ಸಿಬ್ಬಂದಿ ಕೊರತೆ ಸೇರಿದಂತೆ ನಾನಾ ಸಮಸ್ಯೆಗಳ ತೊಳಲಾಟ ಎದುರಿಸುತ್ತಿರುವ ಇಲ್ಲಿನ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನ ಆಸ್ಪತ್ರೆಯಲ್ಲಿ ಔಷಧಿಗೂ ಬರ ಬಂದಿದೆ.

ಮಂಜುನಾಥ ಕೆ.ಎಂ.

 ಬಳ್ಳಾರಿ : ಸಿಬ್ಬಂದಿ ಕೊರತೆ ಸೇರಿದಂತೆ ನಾನಾ ಸಮಸ್ಯೆಗಳ ತೊಳಲಾಟ ಎದುರಿಸುತ್ತಿರುವ ಇಲ್ಲಿನ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನ ಆಸ್ಪತ್ರೆಯಲ್ಲಿ ಔಷಧಿಗೂ ಬರ ಬಂದಿದೆ!

ಬೇಡಿಕೆಯಷ್ಟು ಔಷಧಿ ಖರೀದಿಗೆ ಸರ್ಕಾರ ಅನುದಾನ ನೀಡುತ್ತಿಲ್ಲವಾದ್ದರಿಂದ ಆಸ್ಪತ್ರೆಗೆ ಬರುವ ಹೊರ ರೋಗಿಗಳು ಹಾಗೂ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗುವವರು ಅನಿವಾರ್ಯವಾಗಿ ಖಾಸಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ಔಷಧಿ ಖರೀದಿಸುವಂತಾಗಿದೆ.

ಏತನ್ಮಧ್ಯೆ ಆಸ್ಪತ್ರೆಯಲ್ಲಿ ಔಷಧಿಯ ಕೊರತೆಯನ್ನೇ ನೆಪವಾಗಿಸಿಕೊಂಡಿರುವ ಆಸ್ಪತ್ರೆಯ ಕೆಲ ವೈದ್ಯರು ಖಾಸಗಿ ಮೆಡಿಕಲ್ ಸ್ಟೋರ್ ಗಳ ಮಾಲೀಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ. ಇದನ್ನು ಗಮನಿಸಬೇಕಾದ ಕಾಲೇಜಿನ ಆಡಳಿತ ವ್ಯವಸ್ಥೆ ಮೌನ ವಹಿಸಿರುವುದು ಕೆಲ ವೈದ್ಯರಿಗೆ ಅನುಕೂಲಕರ ವಾತಾವರಣ ಕಲ್ಪಿಸಿದಂತಾಗಿದೆ. ಕೆಲ ವೈದ್ಯರು ಖಾಸಗಿ ಮೆಡಿಕಲ್ ಸ್ಟೋರ್‌ಗಳಿಂದಲೇ ನಿತ್ಯ ಸಾವಿರಾರು ರು. ಹಣ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಆಸ್ಪತ್ರೆಯ ಆವರಣದಲ್ಲಿಯೇ ಕೇಳಿ ಬರುತ್ತಿದ್ದು ಕಾಲೇಜಿನ ಆಸ್ಪತ್ರೆಯ ಮಾನ ಬೀದಿಗೆ ಬಂದಂತಾಗಿದೆ.

ಔಷಧಿ ಖರೀದಿಗೆ ಹಣ ಸೀಮಿತ- ಔಷಧಿ ಕೊರತೆ ಸಮಸ್ಯೆ ಹೆಚ್ಚಳ:

ಬಳ್ಳಾರಿಯ ತಾರಾನಾಥ ಆಯುರ್ವೇದ ಕಾಲೇಜಿನ ಆಸ್ಪತ್ರೆಗೆ ವಾರ್ಷಿಕ ಸುಮಾರು ₹90ರಿಂದ 95 ಲಕ್ಷಗಳಷ್ಟು ಔಷಧಿ ಖರೀದಿಗೆ ಹಣ ಬೇಕು. ರಾಜ್ಯ ಸರ್ಕಾರ ವಾರ್ಷಿಕ ₹30 ಲಕ್ಷ ಹಾಗೂ ಕೇಂದ್ರ ಸರ್ಕಾರದ ಆಯುಷ್‌ ನ್ಯಾಷನಲ್ ಮಿಷನ್‌ನಿಂದ ₹15 ಲಕ್ಷ ಸೇರಿದಂತೆ ₹45 ಲಕ್ಷಗಳಷ್ಟು ಔಷಧಿ ಖರೀದಿಗೆ ಹಣ ಬರುತ್ತದೆ. ಅಂದರೆ ಸುಮಾರು ₹50 ಲಕ್ಷಗಳಷ್ಟು ಕೊರತೆಯಾಗುತ್ತದೆ. ಅಚ್ಚರಿ ಸಂಗತಿ ಎಂದರೆ ಸುಮಾರು 20 ವರ್ಷಗಳ ಹಿಂದೆ ಔಷಧಿ ಖರೀದಿಗೆ ನೀಡುವಷ್ಟೇ ಹಣವನ್ನು ಈಗಲೂ ಮುಂದುವರಿಸಲಾಗಿದೆ.

 20 ವರ್ಷಗಳ ಹಿಂದೆ ದಿನಕ್ಕೆ 100ರಿಂದ 120 ಜನರು ಹೊರ ರೋಗಿಗಳು ಹಾಗೂ ಆಸ್ಪತ್ರೆಗೆ ದಾಖಲಾಗುವವರು ಇರುತ್ತಿದ್ದರು. ಆದರೆ, ಇದೀಗ ಆಸ್ಪತ್ರೆಯ ಹೊರ ರೋಗಿಗಳ ಸಂಖ್ಯೆಯೇ ದಿನಕ್ಕೆ 350ರಿಂದ 400 ರಷ್ಟಿದೆ. ಸುದೀರ್ಘ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯೂ ಗಮನಾರ್ಹ ಏರಿಕೆಯಾಗಿದೆ. ಆದರೆ, ಔಷಧಿ ಖರೀದಿಗೆ ಅಗತ್ಯದಷ್ಟು ಹಣ ನೀಡದಿರುವುದರಿಂದ ಅನಿವಾರ್ಯವಾಗಿ ಅಗತ್ಯ ಔಷಧಿಗಳ ಪಟ್ಟಿಯಂತೆ (ಇಡಿಎಲ್‌) ಪ್ರತಿವರ್ಷವೂ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ನಾನಾ ಕಾಯಿಲೆಯಿಂದ ಬಳಲಿ ಆಯುರ್ವೇದದ ವಿವಿಧ ವಿಭಾಗಗಳಿಗೆ ಬರುವ ರೋಗಿಗಳಿಗೆ ಬೇಕಾದ ಔಷಧಿ ದೊರೆಯದಿರುವುದರಿಂದ ಖಾಸಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ಖರೀದಿಸದೆ ಬೇರೆ ದಾರಿ ಇಲ್ಲ ಎಂಬಂತಾಗಿದೆ. ಆಸ್ಪತ್ರೆಯಲ್ಲಿನ ಔಷಧಿ ಕೊರತೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವೈದ್ಯರು ಖಾಸಗಿ ಮೆಡಿಕಲ್ ಸ್ಟೋರ್‌ಗಳ ಜೊತೆ ಕೊಡು-ಕೊಳ್ಳುವಿಕೆಯ ವ್ಯವಹಾರ ಇರಿಸಿಕೊಂಡಿದ್ದಾರೆ ಎಂಬ ಆರೋಪಗಳಿದ್ದು, ಕಾಲೇಜಿನ ಆಡಳಿತ ವ್ಯವಸ್ಥೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಾಗಿದೆ.

ಲ್ಯಾಬ್-ಎಂಆರ್‌ಐ ಸ್ಕ್ಯಾನ್ ಗೆ ಕಳಿಸುವ ವೈದ್ಯರು!:

ಬಳ್ಳಾರಿ ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜಿನ ಆಸ್ಪತ್ರೆಯಲ್ಲಿ ಔಷಧಿ ಕೊರತೆಯಿಂದಾಗಿ ಹೊರಗಡೆ ಔಷಧಿ ಬರೆದುಕೊಡುವ ಸಂಪ್ರದಾಯ ಹೆಚ್ಚಾಗುತ್ತಿದ್ದಂತೆಯೇ ಆಸ್ಪತ್ರೆ ಸುತ್ತಮುತ್ತ ಆಯುರ್ವೇದ ಔಷಧಿ ಅಂಗಡಿಗಳು ತಲೆ ಎತ್ತಿವೆ. ಆಸ್ಪತ್ರೆಗೆ ಬರುವ ರೋಗಿಗಳ ಸ್ಥಿತಿಗತಿಯನ್ನು ನೋಡಿ ವಿನಾಕಾರಣ ಲ್ಯಾಬ್ ಟೆಸ್ಟ್‌ ಹಾಗೂ ಎಂಆರ್‌ಐ ಸ್ಕ್ಯಾನ್ ಮಾಡಿಸುವ ಪರಿಪಾಠ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಲ್ಯಾಬ್‌ ಗೆ ಹಾಗೂ ಎಂಆರ್‌ಐ ಸ್ಕ್ಯಾನಿಂಗ್ ಕಳಿಸಿಕೊಟ್ಟರೆ ಇಂತಿಷ್ಟೆಂದು ಕಮಿಷನ್ ದೊರೆಯುತ್ತಿದ್ದು, ಕಮಿಷನ್ ಆಸೆಗೆ ವಿನಾಕಾರಣ ಲ್ಯಾಬ್ ಹಾಗೂ ಸ್ಕ್ಯಾನಿಂಗ್ ಕಳಿಸಿಕೊಡಲಾಗುತ್ತದೆ. ಕೆಲ ವೈದ್ಯರು ಆಸ್ಪತ್ರೆಯಲ್ಲಿ ಲ್ಯಾಬ್ ಇದ್ದರೂ ಹೊರಗಡೆ ಕಳಿಸಿಕೊಡುತ್ತಿದ್ದಾರೆ ಎಂಬ ದೂರುಗಳು ದಟ್ಟವಾಗಿದ್ದು, ರೋಗಿಗಳ ಹಿತದೃಷ್ಟಿಯಿಂದ ಕೂಡಲೇ ಇದಕ್ಕೆ ಕಡಿವಾಣ ಬೀಳಬೇಕಾದ ಅಗತ್ಯವಿದೆ.