ಸಾರಾಂಶ
-ಎಲ್ಲೆಲ್ಲೂ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಡಗರ, ಸಂಭ್ರಮ ।
ಕನ್ನಡಪ್ರಭ ವಾರ್ತೆ, ತರೀಕೆರೆಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾರ್ಚ್ 7 ಮತ್ತು 8 ರಂದು ನಡೆಯಲಿರುವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಲೆನಾಡ ಹೆಬ್ಬಾಗಿಲು ತರೀಕೆರೆ ಪಟ್ಟಣದ ಬಯಲು ರಂಗ ಮಂದಿರ ಮಧುವಣಗಿತ್ತಿಯಂತೆ ಅಲಂಕೃತಗೊಂಡು ಸಾಹಿತ್ಯಾಸಕ್ತರನ್ನು ಕೈಬೀಸಿ ಸ್ವಾಗತಿಸುತ್ತಿದೆ.
ಸಾಹಿತ್ಯ ಸಮ್ಮೇಳನಕ್ಕೆ ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿದ್ದು, ಪಟ್ಟಣದ ತುಂಬೆಲ್ಲಾ ಸಮ್ಮೇಳನಕ್ಕೆತಳಿರು ತೋರಣ, ಸ್ವಾಗತ ಫಲಕಗಳು, ಫೆಕ್ಸ್, ಬಂಟಿಂಗ್ಸ್.ಗಳು ರಾರಾಜಿಸುತ್ತಿವೆ. ಸಾಹಿತ್ಯ ರಸದೌತಣ ಸವಿಯಲು ತರೀಕೆರೆ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸುವವರಿಗೆ ಸಮ್ಮೇಳನ ಕನ್ನಡ ನಾಡು ನುಡಿ, ಸಾಹಿತ್ಯದ ಸವಿಯನ್ನು ಹಂಚಲು ವಿವಿಧ ವೇದಿಕೆ ನಾಡಿನ ಸಾಹಿತಿಗಳು, ವಾಗ್ಮಿಗಳಿಂದ ನಡೆಯಲಿರುವ ಕಾರ್ಯಕ್ರಮಗಳು ಹಬ್ಬದ ವಾತಾವರಣವನ್ನೇ ಸೃಷ್ಟಿಸಿದೆ.ಜಾನಪದ ಕೋಗಿಲೆ ಶ್ರೀ ಕೆ.ಆರ್.ಲಿಂಗಪ್ಪ ಮಹಾ ಮಂಟಪ, ಶ್ರೀ ಎಚ್.ಚಂದ್ರಪ್ಪ ಮಹಾದ್ವಾರ, ಶ್ರೀ ತ.ಪು.ವೆಂಕಟರಾಂ ದ್ವಾರ ಹಾಗೂ ಶ್ರೀಮತಿ ಎಂ.ಕೆ. ಇಂದಿರಾ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಅತ್ಯಂತ ದೊಡ್ಡ ವಿಶಾಲವಾದ ವೇದಿಕೆ ಒಂದು ಬದಿಯಲ್ಲಿ ಕನ್ನಡದ ತಾಯಿ ಭುವನೇಶ್ವರಿ ಚಿತ್ರ ಮತ್ತೊಂದು ಬದಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಲಾಂಛನ ಅನಾವರಣಗೊಳ್ಳಲಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ವಿಜೇತರ ಭಾವಚಿತ್ರಗಳು ಮಹಾಮಂಟಪದ ಮುಂದೆ ಕನ್ನಡ ಸಾಹಿತ್ಯ ಲೋಕದ ಮಕುಟ ಮಣಿಯಂತೆ ರಾರಾಜಿಸಲಿದೆ. ಸಾಹಿತ್ಯಾಸಕ್ತರಿಗೆ ಪ್ರಮುಖವಾಗಿ ಹತ್ತಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು, 20ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು, ಹವ್ಯಾಸಿ ಚಿತ್ರಕಲಾವಿದರಿಂದ ಚಿತ್ರ ಕಲಾ ಪ್ರದರ್ಶನಗಳು ಸಮ್ಮೇಳನಕ್ಕೆ ಮೆರುಗು ನೀಡಿವೆ.
ತರೀಕೆರೆಯಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮಲ್ಲಿ ಹಬ್ಬದ ವಾತಾವರಣವನ್ನೇ ಮೂಡಿಸಿದೆ. ಸಾಹಿತ್ಯ ಜಾತ್ರೆಗೆ ಉದಯೋನ್ಮುಖ ಕವಿಗಳು ಬರಹಗಾರರು, ನಾಡಿನ ಸಾಹಿತಿಗಳು, ವಾಗ್ಮಿಗಳು ಕಳೆಕಟ್ಟುತ್ತಿರುವುದು ತುಂಬಾ ಸಂತೋಷದ ಸಂಗತಿ ಎಂದು ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು. ಈ ಸಮ್ಮೇಳನದಲ್ಲಿ 27ಕ್ಕೂ ಹೆಚ್ಚು ಸ್ಟಾಲ್ ಗಳ ಬೇಡಿಕೆ ಇದ್ದು ವ್ಯವಸ್ಥೆ ಮಾಡಲಾಗುತ್ತಿದೆ, ಚಿತ್ರಕಲೆ, ವಸ್ತು ಪ್ರದರ್ಶನ, ವಿವಿಧ ಸಂಘ-ಸಂಸ್ಥೆಗಳು ತಯಾರಿಸಿದ ಆಹಾರ ಮೇಳ, ವಿವಿಧ ಇಲಾಖೆಗಳ ವಿಶೇಷ ಪ್ರದರ್ಶನ ದೊಂದಿಗೆ ಇಡೀ ಜಿಲ್ಲೆಯ ಜನರು ಭಾಗವಹಿಸುತ್ತಿದ್ದು ಸಾಹಿತ್ಯ ಸಮ್ಮೇಳನಗಳು ತುಂಬಾ ಅರ್ಥಗರ್ಭಿತವಾಗಿ ನಡೆಸಲು ಮುಂದಾಗಿರುವುದು ನಮ್ಮ ಜಿಲ್ಲೆಯ ಹೆಮ್ಮೆಯ ವಿಚಾರ ಎಂದು ತಾ. ಕಸಾಪ ಅಧ್ಯಕ್ಷ ರವಿ ದಳವಾಯಿ ಅಭಿಪ್ರಾಯ ಪಟ್ಟರು.ನಮ್ಮೂರು ತರೀಕೆರೆ ಹಲವು ಪ್ರಥಮಗಳಿಗೆ ಹೆಸರುವಾಸಿಯಾಗಿದೆ. ತರೀಕೆರೆಯಲ್ಲಿ 1967ರಲ್ಲಿ ಜಾನಪದ ಸಮ್ಮೇಳನ ಆಯೋಜನೆಗೊಂಡು ಕವಿ ದ.ರಾ.ಬೇಂದ್ರೆ ಸಂಚರಿಸಿದ ಸ್ಥಳ ತರೀಕೆರೆ, ಇಡೀ ರಾಜ್ಯ ಮತ್ತು ರಾಷ್ಟ್ರದಲ್ಲಿ ಕುಸ್ತಿ ಸ್ಪರ್ಧೆಯಲ್ಲಿ 2ನೆ ಸ್ಥಾನದಲ್ಲಿ ನಿಂತಿರುವ ಈ ಊರು ನೆಲ, ಜಲ, ಸಾಹಿತ್ಯ, ಸಂಸ್ಕೃತಿ, ಜನಪದ ನಾಡು, ಕವಿಗಳ ನೆಲವೀಡಾಗಿದೆ. ಈ ಸಮ್ಮೇಳನಕ್ಕಾಗಿ ಇಡೀ ತರೀಕೆರೆ ಪಟ್ಟಣ ಸರ್ವಾಲಂಕೃತಗೊಂಡಿದೆ ಎಂದು ಕನ್ನಡಶ್ರೀ ಬಿ.ಎಸ್.ಭಗವಾನ್ ಹೇಳಿದರು.
ತರೀಕೆರೆ ಇತಿಹಾಸ ಪ್ರಸಿದ್ಧ ಭೂಮಿ ಕಲ್ಯಾಣದಿಂದ ಶರಣರು ತರೀಕೆರೆಗೆ ಬಂದು ಕಾಯಕ, ಅನ್ನದಾಸೋಹ, ಮಾನವ ಸಮಾಜ ಒಂದೇ ಎಂದು ಸಾರಿ, ಮೌಲ್ಯಯುತ ಬದುಕಿಗೆ ದಾರಿ ತೋರಿಸಿ ಐಕ್ಯರಾದ ನುಲಿಯಚಂದಯ್ಯ, ಶರಣೆ ಅಕ್ಕ ನಾಗಲಾಂಬಿಕೆಯಿಂದ ಖ್ಯಾತಿವೆತ್ತಿದೆ. ಇಂತಹ ಪವಿತ್ರ ಸ್ಥಳದಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 2 ನೇ ಬಾರಿಗೆ ಸಂಭ್ರಮದಿಂದ ನಡೆಯುತ್ತಿರುವುದು ಸಂತೋಷ ಎಂದು ಕನ್ನಡಶ್ರೀ ಬಿ.ಎಸ್.ಭಗವಾನ್ ತಿಳಿಸಿದ್ದಾರೆ.ತರೀಕೆರೆಯಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ನಾಡಿನ ಎಲ್ಲಾ ಗಣ್ಯರು ಸೇರಿ ಕನ್ನಡ ತೇರನ್ನು ಸಂಭ್ರಮದಿಂದ ಎಳೆಯುತ್ತಿರುವುದು ಈ ಕನ್ನಡ ಹಬ್ಬಕ್ಕೆ ಮರಗು ತಂದಿದೆ ಎಂದು ಲೇಖಕ ತ.ಮ.ದೇವಾನಂದ್ ತಿಳಿಸಿದ್ದಾರೆ.
ಜಿಲ್ಲೆಗೆ ಮಾದರಿಯಾಗುವಂತೆ ಪುಸ್ತಕ ಮಳಿಗೆಗಳು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದೆ ಎಂದು ಸಮಿತಿ ಅಧ್ಯಕ್ಷ ನವೀನ್ ಪೆನ್ನಯ್ಯ ತಿಳಿಸಿದ್ದಾರೆ.ಸಮ್ಮೇಳನದಲ್ಲಿ ವಿವಿಧ ಬಗೆಯ ತಿಂಡಿಗೂ ವ್ಯವಸ್ಥೆ ಮಾಡಲಾಗಿದ್ದು ಮಾ. 7 ರಂದು ಬೆಳಿಗ್ಗೆ ಟೋಮೋಟಾ ಬಾತ್, ಮಧ್ಯಾನ್ಹ ಗೋದಿ ಪಾಯಸ, ಹಪ್ಪಳ, ಉಪ್ಪಿನಕಾಯಿ, ಕೋಸಂಬರಿ, ಮಜ್ಜಿಗೆ, ಅನ್ನ, ಸಾಂಬಾರು, ಬಾಳೆಹಣ್ಣು, ರಾತ್ರಿ ಸಿಹಿ ಜೊತೆಗೆ ಅನ್ನ, ಸಾಂಬಾರು, ಹಪ್ಪಳ, ಮಜ್ಜಿಗೆ, ಉಪ್ಪಿನಕಾಯಿ, ಕೋಸಂಬರಿ, ಮಾ.8 ರಂದು, ಕೇಸರಿಬಾತು, ಉಪ್ಪಿಟ್ಟು, ಮಧ್ಯಾಹ್ನ ಶಾವಿಗೆ ಪಾಯಸ, ಅನ್ನ ಸಾಂಬಾರು, ಹಪ್ಪಳ ಕೋಸುಂಬರಿ ಮಜ್ಜಿಗೆ, ಬಾಳೆಹಣ್ಣು ಸಂಜೆ ಚುರುಮುರಿ, ಕಾಫಿ, ಟೀ, ಈರುಳ್ಳಿ ಬಜ್ಜಿ ಒದಗಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
-- ಬಾಕ್ಸ್ಸ--ಕನ್ನಡ ನುಡಿ ಸೇವೆಗಾಗಿ ದುಡಿಯೋಣಮಲೆನಾಡ ಹೆಬ್ಬಾಗಿಲು ಈ ನಮ್ಮ ತರೀಕೆರೆ, ವೀಳೆಯದಲೆ ಬೆಳೆಯುತ್ತಿರುವ ಈ ನಾಡಿನಲ್ಲಿ ಕನ್ನಡದ ಕಂಪು ಎಲ್ಲ ಕಡೆ ಪಸರಿಸುವಂತೆ ಮಾಡಿರುವುದು ಜಿಲ್ಲೆಯ ಎಲ್ಲ ಕನ್ನಡಾಭಿಮಾನಿಗಳಲ್ಲಿ ಸಂತೋಷ, ಸಡಗರವನ್ನು ತಂದಿದೆ. ಅನೇಕ ವರ್ಷಗಳ ನಂತರ ಜಿಲ್ಲಾ ಸಮ್ಮೇಳನ ನಡೆಸುವ ಸೌಭಾಗ್ಯ ನಮ್ಮ ತಾಲೂಕಿಗೆ ದೊರತಿದೆ. ಸಮ್ಮೇಳನಾಧ್ಯಕ್ಷನಾಗಿ ನನ್ನನ್ನು ಕೂರಿಸಿ ಅಪಾರ ವಿಶ್ವಾಸ ಗೌರವ ನೀಡಿರುವ ಸರ್ವರಿಗೂ ಕೃತಜ್ಞತೆಗಳು. ನಮ್ಮ ಸೇವೆಯನ್ನು ಕನ್ನಡ ನುಡಿಗಾಗಿ ಮುಡಿಪಾಗಿಟ್ಟು ದುಡಿಯೋಣ. ಮಕ್ಕಳಲ್ಲಿ ಹೆಚ್ಚು ಹೆಚ್ಚು ಕನ್ನಡ ಪದ ಬಳಕೆ ಪ್ರಾರಂಭದಲ್ಲೇ ಕಲಿಸಿ ಅದನ್ನು ಉಳಿಸುವ ಕಾರ್ಯ ಎಲ್ಲರಲ್ಲೂ ಬರಬೇಕು ಎಂದು ಸಮ್ಮೇಳಾಧ್ಯಕ್ಷ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಪ್ರತಿಪಾದಿಸಿದರು.6ಕೆಟಿಅರ್.ಕೆ.1ಃ 6ಕೆಟಿಆರ್.ಕೆ.2 ತರೀಕೆರೆಯಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣದ ಬಯಲು ರಂಗಮಂದಿರದಲ್ಲಿ ಸಜ್ಜುಗೊಂಡಿರುವ ಬೃಹತ್ ವೇದಿಕೆ ಅಲಂಕೃತಗೊಂಡ ವಿಶಾಲವಾದ ಚಪ್ಪರ.