ಮಂಗಳೂರು: ಟಾಟಾ ಪವರ್ ಕಾರ್ಪೊರೇಷನ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯು ಮೆಸ್ಕಾಂ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ,ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ ನಗರ ಸಭೆ, ಉಡುಪಿ ನಗರಸಭೆ, ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಿಗಾಗಿ ಅರ್ಜಿ ಸಲ್ಲಿಸಿದೆ.
ಈ ರೀತಿ ವಿದ್ಯುತ್ ಕ್ಷೇತ್ರದ ಖಾಸಗೀಕರಣಗೊಳಿಸುವುದನ್ನು ಕೂಡಲೇ ನಿಲ್ಲಿಸಬೇಕು, ಖಾಸಗೀಕರಣಗೊಳಿಸಲು ನೀಡಿದ ಅರ್ಜಿಯನ್ನು ರದ್ದುಗೊಳಿಸಬೇಕು ಎಂದು ಫೆಡರೇಶನ್ ಆಫ್ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ಎಂಪ್ಲಾಯಿಸ್ ಯೂನಿಯನ್ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾಗೆ ಶನಿವಾರ ಇಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಮೆಸ್ಕಾಂ ಸಂಸ್ಥೆಯು ಸಂಪೂರ್ಣವಾಗಿ ಸರ್ಕಾರದ ಸಾಮ್ಯಕ್ಕೆ ಒಳಪಟ್ಟಿದ್ದು ವಿದ್ಯುತ್ ಜಾಲಗಳನ್ನು ಕಳೆದ ನೂರು ವರ್ಷಗಳಿಂದ ಹೆಚ್ಚಿನ ಅವಧಿಯಲ್ಲಿ ನಾಗರಿಕರ ತೆರಿಗೆ ಹಣ ಮತ್ತು ವಿದ್ಯುತ್ ಬಿಲ್ಲಿನ ಕೊಡುಗೆಗಳ ಮೂಲಕ ರಚಿಸಲಾಗಿರುತ್ತದೆ. ಸರ್ಕಾರ ನೀಡಿದ ಅನುದಾನಗಳಿಂದ ಮೆಸ್ಕಾಂ ಮೂಲೆ ಮೂಲೆಯಲ್ಲಿ ಕುಗ್ರಾಮಗಳಿಗೂ ವಿದ್ಯುತ್ ಸಂಪರ್ಕ ನೀಡುತ್ತಿದೆ. ಆದರೆ ಈಗ ಖಾಸಗಿ ಬಂಡವಾಳ ಶಾಹಿಗಳಿಗೆ ಅವಕಾಶ ಮಾಡಿಕೊಡುವುದು ಸರಿಯಾದ ಕ್ರಮ ಅಲ್ಲ. ಆದ್ದರಿಂದ ಖಾಸಗೀಕರಣ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸುವಂತೆ ಅವರು ಮನವಿಯಲ್ಲಿ ಆಗ್ರಹಿಸಿದರು.ಮೆಸ್ಕಾಂ ಕಂಪನಿಯ ಲೋಹಿತ್ ಬಿ.ಎಸ್, ಅಭಿಷೇಕ್, ಶ್ರೀನಿವಾಸಪ್ಪ, ವಸಂತ್ ಕುಮಾರ್, ಚಂದ್ರಶೇಖರ್ ಪೂಜಾರಿ, ಷಣ್ಮುಖಪ್ಪ ಬಾವಿ, ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯರಾದ ಕರಿಬಸಪ್ಪ, ರಾಜೇಶ್, ಗಿರೀಶ್ ಮತ್ತು ಇತರರಾದ ಕರೀಂ ಸಾಬ್, ಗಣೇಶ್, ಸದಾನಂದ, ಲೋಕೇಶ್, ರಾಜಶೇಖರ್ ಮತ್ತಿತರರಿದ್ದರು.