ಸಾರಾಂಶ
ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನ। ತರೀಕೆರೆ ತಾಪಂ ರಾಜ್ಯಮಟ್ಟದ ಪ್ರಶಸ್ತಿ
ಕನ್ನಡಪ್ರಭ ವಾರ್ತೆ, ತರೀಕೆರೆಮಹಾತ್ಮಗಾಂಧಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನ, ಅತಿ ಹೆಚ್ಚು ಮಾನವ ದಿನಗಳ ಸೃಜನೆ, ಹೆಚ್ಚು ಜನರಿಗೆ ಉದ್ಯೋಗ ನೀಡಿರುವುದನ್ನು ಪರಿಗಣಿಸಿ 2023-24 ನೇ ಸಾಲಿನ ಅತ್ಯುತ್ತಮ ತಾಲೂಕು ಪಂಚಾಯತಿ ಪುರಸ್ಕಾರ ತರೀಕೆರೆಗೆ ಮತ್ತು ಅತ್ಯುತ್ತಮ ಗ್ರಾಮ ಪಂಚಾಯ್ತಿ ಪುರಸ್ಕಾರ ಬರಗೇನಹಳ್ಳಿಗೆ ಲಭಿಸಿದೆ.ತರೀಕೆರೆ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಹಸಿರು ಗ್ರಾಮ ಅಭಿಯಾನ, ಜಲ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲ ಕಾಮಗಾರಿ ಅನುಷ್ಠಾನ, ಶಾಲಾ ಅಭಿವೃದ್ಧಿ ಕಾಮಗಾರಿಗಳು, ವೈಯಕ್ತಿಕ ಕಾಮಗಾರಿಗಳ ಅಭಿಯಾನ, ಅಮೃತಾ ಸರೋವರ ಕೆರೆ ಅಭಿವೃದ್ಧಿಯಂತಹ ಕೂಲಿ ಆಧಾರಿತ ಕಾಮಗಾರಿಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡಲಾಗಿದೆ. ಈ ಮೂಲಕ ಗ್ರಾಮೀಣರಿಗೆ ಅತಿ ಹೆಚ್ಚು ಉದ್ಯೋಗ ನೀಡಿ ಆಸರೆಯಾಗಿದೆ.
2023-24 ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತರೀಕೆರೆ ತಾಪಂ ₹21.12 ಕೋಟಿ ವೆಚ್ಚ ಮಾಡಿ, 393452 ಮಾನವ ದಿನಗಳ ಸೃಜಿಸಿ , 8114 ಕುಟುಂಬಗಳ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ತರೀಕೆರೆಯ ಬರಗೇನಹಳ್ಳಿ ಗ್ರಾಪಂ 2023-24 ನೇ ಸಾಲಿನಲ್ಲಿ 19305 ಮಾನವ ದಿನಗಳ ಸೃಜನೆ ಮತ್ತು ಸಮುದಾಯ ಆಸ್ತಿಗಳ ಸೃಜನೆಯಲ್ಲಿ ಮುಂಚೂಣಿಯಲ್ಲಿರುವ ಹಿನ್ನೆಲೆಯಲ್ಲಿ ಈ ಮನ್ನಣೆ ಸಿಕ್ಕಿದೆ.ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ನರೇಗಾ ಹಬ್ಬ-2025ದಲ್ಲಿ ತರೀಕೆರೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್. ದೇವಂದ್ರಪ್ಪ, ಸಹಾಯಕ ನಿರ್ದೇಶಕ ಸಿ. ಟಿ. ಯೋಗೀಶ್, ತರೀಕೆರೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾಗಿದ್ದ ಗೀತಾಶಂಕರ್, ಬರಗೇನಹಳ್ಳಿ ಗ್ರಾಪಂ ಅಧ್ಯಕ್ಷ ಮುನಿರಾಜು, ಪಿಡಿಒ ಚಂದ್ರಕಾಂತ್ ನಾಗರಾಳ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಶಾಸಕ ರಿಜ್ವಾನ್ ಅರ್ಷದ್, ಅಭಿವೃದ್ಧಿ ಆಯುಕ್ತ ಉಮಾ ಮಹಾದೇವನ್, ಅಪರ ಮುಖ್ಯ ಕಾರ್ಯದರ್ಶಿ (ಗ್ರಾಮೀಣಭಿವೃದ್ಧಿ) ಅಂಜುಮ್ ಪರ್ವೇಜ್, ಗ್ರಾಮೀಣಾಭಿವೃದ್ಧಿ ಆಯುಕ್ತ ಪವನ ಕುಮಾರ್ ಮಾಲಪಾಟಿ ಹಾಜರಿದ್ದರು.-- ಬಾಕ್ಸ್--
ಸಲಹೆ, ಮಾರ್ಗದರ್ಶಕ್ಕೆ ಧನ್ಯವಾದ:ದೇವಂದ್ರಪ್ಪಮಹಾತ್ಮಾಗಾಂಧಿನರೇಗಾ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಲು ಹಲವು ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಿ ರಾಜ್ಯ ಮಟ್ಟದ ನರೇಗಾ ಪ್ರಶಸ್ತಿ ದೊರೆಯಲು ಸಹಕರಿಸಿದ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಎಲ್ಲಾ ನರೇಗಾ ಸಿಬ್ಬಂದಿ, ಗ್ರಾಪಂ ಜನಪ್ರತಿನಿಧಿಗಳಿಗೂ ಧನ್ಯವಾದ ಸಲ್ಲಿಸುವುದಾಗಿ ಎಂದು ತರೀಕೆರೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್. ದೇವಂದ್ರಪ್ಪ ತಿಳಿಸಿದ್ದಾರೆ.
6ಕೆಟಿಆರ್.ಕೆ.4ಃತರೀಕೆರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಡಾ.ಆರ್.ದೇವೇಂದ್ರಪ್ಪ, ಸಹಾಯಕ ನಿರ್ದೇಶಕ ಸಿ.ಟಿ. ಯೋಗೀಶ್, ಕಾರ್ಯನಿರ್ವಹಣಾಧಿಕಾರಿ ಗೀತಾ ಶಂಕರ್ ಮತ್ತಿತರರು ಪ್ರಶಸ್ತಿ ಸ್ವೀಕರಿಸಿದರು.