ಸಾರಾಂಶ
- ಪ್ರಯಾಣಿಕರ ನಿರಿಕ್ಷಣಾ ಕೊಠಡಿ, ಪೊಲೀಸ್ ಔಟ್ ಸ್ಟೇಷನ್, ಲಿಫ್ಟ್ , ಹೆಚ್ಚುವರಿ ಟಿಕೆಟ್ ಕೌಂಟರ್ ಇಲ್ಲ । ಆಧುನಿಕ ಸೌಲಭ್ಯವಂತೂ ಮರೀಚಿಕೆ
ಅನಂತ ನಾಡಿಗ್ಕನ್ನಡಪ್ರಭ ವಾರ್ತೆ, ತರೀಕೆರೆ
ರಾಜ್ಯದ ನಾಲ್ಕು ದಿಕ್ಕುಗಳಿಂದ ವರ್ಷವಿಡೀ ಪ್ರವಾಸಿಗರಿಗೆ ರೈಲು ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ನಿಲ್ದಾಣವಾದ ತರೀಕೆರೆ ಹೆಸರಿಗೆ ಮಾತ್ರ ಪ್ರಮುಖವೆನಿಸಿ ಅಭಿವೃದ್ಧಿ ವಿಚಾರದಲ್ಲಿ ಅಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಿರ್ಲಕ್ಷಕ್ಕೆ ಒಳಗಾಗಿರುವುದು ಮಾತ್ರ ವಿಪರ್ಯಾಸವೇ ಸರಿ.ಬೆಂಗಳೂರು ತಾಳಗುಪ್ಪ ಮಾರ್ಗದಲ್ಲಿ ತರೀಕೆರೆ ಒಂದು ಪ್ರಮುಖ ರೈಲು ನಿಲ್ದಾಣ.ಅಭಯಾರಣ್ಯ, ಜಲಪಾತ, ಧಾರ್ಮಿಕ ಯಾತ್ರಾ ಸ್ಥಳ, ಜಂಗಲ್ ರೆಸಾರ್ಟ್ ಗಳಂತ ಪ್ರಮುಖ ಪ್ರವಾಸಿ ತಾಣ ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯ ಬಹುಮುಖ್ಯ ತಾಲುಕು ಕೇಂದ್ರದ ರೈಲು ನಿಲ್ದಾಣ.
ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟದ ವಿವಿಧ ಕಾಲೇಜು ಹಾಗೂ ಕ್ಯಾಂಪಸ್‌ಗಳು, ತರೀಕೆರೆ ಅಮೃತಾಪುರ, ಸೋಮಪುರ, ಅಕ್ಕನಾಗಮ್ಮ ಗದ್ದುಗೆ, ಕಲ್ಲತ್ತಿಗಿರಿ ಶ್ರೀ ವೀರಭದ್ರೇಶ್ವರಸ್ವಾಮಿ, ಶೃಂಗೇರಿ, ಬಾಳೆಹೊನ್ನೂರು, ಹರಿಹರಪುರ, ಖಾಂಡ್ಯ, ಇತ್ಯಾದಿ ಧಾರ್ಮಿಕ ಯಾತ್ರಾ ಸ್ಥಳ, ಜಿಲ್ಲೆಯ ಕೆಮ್ಮಣಗುಂಡಿ, ಲಕ್ಕವಳ್ಳಿ ಭದ್ರಾ ಅಭಯಾರಣ್ಯ, ಭದ್ರಾ ಹುಲಿಧಾಮ, ಭದ್ರಾ ಜಲಾಶಯ, ಜಂಗಲ್ ರೆಸಾರ್ಟ್, ಹೆಬ್ಬೆ ಜಲಪಾತ ಇತ್ಯಾದಿ ಪ್ರವಾಸಿ ತಾಣಗಳಿಗೆ ಸಂಪರ್ಕಿಸುವ ಈ ನಿಲ್ದಾಣಕ್ಕೆ ಹಲವಾರು ರೈಲುಗಳು ಬಂದು ಹೋಗುವುದಲ್ಲದೆ ಸಾವಿರಾರು ಪ್ರಯಾಣಿಕರಿಗೂ ಸಂಪರ್ಕ ಕೇಂದ್ರವಾಗಿದೆ.ಪ್ರಮುಖವಾಗಿ ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ, ಶಿವಮೊಗ್ಗ-ತಿರುಪತಿ, ಮೈಸೂರು-ಶಿವಮೊಗ್ಗ-ತಾಳಗುಪ್ಪ, ತುಮಕೂರು-ಶಿವಮೊಗ್ಗ, ಚಿಕ್ಕಮಗಳೂರು-ಶಿವಮೊಗ್ಗ ನಡುವೆ ತರೀಕೆರೆ ರೈಲು ನಿಲ್ದಾಣದ ಮೂಲಕ ಇಂಟರ್ ಸಿಟಿ, ಜನಶತಾಬ್ದಿ, ಎಕ್ಸ್ ಪ್ರೆಸ್ ರೈಲು, ಫಾಸ್ಟ್ ಎಕ್ಸ್ ಪ್ರೆಸ್ ಟ್ರೈನು, ಸ್ಥಳೀಯ ರೈಲು ಹೀಗೆ ಹಗಲು ರಾತ್ರಿ ಹಲವು ರೈಲುಗಳು ಸಂಚರಿಸುತ್ತಿದ್ದು ತರೀಕೆರೆ ರೈಲು ನಿಲ್ದಾಣದಿಂದ ದಿನನಿತ್ಯ ಸಾವಿರಾರು ಪ್ರಯಾಣಿಕರು ರಾಜ್ಯದ ಬೇರೆ ಬೇರೆ ನಗರ ಮತ್ತು ಪಟ್ಟಣಗಳಿಗೆ ಸಂಚರಿಸುತ್ತಾರೆ, ಸರಕು ಸಾಗಾಣಿಕೆಯಲ್ಲೂ ತರೀಕೆರೆ ರೈಲು ನಿಲ್ದಾಣ ಹೆಚ್ಚಿನ ವಹಿವಟು ನಡೆಸುತ್ತಿರುವುದು ಗಮನಾರ್ಹ.ಆದರೆ ಇಂತಹ ಪ್ರಮುಖ ತಾಣವಾದ ತರೀಕೆರೆ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಕಲ್ಲಿಸುವುದರಲ್ಲಿ ಹಿಂದೆ ಬಿದ್ದಿದೆ.
ಇಲಾಖೆ ರೈಲು ಪ್ರಯಾಣಿಕರಿಗಾಗಿ ಕೈಗೆಟುಕುವಂತಹ ಪ್ರಯಾಣ ದರ, ಸ್ವಚ್ಛ ರೈಲು ಬೋಗಿಗಳು, ಸುಖಾಸೀನ, ಸುಸಜ್ಜಿತ ಶೌಚಾಲಯ, ಇತ್ಯಾದಿಗಳನ್ನು ಕಲ್ಪಿಸಿಕೊಡುವಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದರೂ ತರೀಕೆರೆ ರೈಲು ನಿಲ್ದಾಣದಲ್ಲಿ ಮಾತ್ರ ಇಂತಹ ಉತ್ತಮ ವಾತಾವಣ ಕಲ್ಪಿಸದೇ ಇರುವುದು ದುರಂತ.ರಾಜ್ಯದ ಬೇರೆ ಬೇರೆ ರೈಲು ನಿಲ್ದಾಣಗಳು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅತ್ಯಾಧುನಿಕ ಹೊಸ ಬುಕ್ಕಿಂಗ್ ಕೌಂಟರ್ , ನಿಲ್ದಾಣದ ಕಚೇರಿ ಕಟ್ಟಡಕ್ಕೂ ಹೈಟೆಕ್ ಸ್ಪರ್ಷವಾಗಿದೆ. ವಿಶಾಲವಾದ ಫ್ಲಾಟ್ ಫಾರಂಗಳು, ಒಂದು ಫ್ಲಾಟ್ ಫಾರಂನಿಂದ ಮತ್ತೊಂದಕ್ಕೆ ಹೋಗಲು ಲಿಫ್ಟ್ , ರೈಲು ವೇಳೆ ನಿಖರ ಪ್ರಚಾರದ ಧ್ವನಿವರ್ಧಕಗಳು, ಪ್ರಯಾಣಿಕರ ಸುರಕ್ಷತೆಗೆ ಪೊಲೀಸ್ ಠಾಣೆ, ಹೀಗೆ ಎಲ್ಲ ರೀತಿಯಲ್ಲೂ ವ್ಯವಸ್ಥಿತವಾಗಿ ಸಜ್ಜುಗೊಂಡಿವೆ-ಸಜ್ಜುಗೊಳ್ಳುತ್ತಿವೆ.ತರೀಕೆರೆ ರೈಲು ನಿಲ್ದಾಣ ಮಾತ್ರ ಇದಕ್ಕೆ ತದ್ವಿರುದ್ಧ ಪ್ರಯಾಣಿಕರು ಒಂದು ಪ್ಲಾಟ್ ಫಾರಂನಿಂದ ಮತ್ತೊಂದು ಕ್ಕೆ ಹೋಗಲು ಮೆಟ್ಟಲುಗಳನ್ನೇ ಆಶ್ರಯಿಸಬೇಕಾಗಿದೆ. ವೃದ್ದರು, ವಯಸ್ಸಾದವರು, ಅಸಹಾಯಕರು, ವಿಶೇಷ ಚೇತನರು ಮತ್ತು ಮಕ್ಕಳಿಗೆ ಮೆಟ್ಟಿಲುಗಳನ್ನು ಹತ್ತಿ ಹೋಗಲು ಸಾಕಷ್ಟು ತೊಂದರೆಯಾಗಿದೆ. ಇಲ್ಲಿನ ರೈಲು ನಿಲ್ದಾಣಕ್ಕೆ ಲಿಫ್ಟ್ ಸೌಲಭ್ಯಅತ್ಯಗತ್ಯವಾಗಿದೆ. ತರೀಕೆರೆ ನಿಲ್ದಾಣ ದಿನದ 24 ಗಂಟೆಯೂ ಪ್ರಮುಖ ರೈಲುಗಳ ನಿಲ್ದಾಣವಾಗಿರುವುದರಿಂದ ಇಲ್ಲಿ ಕೆಲ ಸಮಯ ನಿಂತು ಹೊರಡುತ್ತವೆ. ಫ್ಲಾಟ್ ಫಾರಂಗಳು ಕೂಡ ಕೀಲೋ ಮೀಟರ್ ಗಳಷ್ಟು ದೂರವಿದ್ದು ಪ್ರಯಾಣಿಕರ ಸುರಕ್ಷತೆ ದೃಷ್ಠಿಯಿಂದ ರೈಲು ನಿಲ್ದಾಣಕ್ಕೆ ರೈಲ್ವೆ ಪೊಲೀಸ್ ಔಟ್ ಸ್ಟೇಷನ್ ಇಲ್ಲದೆಲಿರುವುದು ಪ್ರಮುಖ ಕೊರತೆಗಳಲ್ಲಿ ಒಂದಾಗಿದೆ. ಇದರೊಂದಿಗೆ ತರೀಕೆರೆ ರೈಲು ನಿಲ್ದಾಣ ಎಲ್ಲ ಅತ್ಯಾಧುನಿಕ ಸೌಲಭ್ಯಗಳಿಂದ ವಂಚಿತವಾಗಿದ್ದು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒತ್ತಾಯದಿಂದಲೇ ಅಂದರೆ ಅತ್ತೂ ಕರೆದು ಔತಣ ಮಾಡಿಸಿಕೊಳ್ಳುವಂತೆ ಪಡೆಯಬೇಕಾಗಿದೆ.
ಇಲ್ಲಗಳ ದೊಡ್ಡ ಪಟ್ಟಿಯೇ ಇಲ್ಲಿದೆಃಸ್ವಾತಂತ್ರ್ಯಪೂರ್ವದಲ್ಲಿ ರೈಲು ಮಾರ್ಗ ನಿರ್ಮಾಣವಾಗಿನ ಸಂದರ್ಘದ ಕಚೇರಿ ಕಟ್ಟಡ, ಬುಕ್ಕಿಂಗ್ ಕೌಂಟರ್ ಈಗಲೂ ಅಷ್ಟೆ ಹಳೆಯ ಕಾಲದಂತೆಯೇ ಇದೆ. ಸೌಲಭ್ಯವಂತೂ ಕೇಳಲೇ ಬೇಕಿಲ್ಲ. ಇನ್ನೂ ಪ್ರಯಾಣಿಕರ ನಿರೀಕ್ಷಣಾ ಕೋಣೆ, ರೈಲ್ವೆ ಸಿಬ್ಬಂದಿಗೆ ವಸತಿ ಸೌಕರ್ಯ ಇಲ್ಲವೆ ಇಲ್ಲ. ನಿಲ್ದಾಣದಲ್ಲಿ ಪೊಲೀಸ್ ಉಪಠಾಣೆ, ಪ್ರತ್ಯೇಕ ಟಿಕೆಟ್ ರಿಸರ್ವೇಶನ್ ಬುಕ್ಕಿಂಗ್ ಕೌಂಟರ್ ಸಹ ಇಲ್ಲ ಹೀಗೆ ಇಲ್ಲಗಳ ದೊಡ್ಡ ಪಟ್ಟಿಯೇ ತರೀಕೆರೆ ರೈಲು ನಿಲ್ದಾಣದಲ್ಲಿ ಕಾಣಸಿಗುತ್ತದೆ.ತರೀಕೆರೆ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಿಸಲು ಅನೇಕ ಬಾರಿ ಮನವಿ ಮಾಡಲಾಗಿದ್ದರೂ ಅಗತ್ಯವಾದ ಅಧುನಿಕ ಸೌಲಭ್ಯಗಳು ಮಾತ್ರ ಈ ನಿಲ್ದಾಣಕ್ಕೆ ಒದಗಿ ಬಂದಿಲ್ಲ ಎಂಬುದು ಮಾತ್ರ ನಿಲ್ದಾನ ನೋಡಿದ ಯಾರೋಬ್ಬರಾದರು ಹೇಳಬಹುದು. ತರೀಕೆರೆ ರೈಲು ನಿಲ್ದಾಣ ಎಲ್ಲಾ ಅತ್ಯಾಧುನಿಕ ಸೌಲಭ್ಯ ಒದಗಿದರೆ ಈ ಭಾಗದ ಪ್ರಯಾಣಿಕರಿಗೆ ಹಾಗೂ ಇಲ್ಲಿಗೆ ಬರುವವರಿಗೂ ಸಾಕಷ್ಟು ಉಪಯೋಗ ವಾಗಲಿದೆ ಎಂಬುದನ್ನು ಹೇಳುವ ಅಗತ್ಯವಿಲ್ಲ. ರಾಜ್ಯ ಪ್ರಮುಖ ಪ್ರವಾಸಿ ತಾಣವಾದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಸಹ ಹಲವು ಪ್ರಮುಖ ಸ್ಥಳಗಳ ಸನಿಹದಲ್ಲಿರುವುದರಿಂದ ಪ್ರವಾಸೋದ್ಯಮವನ್ನೂ ಉತ್ತೇಜಿಸಲು ಸಾಧ್ಯ ಎಂಬುದನ್ನು ಮರೆಯುವಂತಿಲ್ಲ.
ಇನ್ನಾದರೂ ರೈಲ್ವೆ ಇಲಾಖೆ ಮತ್ತು ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಇಲ್ಲಿನ ಕೊರತೆ ನೀಗಿಸಿ, ನಿಲ್ದಾಣಕ್ಕೆ ಅಗತ್ಯ ಸೌಲಭ್ಯಗಳ ಜತೆಗೆ ಆಧುನಿಕ ವ್ಯವಸ್ಥೆ ಕಲ್ಪಿಸಿದರೆ ಇಲ್ಲಿಗೆ ಬರುವ, ಇಲ್ಲಿಂದ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಅನುಕೂಲವಾಗುವ ಜತೆಗೆ ಜಿಲ್ಲೆ, ತಾಲೂಕಿನ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.-- ಕೋಟ್ಃ1--ರೈಲು ನಿಲ್ದಾಣದಲ್ಲಿ ಬೆಳಕಿನ ವ್ಯವಸ್ಥೆ, ನಿಲ್ದಾಣದ ಮುಂದೆ ವಿದ್ಯುತ್ ಲೈಟುಗಳ ಅಳವಡಿಸಿ ಪ್ರಯಾಣಿಕರ ಅನುಕೂಲ ಮಾಡಬೇಕದೆ. ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ತರೀಕೆರೆ ರೈಲು ನಿಲ್ದಾಣ ಅಧುನಿಕವಾಗಿ ಅಭಿವೃದ್ಧಿ ಪಡಿಸಬೇಕಿದೆ.
- ಟಿ.ಆರ್.ಶ್ರೀಧರ್ ಅಧ್ಯಕ್ಷ, ತರೀಕೆರೆ ಮನಸು ಪ್ರತಿಷ್ಠಾನ--ಕೋಟ್ಃ2--ಪ್ರಮುಖ ರೈಲುಗಳು ಸಂಚರಿಸುವ ತರೀಕೆರೆ ರೈಲು ನಿಲ್ದಾಣ ಅಧುನಿಕತೆಗೆ ತಕ್ಕಂತೆ ಅಭಿವೃದ್ಧಿಯಾಗಬೇಕು. ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು
ಎಚ್.ವಿ. ಸತ್ಯನಾರಾಯಣ್ , ಅಂಚೆ ಪ್ರತಿಷ್ಠಾನ , ತರೀಕೆರೆ16ಕೆಟಿಆರ್.ಕೆ.1ಃ ತರೀಕೆರೆ ರೈಲು ನಿಲ್ದಾಣ16ಕೆಟಿಆರ್.ಕೆ.2ಃ ಟಿ.ಆರ್.ಶ್ರೀಧರ್, ಅಧ್ಯಕ್ಷ ಮನಸು ಪ್ರತಿಷ್ಠಾನ ತರೀಕೆರೆ.16ಕೆಟಿಆರ್.ಕೆ.3ಃ ಹೆಚ್.ವಿ.ಸತ್ಯನಾರಾಯಣ್, ಅಂಚೆ ಪ್ರತಿಷ್ಟಾನ ತರೀಕೆರ