಷ್ಟರ ಮಟ್ಟಿಗೆ ಈ ಎರಡು ವಿಭಾಗಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪಂಚಕರ್ಮ ಚಿಕಿತ್ಸೆಯ ಜೊತೆಗೆ ಫಿಜಿಯೋಥೆರಪಿ ಚಿಕಿತ್ಸೆ ಪಡೆದರೆ ಮತ್ತಷ್ಟೂ ಉತ್ತಮ ಫಲಿತಾಂಶ ಬರುವುದರಿಂದ ರೋಗಿಗಳು ಅತಿಬೇಗ ಗುಣಮುಖರಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆಯುರ್ವೇದ ಚಿಕಿತ್ಸೆಯತ್ತ ವಾಲುತ್ತಿರುವ ರೋಗಿಗಳ ಪ್ರಮಾಣವೂ ಸಹ ದಾಖಲಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ.

ಚಿಕಿತ್ಸೆಗಾಗಿ ಮತ್ತೆ ಅಲೆದಾಡುವ ಸ್ಥಿತಿ ನಿರ್ಮಾಣ?:

ಇದೀಗ ವರ್ಗಾವಣೆಗೊಂಡಿರುವ ಇಬ್ಬರು ವೈದ್ಯರು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಬಿಎನ್‌ವೈಎಸ್ ಶಿಕ್ಷಣ ಪಡೆದು ಬಳ್ಳಾರಿ ತಾರಾನಾಥ ಕಾಲೇಜಿಗೆ ನೇಮಕಗೊಂಡಿದ್ದರಿಂದ ಸ್ಥಳೀಯವಾಗಿಯೇ ಗುಣಮಟ್ಟದ ನ್ಯಾಚರೋಪಥಿ ಹಾಗೂ ಯೋಗ ಚಿಕಿತ್ಸೆಯ ಪಡೆಯುತ್ತಿರುವ ನಡುವೆಯೇ ಕಡ್ಡಾಯ ಗ್ರಾಮೀಣ ಸೇವೆ ಹಿನ್ನೆಲೆ ಇಬ್ಬರು ವೈದ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸರ್ಕಾರ ಆದೇಶ ಬರುತ್ತಿದ್ದಂತೆಯೇ ಈ ಇಬ್ಬರು ವೈದ್ಯಾಧಿಕಾರಿಗಳನ್ನು ಬಿಡುಗಡೆಗೊಳಿಸಿದಲ್ಲಿ ಆಸ್ಪತ್ರೆಯಲ್ಲಿನ ಈ ಎರಡು ವಿಭಾಗಗಳ ಗತಿ ಏನು? ಪ್ರತಿ ತಿಂಗಳು ಚಿಕಿತ್ಸೆ ಪಡೆಯುತ್ತಿದ್ದ ನೂರಾರು ರೋಗಿಗಳು ಮತ್ತೆಲ್ಲಿಗೆ ಚಿಕಿತ್ಸೆಗೆ ಅಲೆದಾಡಬೇಕು ಎಂಬ ಪ್ರಶ್ನೆ ಎದುರಾಗಿದೆಯಲ್ಲದೆ, ಜಿಲ್ಲಾ ಖನಿಜನಿಧಿಯಿಂದ ಖರೀದಿಸಿದ ಲಕ್ಷಾಂತರ ರು. ಮೌಲ್ಯದ ಉಪಕರಣಗಳು ಮೂಲೆ ಸೇರುವ ಆತಂಕವೂ ಮೂಡಿದೆ. ಆಸ್ಪತ್ರೆಯ ಆವರಣದಲ್ಲಿ ನ್ಯಾಚರೋಪತಿ ಕೇಂದ್ರವನ್ನು ಆರಂಭಿಸುವ ಸಂಬಂಧ ಕಟ್ಟಡ ಕಾಮಗಾರಿಯೂ ಸಹ ನಡೆದಿದ್ದು, ಸೂಕ್ತ ವೈದ್ಯರಿಲ್ಲದೆ ನಿರುಪಯುಕ್ತವಾಗುವ ಸಾಧ್ಯತೆಯೂ ದಟ್ಟವಾಗಿದೆ. ಆಯುರ್ವೇದ ಕಾಲೇಜಿನಿಂದ ಇಬ್ಬರು ವೈದ್ಯಾಧಿಕಾರಿಗಳನ್ನು ವರ್ಗಾವಣೆಗೆ ತೋರಿಸಿದ ಇಚ್ಛಾಶಕ್ತಿಯನ್ನು ಬೇರೆಯವರನ್ನು ನಿಯೋಜಿಸಿ, ಪರ್ಯಾಯ ವ್ಯವಸ್ಥೆ ಮಾಡುವ ವಿಚಾರದಲ್ಲಿ ಆಸ್ಥೆ ವಹಿಸದಿರುವುದು ನಾನಾ ಸಮಸ್ಯೆಗಳಿಗೆ ಆಸ್ಪದ ಒದಗಿಸಿದೆ. ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಕಾಲೇಜಿನ ಸಮಸ್ಯೆಗಳತ್ತ ಕೂಡಲೇ ಇಣುಕಿ ಹಾಕಬೇಕಾದ ಅಗತ್ಯವಿದೆ. ಮೂಲೆ ಸೇರಿದ ಎಕ್ಸ್‌-ರೇ ಯಂತ್ರ ಕುರಿತ ಕೆಪಿ ವರದಿ; ಕಾಲೇಜಿಗೆ ಭೇಟಿ ಪರಿಶೀಲನೆ

ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಮೂಲೆ ಸೇರಿದ ಎಕ್ಸ್‌-ರೇ ಯಂತ್ರ ಕುರಿತು "ಕನ್ನಡಪ್ರಭ "ದಲ್ಲಿ ಪ್ರಕಟಗೊಂಡ ವರದಿ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಾರಾನಾಥ ಕಾಲೇಜಿಗೆ ಶುಕ್ರವಾರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ವರದಿ ಪ್ರಕಟಗೊಂಡಿದ್ದರಿಂದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಜಿಲ್ಲಾ ಆರೋಗ್ಯ ಅಧಿಕಾರಿಗೆ ವರದಿ ನೀಡುವಂತೆ ಸೂಚಿಸಿದ್ದು, ಡಿಎಚ್‌ಒ ಕಚೇರಿಯ ಬಯೋಮೆಡಿಕಲ್ ಎಂಜಿನಿಯರ್ ರೊಬ್ಬರು ಕಾಲೇಜಿಗೆ ಶುಕ್ರವಾರ ಭೇಟಿ ನೀಡಿ ಕಾಲೇಜಿನ ಪ್ರಾಂಶುಪಾಲರು ಹಾಗೂ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಿದ್ದಾರೆ.