ಮಂಗಳೂರು: ಮೆಸ್ಕಾಂನ ವಿದ್ಯುತ್ ವಿತರಣೆ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆ (ಟಾಟಾ ಕಂಪನಿ)ಗೆ ನೀಡಲು ಕೆಇಆರ್‌ಸಿ ವತಿಯಿಂದ ಅನುಮತಿ ಕೋರಿರುವ ವಿರುದ್ಧ ಪ್ರತಿಭಟನಾ ಸಭೆ ಮಂಗಳವಾರ ನಗರದ ಬಿಜೈಯ ಮೆಸ್ಕಾಂ ಪ್ರಧಾನ ಕಚೇರಿ ಎದುರು ನಡೆಯಿತು.

ಮಂಗಳೂರು: ಮೆಸ್ಕಾಂನ ವಿದ್ಯುತ್ ವಿತರಣೆ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆ (ಟಾಟಾ ಕಂಪನಿ)ಗೆ ನೀಡಲು ಕೆಇಆರ್‌ಸಿ ವತಿಯಿಂದ ಅನುಮತಿ ಕೋರಿರುವ ವಿರುದ್ಧ ಪ್ರತಿಭಟನಾ ಸಭೆ ಮಂಗಳವಾರ ನಗರದ ಬಿಜೈಯ ಮೆಸ್ಕಾಂ ಪ್ರಧಾನ ಕಚೇರಿ ಎದುರು ನಡೆಯಿತು.

ಮೆಸ್ಕಾಂ ಅಧಿಕಾರಿಗಳು, ಗುತ್ತಿಗೆ ನೌಕರರು ಸೇರಿದಂತೆ ಸಮಗ್ರ ಕಾರ್ಮಿಕ ವೃಂದದಿಂದ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಬಲರಾಂ ಮಾತನಾಡಿ, ಮೆಸ್ಕಾಂ ಖಾಸಗೀಕರಣದ ವಿರುದ್ಧ ಹಂತ ಹಂತವಾಗಿ ಜಾಗೃತಿ ನಡೆಯುತ್ತಿದ್ದು, ರಾಜ್ಯಾದ್ಯಂತ ‘ದ್ವಾರ ಸಭೆ’ ನಡೆಯುತ್ತಿದೆ ಎಂದರು.

ಮೆಸ್ಕಾಂ ಎಂಜಿನಿಯರ್‌ಗಳ ಸಂಘದ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಪೈ ಮಾತನಾಡಿ, ಟಾಟಾ ಕಂಪನಿಯು ಮೆಸ್ಕಾಂನ ಪ್ರಮುಖ ನಗರಗಳ ವಿತರಣೆ ವ್ಯವಸ್ಥೆಗೆ ಬೇಡಿಕೆ ಸಲ್ಲಿಸಿದೆ. ಒಂದು ವೇಳೆ ಹಸ್ತಾಂತರಗೊಂಡರೆ ಹೊಸ ಸಿಬ್ಬಂದಿ ನೇಮಕ ಸ್ಥಗಿತಗೊಳ್ಳಲಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಸೇವೆಯಲ್ಲಿ ತಾರತಮ್ಯ ಬರಲಿದೆ. ಇಡೀ ಮೆಸ್ಕಾಂ ವ್ಯವಸ್ಥೆಯೇ ಹದಗೆಡಲಿದೆ ಎಂದರು.

ಒಕ್ಕೂಟದ ಕಾರ್ಯದರ್ಶಿ ಶಿವರಾಮ್, ಎಂಜಿನಿಯರ್‌ಗಳ ಸಂಘದ ಉಪಾಧ್ಯಕ್ಷ ಕೆ.ಕೃಷ್ಣ ರಾವ್, ಸಂಘಟನಾ ಕಾರ್ಯದರ್ಶಿ ಬಿ.ಎಸ್.ಲೋಹಿತ್, ನೌಕರರ ಸಂಘದ ಉಪಾಧ್ಯಕ್ಷ ಶಂಕರ ಪ್ರಕಾಶ್, ಲೆಕ್ಕಾಕಾರಿಗಳ ಸಂಘದ ಕಾರ್ಯದರ್ಶಿ ನವೀನ್ ಕುಮಾರ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸಪ್ಪ, ಡಿಪ್ಲೋಮಾ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ರಾಮಚಂದ್ರ ಮಾತನಾಡಿದರು.

ಸಂಘಟನೆಗಳ ಪದಾಧಿಕಾರಿಗಳಾದ ನಿತೇಶ್, ವರದರಾಜು, ಗಿರೀಶ್, ಪುಷ್ಪರಾಜ್, ಚೈತನ್ಯ, ರಾಘವೇಂದ್ರ, ಷಣ್ಮುಖಪ್ಪ, ಶಾಕಿರ್, ಸುಧಾಕರ್, ಉರ್ಬನ್ ಪಿಂಟೊ ಮತ್ತಿತರರು ಇದ್ದರು.

ಪ್ರತಿಭಟನೆಯ ಬಳಿಕ ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು, ನೌಕರರ ವಿರೋಧವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. 23ರ ವರೆಗೆ ಆಕ್ಷೇಪಣೆಗೆ ಅವಕಾಶ

ಖಾಸಗೀಕರಣ ವಿರುದ್ಧ ಜೂ.೨೩ರ ತನಕ ಅಕ್ಷೇಪ ಸಲ್ಲಿಕೆಗೆ ಅವಕಾಶವಿದ್ದು, ಶಾಸಕರು, ರೈತರು, ಗುತ್ತಿಗೆದಾರರು, ಗ್ರಾಹಕರು ಆಕ್ಷೇಪ ಸಲ್ಲಿಸಬೇಕು. ನಮಗೆ ಖಾಸಗೀಕರಣ ಬೇಡ, ರಾಜ್ಯ ಸರ್ಕಾರದ ಅಧೀನದಲ್ಲೇ ಇರಲಿ ಎಂದು ಒತ್ತಡ ತರಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಬಲರಾಮ್ ಆಗ್ರಹಿಸಿದರು.