ಸಾರಾಂಶ
- ಮಲೆನಾಡು ಹೆಬ್ಬಾಗಿಲು ತರೀಕೆರೆಯಲ್ಲಿ 3, 4 ಮತ್ತು 5 ರ ವರೆಗೆ ಪ್ರಸಿದ್ಧ ದೇಶೀ ಕುಸ್ತಿ ಕ್ರೀಡೆ
ಅನಂತ ನಾಡಿಗ್ ಕನ್ನಡಪ್ರಭ ವಾರ್ತೆ, ತರೀಕೆರೆಶ್ರೀ ಆಯುಧ ಪೂಜೆ, ಶ್ರೀ ವಿಜಯದಶಮಿ ಸೇರದಂತೆ ನಾಡಹಬ್ಬ ದಸರಾದ ಸಾಲು ಸಾಲು ಹಬ್ಬದ ದಿನಗಳು ಬಂತೆಂದರೆ ತರೀಕೆರೆ ಪಟ್ಟಣದ ಜನತೆಗೆ ಸಡಗರವೋ ಸಡಗರ.
ತಳಿರು ತೋರಣಗಳಿಂದ ಬಣ್ಣ ಬಣ್ಣದ ಬಂಟಿಂಗ್ಸ್ ಗಳಿಂದ, ಪ್ರಕಾಶಮಾನವಾದ ಮಿನಿ ವಿದ್ಯುತ್ ದೀಪಗಳಿಂದ ಇಡೀ ತರೀಕೆರೆ ಪಟ್ಟಣ ಅಲಂಕೃತಗೊಳ್ಳುತ್ತದೆ. ಕಾರಣ ಈ ಹಬ್ಬದಲ್ಲಿ ಊರಿನ ಗ್ರಾಮ ದೇವತೆಗಳಿಗೆ ಪ್ರತಿನಿತ್ಯ ವಿಶೇಷ ಅಲಂಕಾರ, ಪೂಜೆ, ಶ್ರೀ ವಿಜಯದಶಮಿಯಂದು ಶ್ರದ್ಧಾ ಭಕ್ತಿಯಿಂದ ಅದ್ಧೂರಿ ಮೆರವಣಿಗೆ, ಅಂಬು ಹೊಡೆಯುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತದೆ.ನಾಡಹಬ್ಬಕ್ಕೆ ಮೆರಗು ನೀಡುವಂತೆ ತರೀಕೆರೆಯಲ್ಲಿ ಯುವ ಕ್ರೀಡಾಭಿಮಾನಿಗಳ ಅಚ್ಚುಮೆಚ್ಚಿನ ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ, ಪುರಸಭೆ, ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಎಲ್ಲಾ ಸಮಾಜಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಅ.3, 4 ಮತ್ತು 5 ರಂದು ನಡೆಯಲಿರುವ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ಪಿ ಸ್ಪರ್ಧೆಗಳು ರಾಜ್ಯಾದ್ಯಂತ ಪ್ರಖ್ಯಾತಿ ಗಳಿಸಿದೆ.
ತರೀಕೆರೆ ಅಖಾಡದಲ್ಲಿ ಸ್ಪರ್ಧಿ ಬಳಸುವ ಕುಸ್ತಿ ಪಟ್ಟುಗಳನ್ನು ಬಿಡಿಸಿಕೊಳ್ಳುವುದರಲ್ಲಿ ಪ್ರದರ್ಶಿಸುವ ಕೌಶಲ್ಯ ಮತ್ತು ಜಾಣ್ಮೆ ಗಳಿಂದಾಗಿ ಬಹಳ ಪ್ರಾಚೀನ ಕಾಲದ ಪ್ರಖ್ಯಾತಿ ಪಡೆದಿದೆ. ಮೈಸೂರಿನಲ್ಲಿ ನಡೆಯುವ ನಾಡಹಬ್ಬದ ದಸರಾ ಕುಸ್ತಿ ಪಂದ್ಯ ಗಳಷ್ಟೇ ತರೀಕೆರೆಯಲ್ಲಿ 3 ದಿನಗಳ ಕಾಲ ನಡೆಯುವ ಜಂಗಿ ಕುಸ್ತಿ ಪಂದ್ಯಗಳು ಶಿಸ್ತು ಮತ್ತು ನಿಯಮಬದ್ದವಾಗಿ ನಡೆದು ಅಖಾಡದಲ್ಲಿ ಹಿರಿಯ ಪೈಲ್ವಾನರು ನೀಡುವ ನ್ಯಾಯ ಸಮ್ಮತ ತೀರ್ಪಿನಿಂದ ಒಂದು ಪ್ರತಿಷ್ಠೆ ಕಣವೆಂದೇ ಪರಿಗಣಿಸಲಾಗುತ್ತದೆ.ಹಾಗಾಗಿ ತರೀಕೆರೆ ಮತ್ತು ಮೈಸೂರು ದಸರಾ, ರಾಜ್ಯ ಹೊರ ರಾಜ್ಯಗಳಿಂದ ಯುವ ಪೈಲ್ವಾನರಿಂದ ಹಿಡಿದು ಸಾಕಷ್ಟು ಅನುಭವ ಪಡೆದ ಕುಸ್ತಿ ಪಟುಗಳು, ಜಗಜಟ್ಟಿಗಳು, ಪ್ರಸಿದ್ಧ ಮಲ್ಲರು ಈ ಕುಸ್ತಿಯಲ್ಲಿ ಪಾಲ್ಗೊಳ್ಳುವುದೇ ಇಲ್ಲಿನ ವಿಶೇಷ.ಇಷ್ಟೊಂದು ವಿಶೇಷತೆ ಹೊಂದಿದ ತರೀಕೆರೆ ಅಖಾಡದ ಕುಸ್ತಿಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸುವುದೇ ಖುಷಿ. ಇನ್ನು ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸುವುದು ಅಂದರೆ ಅದೊಂದು ವಿಶೇಷವಾದ ಅನುಭವವೇ ಸರಿ. ರಾಜ ಮಹಾರಾಜರಿಂದ, ತರೀಕೆರೆ ವೀರ ಪಾಳೇಗಾರರು ಮತ್ತು ದಾನಿಗಳಾದ ಸರ್ಜಾ ಹನುಮಪ್ಪನಾಯಕರ ಕಾಲ ದಿಂದಲೂ ಪಟ್ಟಣದಲ್ಲಿ ನಿರಂತರವಾಗಿ ಅರಮನೆಯಿಂದ ಗುರುಮನೆ ತನಕ, ಜನರಿಂದ ಜನರಿಗೆ ಹರಡಿ ಬರುತ್ತಿರುವ ಕುಸ್ತಿ ಪಂದ್ಯಗಳಿಗೂ ತರೀಕೆರೆಗೂ ಅವಿನಾಭಾವ ಸಂಬಂಧ ಇದೆ. ಕುಸ್ತಿ ಪಟುಗಳಿಗೆ ಗರಡಿ ಮನೆಗಳು ದೇವರ ಮನೆ ಇದ್ದ ಹಾಗೆ. ಕಟ್ಟು ಮಸ್ತಾದ ಸದೃಢ ಸ್ನಾಯುಗಳು, ಫಳ ಫಳ ಹೊಳಯುವ ಭುಜ ತೋಳು ಗಳು, ನಿತ್ಯ ಕಸರತ್ತು ಮತ್ತು ವ್ಯಾಯಾಮಗಳಿಂದ ಮಿರಿ ಮಿರಿ ಮಿಂಚುವ ಶರೀರ, ತೇಜಸ್ಸಿನಿಂದ ಕೂಡಿದ ಮುಖ ಮತ್ತು ಕಣ್ಣುಗಳು ಕುಸ್ತಿ ಪಟುವಿನ ಈ ಸಹಜ ದೇಹದಾರ್ಡ್ಯ ಕ್ರೀಡಾಭಿಮಾನಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ.
ಗರಡಿ ಮನೆಯಲ್ಲಿ ಹಿರಿ-ಕಿರಿಯ ಪೈಲ್ವಾನರಿಗೆ ಕಲಿಸುವ ಕೈಸಾಮು, ಮೂಲೆ ಸಾಮು, ಉಟ್ ಬೈಸ್, ಗದೆ ತಿರುಗಿಸುವುದು, ಕುಸ್ತಿಯ ವಿವಿಧ ಉಪಾಯದ ಪಟ್ಟುಗಳನ್ನು ಬಿಡಿಸಿಕೊಳ್ಳುವ ರೀತಿ, ಇತ್ಯಾದಿ ತರಬೇತಿ ವಿವಿಧ ಆಯಾಮ ನೋಡುವುದೇ ಒಂದು ಸಂತೋಷ.ತರೀಕೆರೆ ಬಯಲು ರಂಗ ಮಂದಿರದ ವಿಶಾಲ ಮೈದಾನದಲ್ಲಿ ಕುಸ್ತಿಯನ್ನು ಸಾವಿರಾರು ಜನರು ಕುಳಿತು ವೀಕ್ಷಿಸಲು ಆಸನ ಗಳ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಲಿಸಲಾಗಿದೆ. ವಿದ್ಯುತ್ ದೀಪಗಳ ಹೊನಲು ಬೆಳಕಿನಲ್ಲಿ ಕುಸ್ತಿ ಪಂದ್ಯ ನಡೆಯುತ್ತದೆ.ತರೀಕೆರೆ ಪುರಸಭೆಯಿಂದ ಪ್ರತಿವರ್ಷ ನೀಡುವ ಪ್ರತಿಷ್ಠಿತ ಬೆಳ್ಳಿಗದೆ ಬಹುಮಾನ, ಪಾಳೇಗಾರರ ವಂಶಸ್ಥರು ನೀಡುವ ಬಂಗಾರದ ಬಳೆ ಹಾಗೂ ಬೆಳ್ಳಿ ಕಿರೀಟ ಬಹುಮಾನ ಸೇರಿ ಮತ್ತಿತರರ ಬಹುಮಾನಗಳನ್ನು ಗೆಲ್ಲಲು ನಾಡಿನ ಪ್ರತಿಷ್ಠಿತ ಕುಸ್ತಿ ಪಟುಗಳು ವಿವಿಧ ಪಂದ್ಯಗಳಲ್ಲಿ ಭಾಗವಹಿಸುತ್ತಾರೆ. ಇದನ್ನು ನೋಡಲು ಅಭಿಮಾನಿಗಳ ದಂಡೇ ನೆರೆಯುವುದು ಕುಸ್ತಿ ಕ್ರೀಡೆಗೆ ಇರುವ ಖ್ಯಾತಿಗೆ ಕನ್ನಡಿಯಾಗಿದೆ.-- ಕೋಟ್ಃ --ಮಲೆನಾಡ ಹೆಬ್ಬಾಗಿಲು ತರೀಕೆರೆಯಲ್ಲಿ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿರುವ ಬಯಲು ಜಂಗಿ ಕುಸ್ತಿ ಸ್ಪರ್ಧೆ ರಾಜ್ಯಾದ್ಯಂತ ಪ್ರಖ್ಯಾತಿ ಪಡೆದಿದೆ.ಅಖಾಡದಲ್ಲಿ ಕುಸ್ತಿ ಪಟುಗಳ ಪಟ್ಟುಗಳು ಹಾಗೂ ಕುಸ್ತಿ ಮಲ್ಲರು ಪಟ್ಟುಗಳನ್ನು ಬಿಡಿಸಿ ಕೊಳ್ಳಲು ತೋರಿಸುವ ಜಾಣ್ಮೆ, ಕೌಶಲ್ಯ ನೋಡಿಯೇ ಆನಂದಿಸಬೇಕು.
ತರೀಕೆರೆ ಕುಸ್ತಿ ಪಟುಗಳು ಪಂದ್ಯವನ್ನು ಒಂದು ತಪಸ್ಸಿನಂತೆ ಭಕ್ತಿಯಿಂದ ನೋಡುತ್ತಾರೆ. ಈ ಕುಸ್ತಿ ಅಖಾಡಕ್ಕೆ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಇಂತಹ ಐತಿಹಾಸಿಕ ಕುಸ್ತಿ ಕ್ರೀಡೆಯನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ- ವಗ್ಗಪ್ಪರ ಎಂ.ಮಂಜುನಾಥ್, ಗೌರವಾಧ್ಯಕ್ಷ
ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ-ಕುಸ್ತಿ ಕ್ರೀಡೆ ಯುವಕರನ್ನು ಆರೋಗ್ಯವಂತರನ್ನಾಗಿ ಸದೃಢ ಶರೀರ ಹೊಂದುವಂತೆ ಮಾಡುತ್ತದೆ. ಎಲ್ಲಾ ಸಮಾಜದವರ ಸಂಪೂರ್ಣ ಸಹಕಾರದಿಂದ ಆಯೋಜಿಸುವ ತರೀಕೆರೆ ಕುಸ್ತಿ ಪಂದ್ಯ ನ್ಯಾಯಸಮ್ಮತ ತೀರ್ಪಿನಿಂದ ಎಲ್ಲಡೆ ಪ್ರಸಿದ್ಧಿ ಪಡೆದಿದೆ. ತರೀಕೆರೆ ಪುರಸಭೆ ಪ್ರತಿವರ್ಷದಂತೆ ಬೆಳ್ಳಿಗದೆ ಬಹುಮಾನ ನೀಡುತ್ತಿದ್ದು ಬೆಳ್ಳಿಗದೆ ಕುಸ್ತಿ ಪಂದ್ಯ ರೋಚಕ ವಾಗಿರುತ್ತದೆ. ಕ್ರೀಡಾಭಿಮಾನಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಪಂದ್ಯಗಳಲ್ಲಿ ಭಾಗವಹಿಸಬೇಕು.
- ಟಿ.ಎಸ್.ರಮೇಶ್, ಅಧ್ಯಕ್ಷಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ
2ಕೆಟಿಆರ್.ಕೆ 10ಃತರೀಕೆರೆಯಲ್ಲಿ ರಾಜ್ಯ ಮಟ್ಟದ ಬಯಲು ಜಂಗೀ ಕುಸ್ತಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.( ಸಂಗ್ರಹ ಚಿತ್ರ)2ಕೆಟಿಾರ್.ಕೆ.11ಃ
ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಗೌರವಾಧ್ಯಕ್ಷ ವಗ್ಗಪ್ಪರ ಎಂ.ಮಂಜುನಾಥ್ 2ಕೆಟಿಆರ್.ಕೆ.12ಃಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಅಧ್ಯಕ್ಷ ಟಿ.ಎಸ್.ರಮೇಶ್