ಸಾರಾಂಶ
ತಾಲೂಕಿನ ಅರ್ಹ ಬಡ ಫಲಾನುಭವಿಗಳಿಗೆ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ 2800 ನಿವೇಶನ ವಿತರಣೆ ಮಾಡುವ ಗುರಿಯಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ.ರವರು ತಿಳಿಸಿದರು.
ಕನ್ನಡಪ್ರಭವಾರ್ತೆ ಪಾವಗಡ
ತಾಲೂಕಿನ ಅರ್ಹ ಬಡ ಫಲಾನುಭವಿಗಳಿಗೆ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ 2800 ನಿವೇಶನ ವಿತರಣೆ ಮಾಡುವ ಗುರಿಯಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ.ರವರು ತಿಳಿಸಿದರು.ಸೋಮವಾರ ಜಿಪಂ ಸಿಇಒ ಪ್ರಭು ಜಿ.ಅವರು ಪಾವಗಡಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಇದಾದ ಬಳಿಕ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮನೆಮನೆಗೆ ತುಂಗಭದ್ರಾ ಕುಡಿಯುವ ನೀರು ಸರಬರಾಜ್ ಕಾರ್ಯಕ್ರಮ ಹಿನ್ನಲೆಯಲ್ಲಿ 2025ರ ಜ.20ಕ್ಕೆ ಸಿಎಂ ಸಿದ್ದರಾಮಯ್ಯ ಇತರೆ ಸಚಿವರು ಪಾವಗಡಕ್ಕೆ ಆಗಮಿಸುವ ನಿರೀಕ್ಷೆ ಇದೆ. ತಾಲೂಕಿನಲ್ಲಿ ನಿವೇಶನ ರಹಿತರಿಗೆ 2800ರಿಂದ 3000ಸಾವಿರ ನಿವೇಶನ ವಿತರಿಸುವ ಗುರಿ ಹೊಂದಿದೆ.ಈಗಾಗಲೇ ಕೆಲವು ಖಾಲಿ ನಿವೇಶನವನ್ನು ಸಮತಟ್ಟು ಮಾಡಿಸಿ ಅದನ್ನು ಸೈಟ್ ಫಾರ್ಮೇಶನ್ ಮಾಡಲಾಗಿದೆ. ಈ ಸೈಟ್ ವಿತರಣೆಯೂ ಪಾರದರ್ಶಕತೆಯಿಂದ ಕೂಡಿರಬೇಕು.ಆಯ್ಕೆಯ ಪ್ರಕ್ರಿಯೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಯೊಬ್ಬರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸದಸ್ಯರನ್ನಾಗಿ ನೇಮಕಗೊಳಿಸಿ ನಿವೇಶನ ಆಯ್ಕೆಯ ಪ್ರಕ್ರಿಯೆ ನಡೆಸಲಾಗುತ್ತಿದೆ. ಆ ಸಭೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗುವುದು. ಇದರ ಮೂಲ ಗುರಿ ನಿಜವಾದ ಅರ್ಹ ಫಲಾನುಭವಿಗಳಿಗೆ ನಿವೇಶನವನ್ನು ಒದಗಿಸುವುದಾಗಿದೆ.ಬಳಿಕ ತಾಲೂಕಿನ ನಡೆದಿರುವ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸಿರಬೇಕು.ಕಾಮಗಾರಿಗಳು ಸೂಕ್ತವಾಗಿರದಿದ್ದರೆ ಕಾಮಗಾರಿಯ ಬಿಲ್ಲು ತಡೆಗೆ ನಿರ್ಧಾಕ್ಷಣ್ಯ ಕ್ರಮವಹಿಸುವುದಾಗಿ ಅವರು ಹೇಳಿದರು.ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಉತ್ತಮ ಕಾಮಗಾರಿಗಳನ್ನು ಮಾಡುವವರಿಗೆ ಸಕಾಲದಲ್ಲಿ ಬಿಲ್ ಗಳನ್ನು ಪಾವತಿಸಲಾಗುವುದು.ಕಾಮಗರಿಗಳನ್ನು ಸೂಕ್ತ ವಾಗಿ ಅನುಷ್ಠಾನ ಮಾಡಲು ವಿಫಲರಾದರೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೂಲಿ ಆಧಾರಿತ ನರೇಗಾ ಕಾಮಗಾರಿ ನಿರ್ವಹಿಸುವಲ್ಲಿ ಜಿಲ್ಲೆಯಲ್ಲಿ ಪಾವಗಡ ತಾಲೂಕು ಮೊದಲ ಸ್ಥಾನದಲ್ಲಿದೆ.ಇದೇ ಮಾದರಿಯನ್ನು ನಾವು ಮಧುಗಿರಿ, ಶಿರಾ,ಕೊರಟಗೆರೆ ತಾಲೂಕುಗಳಿಗೆ ವಿಸ್ತರಣೆ ಮಾಡಲಾಗಿದೆ. ಈ ರೀತಿಯಲ್ಲಿ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡುವುದರಿಂದ ಗ್ರಾಮ ಪಂಚಾಯತಿಗಳಲ್ಲಿ ಹೆಚ್ಚು ಮೂಲ ಸೌಕರ್ಯಗಳನ್ನು ಸೃಜನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಈ ವೇಳೆ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಸಂಜೀವಪ್ಪ, ಮುಖ್ಯ ಕಾರ್ಯಪಾಲಕ ಅಭಿಯಂತರರು ಕುಮಾರಸ್ವಾಮೀಜಿ,ತಾಪಂ ಇಒ ಜಾನಕಿರಾಯ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಿಡಿಒಗಳಾದ ರಂಗದಾಮ್,ಪಳವಳ್ಳಿ ಹನುಮರಾಜ್ ,ಕಾಮನದುರ್ಗ ಚನ್ನಯ್ಯ,ಬಿ.ಕೆ.ಹಳ್ಳಿ ಮುತ್ಯಾಲಪ್ಪ,ಕೆ.ಟಿ.ಹಳ್ಳಿ ಮಂಜುನಾಥ್ ಹಾಗೂ ಇತರೆ ತಾಲೂಕಿನ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಪಂ ಕಚೇರಿಯ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.