ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಪ್ರಸಿದ್ಧ ಟಾಟಾ ಸಂಸ್ಥೆ ಕೊಡಗು ಸೇರಿದಂತೆ ಹಾಸನ, ಚಿಕ್ಕಮಗಳೂರು, ಪಕ್ಕದ ರಾಜ್ಯ ತಮಿಳುನಾಡು ಹಾಗೂ ಕೇರಳದಲ್ಲಿ ಸುಮಾರು 33 ಸಾವಿರ ಎಕರೆ ಪ್ರದೇಶವನ್ನು ಹೊಂದಿದ್ದು, ಕಾಫಿ ಹಾಗೂ ಚಹಾ ಬೆಳೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಸಾವಿರಾರು ಮಂದಿ ಟಾಟಾ ಸಂಸ್ಥೆಯ ಅಡಿಯಲ್ಲಿ ಕೆಲಸ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.
ಟಾಟಾ ಕಾಫಿ ಸಂಸ್ಥೆಯು ಟಾಟಾ ಸಮೂಹದ ಒಂದು ಭಾಗವಾಗಿದೆ. ಟಾಟಾ ಕಾಫಿ ವಿಶ್ವದ ಅತಿದೊಡ್ಡ ಸಮಗ್ರ ಕಾಫಿ ಕೃಷಿ ಮತ್ತು ಸಂಸ್ಕರಣಾ ಕಂಪನಿಗಳಲ್ಲಿ ಒಂದಾಗಿದೆ ಮತ್ತು ಭಾರತೀಯ ಮೂಲದ ಕಾಳುಮೆಣಸು ಉತ್ಪಾದಿಸುವ ಅತಿದೊಡ್ಡ ಸಂಸ್ಥೆಯಾಗಿದೆ.ಕನ್ಸಲ್ಡೆಂಟ್ ಕಾಫಿ ಸಂಸ್ಥೆಯೊಂದಿಗೆ 2000 ಇಸವಿಯಲ್ಲಿ ಕೊಡಗು ಸೇರಿದಂತೆ ಹಲವು ಕಡೆಗಳಲ್ಲಿದ್ದ ಕಾಫಿ ತೋಟವನ್ನು ಟಾಟಾ ಸಂಸ್ಥೆ ಖರೀದಿಸಿತು. ಕೊಡಗಿನಲ್ಲಿ ಸುಮಾರು 13 ಕಾಫಿ ತೋಟಗಳು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲಿ 2 ತೋಟಗಳನ್ನು ಹೊಂದಿದೆ. ಕೊಡಗು ಜಿಲ್ಲೆಯಲ್ಲಿ ಮಾತ್ರವೇ ಸುಮಾರು 18 ಸಾವಿರ ಎಕರೆ ಪ್ರದೇಶವನ್ನು ಕಾಫಿ ಸಂಸ್ಥೆ ಹೊಂದಿದೆ ಎನ್ನಲಾಗುತ್ತಿದೆ. ಟಾಟಾ ಸಂಸ್ಥೆಯಿಂದ ಜಿಲ್ಲೆಯಲ್ಲಿ ಅರೆಬಿಕಾ ಹಾಗೂ ರೊಬೆಸ್ಟಾ ಕಾಫಿಯನ್ನು ಬೆಳೆಯಲಾಗುತ್ತಿದ್ದು, ಟಾಟಾ ಕಾಫಿಯ ಅರೆಬಿಕಾ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೇಡಿಕೆಯಿದೆ.
ಟಾಟಾ ಕಾಫಿ ಸಂಸ್ಥೆ ನೂರಾರು ಕೋಟಿ ರುಪಾಯಿ ವಾರ್ಷಿಕ ವಹಿವಾಟು ಹೊಂದಿದೆ. ಅಲ್ಲದೆ ಸಾವಿರಾರು ಕೋಟಿ ರುಪಾಯಿ ಆಸ್ತಿಯನ್ನು ಹೊಂದಿದೆ.ಕೊಡಗು ಜಿಲ್ಲೆಯ ಐದೂ ತಾಲೂಕಿನಲ್ಲೂ ಕೂಡ ತೋಟಗಳಿವೆ. ಆನಂದಪುರ, ಬಾಲುಮನಿ ದೇವರಕಾಡು, ಕೋಟೆಬೆಟ್ಟ, ಕೋವರ್ ಕೊಲ್ಲಿ, ಕಾನನ್ ಕಾಡು, ಜಂಬೂರು, ಪಾಲಿಬೆಟ್ಟ, ಮಾರ್ಗೊಲಿ, ನಲ್ಲೂರು ಭೂತನಕಾಡು, ಸುಂಟಿಕೊಪ್ಪ, ಎಮ್ಮೆಗುಂಡಿ, ಹೊಸಳ್ಳಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಾಫಿ ತೋಟವಿದೆ. ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಲ್ಲಿ ಟೀ ತೋಟಗಳಿದೆ. ಹಾಸನ ಜಿಲ್ಲೆಯ ಅಬ್ಬನ, ಕರಡಿಬೆಟ್ಟ, ಗೂರ್ಗಳ್ಳಿ, ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೈಲ್ ಮನೆ, ಗಬ್ ಗಲ್, ಮೆರ್ತಿಕಾನ್ ನಲ್ಲಿ ಕಾಫಿ ಹಾಗೂ ಟೀ ತೋಟಗಳಿವೆ.
ಟಾಟಾ ತೋಟಗಳಲ್ಲಿ ಪ್ರಮುಖವಾಗಿ ಕಾಫಿ, ಕಾಳು ಮೆಣಸು, ಟೀ, ಅಡಿಕೆ, ತೆಂಗು, ಬೆಣ್ಣೆಹಣ್ಣನ್ನು ಬೆಳೆಯಲಾಗುತ್ತಿದೆ. ಟಾಟಾ ಕಾಫಿ ಸಂಸ್ಥೆ ಪಾಲಿಬೆಟ್ಟದಲ್ಲಿ ತನ್ನ ಕೇಂದ್ರ ಸ್ಥಾನವನ್ನು ಹೊಂದಿದ್ದು, ವ್ಯವಸ್ಥಾಪಕ ನಿರ್ದೇಶಕರಾಗಿ ಮಂದಣ್ಣ ಕಾರ್ಯನಿರ್ವಹಿಸುತ್ತಿದ್ದಾರೆ.ಜಿಲ್ಲೆಯ ಕುಶಾಲನಗರದಲ್ಲಿ ಕಾಫಿ ಕ್ಯೂರಿಂಗ್ ವರ್ಕ್ ಇದ್ದು, ಜಿಲ್ಲೆಯ ವಿವಿಧ ಟಾಟಾ ಸಂಸ್ಥೆಯಲ್ಲಿ ಕೊಯ್ಲು ಮಾಡಿದ ಕಾಫಿಯನ್ನು ಇಲ್ಲಿ ಕ್ಯೂರಿಂಗ್ ಮಾಡಲಾಗುತ್ತದೆ. ಟಾಟಾ ಸಂಸ್ಥೆಯದ್ದೇ ಆದ ಇನ್ಸ್ಟೆಂಟ್ ಕಾಫಿ ಹಾಗೂ ಟೀ ಹುಡಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಕಾಫಿ ತೋಟಗಳಲ್ಲಿ ಅಪಾರ ಸಸ್ಯ ಸಂಪತ್ತು ಇರುವುದು ವಿಶೇಷ.
ಟಾಟಾ ಕಾಫಿ ತೋಟದಲ್ಲಿ ಗೆಸ್ಟ್ ಹೌಸ್ ಕೂಡ ಇದ್ದು, ಇಲ್ಲಿಗೆ ಅತಿ ಹೆಚ್ಚು ವಿಐಪಿಗಳು ಆಗಮಿಸುತ್ತಾರೆ. ತಣ್ಣೀರುಹಳ್ಳ, ಕೋಟೆಬೆಟ್ಟ , ಹೊಸಳ್ಳಿ, ಪಾಲಿಬೆಟ್ಟ, ಹುದಿಕೇರಿಯಲ್ಲಿದೆ ಗೆಸ್ಟ್ ಹೌಸ್ ಹೊಂದಿದೆ.ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಲ್ಲಿರುವ ಟೀ ಎಸ್ಟೇಟ್ ಸರ್ಕಾರದಿಂದ ಲೀಸ್ ಗೆ ಪಡೆಯಲಾಗಿದೆ. ಟಾಟಾ ಕಾಫಿಯಲ್ಲಿ ಕೂರ್ಗ್ ಫೌಂಡೇಷನ್ ಸ್ಥಾಪನೆ ಮಾಡಲಾಗಿದ್ದು, ಸಿಆರ್‌ಎಸ್ ಫಂಡ್ ಮೂಲಕ ಆರೋಗ್ಯ ಶಿಬಿರ ಸೇರಿದಂತೆ ಹಲವು ಚಟುವಟಿಕೆ ಮಾಡಲಾಗುತ್ತಿದೆ. ಸುಂಟಿಕೊಪ್ಪ ಪಾಲಿಬೆಟ್ಟದಲ್ಲಿ ಸ್ವಸ್ಥ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ವಿಶೇಷ ಚೇತನರ ಏಳಿಗೆಗೆ ಸಂಸ್ಥೆ ಕೆಲಸ ಮಾಡುತ್ತಿದೆ. ರೂರಲ್ ಇಂಡಿಯಾ ಪ್ರಾಜೆಕ್ಟ್ ಮೂಲಕ ಅಮ್ಮತ್ತಿಯಲ್ಲಿ ಆಸ್ಪತ್ರೆಯಿದ್ದು, ಟಾಟಾ ಕಾಫಿಯ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಕಾರ್ಮಿಕರಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತಿದೆ.ಒಂದು ಬಾರಿಯೂ ಬಾರದ ರತನ್ ಟಾಟಾ!ಕೊಡಗು ಜಿಲ್ಲೆಯಲ್ಲಿ ತಮ್ಮದೇ ಆದ ಪಾಲುದಾರ ಟಾಟಾ ಕಾಫಿ ಸಂಸ್ಥೆ ಸಾವಿರಾರು ಎಕರೆ ಕಾಫಿ ತೋಟವನ್ನು ಹೊಂದಿದೆ. ಆದರೂ ಕೂಡ ಒಂದು ಬಾರಿಯೂ ಕೊಡಗಿನ ತಮ್ಮ ಸಂಸ್ಥೆಗೆ ಆಗಮಿಸಿರಲಿಲ್ಲ.