ಸಾರಾಂಶ
ಮುಂದಿನ 2030ರ ಹೊತ್ತಿಗೆ ನಗರದಲ್ಲಿ ಜನತೆ ಶೇ.70ರಷ್ಟು ಸಮೂಹ ಸಾರಿಗೆ ವ್ಯವಸ್ಥೆ ಬಳಸುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಂದಿನ 2030ರ ಹೊತ್ತಿಗೆ ನಗರದಲ್ಲಿ ಜನತೆ ಶೇ.70ರಷ್ಟು ಸಮೂಹ ಸಾರಿಗೆ ವ್ಯವಸ್ಥೆ ಬಳಸುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಗುರುವಾರ ನಗರದಲ್ಲಿ ಪ್ರಯಾಣಿಕರು ಒಂದೇ ವೇದಿಕೆ ಬಳಸಿಕೊಂಡು ಮೆಟ್ರೋ, ಬಸ್ ಕೊನೆಯ ಮೈಲಿ ಪ್ರಯಾಣ ಯೋಜಿಸಲು ಮತ್ತು ಪೂರ್ಣಗೊಳಿಸಲು ಅನುವು ವಾಡಿಕೊಡುವ ‘ಎನ್ರೂಟ್ ಎ ಮೊಬಿಲಿಟಿ ಆ್ಯಸ್ ಎ ಸರ್ವೀಸ್’ ಅಪ್ಲಿಕೇಶನ್ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಬೆಂಗಳೂರು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ನಗರಗಳಲ್ಲಿ ಒಂದು. ನಗರದಲ್ಲಿರುವ ಸಾರ್ವಜನಿಕರಿಗೆ ಪ್ರಯಾಣಿಸಲು ಎನ್ರೂಟ್ ಸಹಕಾರಿಯಾಗಲಿದೆ. ಸಮೂಹ ಸಾರಿಗೆ ಬಲವರ್ದನೆ ಆದಷ್ಟು ನಗರದ ಟ್ರಾಫಿಕ್ ಸಮಸ್ಯೆ ತಪ್ಪಲಿದೆ ಎಂದರು.ಬಿಎಂಟಿಸಿ, ಬಿಎಂಆರ್‌ಸಿಎಲ್ ಸಂಸ್ಥೆಗಳ ಪ್ರಯಾಣಿಕರು, ಅವರ ಕೊನೆ ಮೈಲಿ ಸಂಪರ್ಕ ಮಾಹಿತಿ ಪಡೆದು ಈ ಆ್ಯಪ್ ರೂಪಿಸಲಾಗಿದೆ. ಮರ್ಸಿಡಿಸ್ ಬೆಂಜ್ ಸಂಶೋಧನೆ ಮತ್ತು ಅಭಿವೃದ್ಧಿ ಭಾರತ (ಎಂಬಿಆರ್‌ಡಿಐ), ಡಬ್ಲ್ಯೂಆರ್‌ಐ ಇಂಡಿಯಾ ಮತ್ತು ವೀಲ್‌ಗ್ರೋ ಸಂಸ್ಥೆಯ ಸಹಯೋದಲ್ಲಿ ‘ಎನ್ರೂಟ್ : ಎ ಮೊಬಿಲಿಟಿ ಆ್ಯಸ್ ಎ ಸರ್ವೀಸ್’ ಅಭಿವೃದ್ದಿಪಡಿಸಲಾಗಿದೆ. ಟುಮ್ಯಾಕ್ ಮತ್ತು ನಮ್ಮ ಯಾತ್ರಿ ಬಳಕೆದಾರರಿಗೆ ಮೆಟ್ರೋ ಮತ್ತು ಬಸ್ ಸಮಯ ಪರಿಶೀಲಿಸಲು, ಪ್ರಯಾಣದ ಅವಧಿ ನೋಡಲು ಮತ್ತು ಹತ್ತಿರದ ನಿಲ್ದಾಣಗಳನ್ನು ಸುಲಭವಾಗಿ ಹುಡುಕಲು ಅವಕಾಶ ನೀಡುತ್ತದೆ. ಪ್ರಯಾಣಿಕರು ಈ ಆ್ಯಪ್ ಮೂಲಕ ಮೊದಲ ಮತ್ತು ಕೊನೆಯ ಮೈಲಿ ಆಟೋ ಸವಾರಿ ಬುಕ್ ಮಾಡಬಹುದು.