ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ನಾಗಾಲೋಟದಲ್ಲಿ ಬೆಳವಣಿಗೆ ಕಾಣುತ್ತಿದೆ. ಆ ವೇಗಕ್ಕೆ ತಕ್ಕಂತೆ ಐಟಿಐ ಶಿಕ್ಷಣದಲ್ಲಿ ತಂತ್ರಜ್ಞಾನದ ಉಪಯೋಗ ಮಾತ್ರ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಇನ್ನೂ ೭೦-೮೦ ವರ್ಷ ಹಳೆಯ ಕಾಲದ ತಾಂತ್ರಿಕ ವ್ಯವಸ್ಥೆಗೇ ಜೋತು ಬಿದ್ದಿದ್ದಾರೆ. ಆಧುನಿಕ ಯುಗಕ್ಕೆ ತಕ್ಕಂತೆ ಐಟಿಐ ಶಿಕ್ಷಣದಲ್ಲಿ ಹೊಸ ತಂತ್ರಜ್ಞಾನದ ಕೌಶಲ್ಯ ಕಲಿಸುವ ಟಾಟಾ ಟೆಕ್ನೋಲಜೀಸ್ ಕನಸು ಮಂಡ್ಯದಲ್ಲಿ ಹಳ್ಳ ಹಿಡಿದಿದೆ.
ಮಂಡ್ಯದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಜಾಗದ ಕೊರತೆ ಇದ್ದ ಕಾರಣ ೨೦ ಮೇ ೨೦೨೩ರಂದು ಟಾಟಾ ಟೆಕ್ನೋಲಜಿ ಸಹಯೋಗದೊಂದಿಗೆ ಉನ್ನತೀಕರಿಸಿದ ತಾಂತ್ರಿಕ ಚಟುವಟಿಕಾ ಕೇಂದ್ರದ ಕಟ್ಟಡವನ್ನು ನಗರದ ಮೈಷುಗರ್ ಪ್ರೌಢಶಾಲೆ ಪಕ್ಕದಲ್ಲಿರುವ ಮೈಷುಗರ್ ಕಾರ್ಖಾನೆ ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ಗೆ ಸೇರಿದ ಜಾಗದಲ್ಲಿ ನಿರ್ಮಿಸಿದ್ದು ಅದೀಗ ಅನಾಥವಾಗಿದೆ.ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ದೃಷ್ಟಿಯಿಂದ ಹಾಗೂ ಐಟಿಐ ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ಟಾಟಾ ಟೆಕ್ನೋಲಜಿ ಸಹಯೋಗದೊಂದಿಗೆ ಮುಂದಾಗಿತ್ತು. ಐಟಿಐ ಕಾಲೇಜು ಶಿಕ್ಷಣಕ್ಕೆ ಹೈ-ಟೆಕ್ ಸ್ಪರ್ಶ ನೀಡುವ ಸಲುವಾಗಿ ಒಂದೊಂದು ಕಾಲೇಜಿಗೆ ೩೩ ಕೋಟಿ ರು. ಮೌಲ್ಯದ ಯಂತ್ರೋಪಕರಣಗಳು, ಎಲೆಕ್ಟ್ರಿಕ್ ಸಾಧನ- ಸಲಕರಣೆಗಳನ್ನು ಟಾಟಾ ಸಂಸ್ಥೆಯವರು ಉಚಿತವಾಗಿ ದೊರಕಿಸಿಕೊಟ್ಟಿದ್ದರು. ಆದರೆ, ಐಟಿಐ ಕೋರ್ಸ್‌ಗೆ ಸೇರಿದ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಪರಿಚಯವಾಗುವಷ್ಟರಲ್ಲೇ ಮಣ್ಣುಪಾಲಾಗಿದ್ದು ದುರ್ದೈವದ ಸಂಗತಿ.
೧೫ ಕೋರ್ಸ್‌ಗಳಿಗೆ ಅನುಕೂಲ:ಐಟಿಐ ವಿದ್ಯಾರ್ಥಿಗಳನ್ನು ಕೌಶಲ್ಯವಂತರನ್ನಾಗಿ ಮಾಡುವ ದೃಷ್ಟಿಯಿಂದ ಕಂಪ್ಯೂಟರ್ ನ್ಯೂಮರಿಕಲ್ ಕಂಟ್ರೋಲ್ (ಸಿಎನ್‌ಸಿ) ಟರ್ನರ್, ಡಿಜಿಟಲ್ ಎಲೆಕ್ಟ್ರಾನಿಕ್ ಕಂಟ್ರೋಲ್, ರೋಬೋಟಿಕ್ ಟೆಕ್ನಾಲಜಿ, ಎಲೆಕ್ಟ್ರಿಕ್ ವೆಹಿಕಲ್ ಸರ್ವೀಸ್, ಸೋಲಾರ್ ಟೆಕ್ನಾಲಜಿ, ಆಟೋಮೊಬೈಲ್, ಫ್ಲಂಬಿಂಗ್, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ೧೫ ಕೋರ್ಸ್‌ಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳು, ವಾಹನಗಳು, ಬ್ಯಾಟರಿಗಳು ಇನ್ನಿತರೆ ಎಲೆಕ್ಟ್ರಿಕ್ ಸಾಧನಗಳನ್ನು ಐಟಿಐ ಕಾಲೇಜುಗಳಿಗೆ ನೀಡಿದ್ದರು.
ಟಾಟಾ ಟೆಕ್ನೋಲಜಿ ಸಂಸ್ಥೆಯವರೇ ನಾಲ್ಕರಿಂದ ಐದು ವರ್ಷ ಕೇಂದ್ರವನ್ನು ನಿರ್ವಹಣೆ ಮಾಡುವುದು. ನಂತರ ಸ್ಥಳೀಯರಿಗೆ ತರಬೇತಿ ನೀಡಿ ಹೋಗುವಂತೆ ವ್ಯವಸ್ಥೆ ಮಾಡಿದ್ದರು.ತಂತ್ರಜ್ಞಾನವಿದ್ದರೂ ಗ್ರಾಮೀಣ ಯುವಕರಿಗೆ ಸಿಗದ ಜ್ಞಾನ:
ಸಾಮಾನ್ಯವಾಗಿ ಐಟಿಐ ಕೋರ್ಸ್‌ಗಳನ್ನು ಗ್ರಾಮೀಣ ಯುವಕರೇ ಹೆಚ್ಚು ಅವಲಂಬಿಸಿದ್ದಾರೆ. ಅವರು ತಂತ್ರಜ್ಞಾನ ಆಧಾರಿತ ಶಿಕ್ಷಣದಿಂದ ವಂಚಿತರಾಗಿ ಇಂದಿಗೂ ಪುರಾತನ ಕಾಲದ ತಾಂತ್ರಿಕತೆಯನ್ನೇ ಕಲಿಯುತ್ತಿದ್ದಾರೆ. ಅಂತಹುದರಲ್ಲಿ ನವೀನ ತಂತ್ರಜ್ಞಾನ ಶಿಕ್ಷಣ ಮನೆ ಬಾಗಿಲಿಗೇ ಟಾಟಾ ಸಂಸ್ಥೆಯವರು ತಂದಿಟ್ಟಿದ್ದರೂ ಅದರ ಉಪಯೋಗವನ್ನು ವಿದ್ಯಾರ್ಥಿಗಳಿಗೆ ನೀಡಿ ಕೌಶಲ್ಯವಂತರನ್ನಾಗಿ ಮಾಡುವ ಆಸಕ್ತಿ ಯಾರೊಬ್ಬರಿಗೂ ಇಲ್ಲ. ತಂತ್ರಜ್ಞಾನ ಪಕ್ಕದಲ್ಲೇ ಇದ್ದರೂ ಅದರ ಜ್ಞಾನ ಮಾತ್ರ ವಿದ್ಯಾರ್ಥಿಗಳಿಗೆ ಸಿಗದಿರುವುದು ಇಂದಿನ ದೊಡ್ಡ ದುರಂತ.ಇಂದಿನ ಜನಪ್ರತಿನಿಧಿಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಚಿಂತೆಯೇ ಇಲ್ಲ. ಜಿಲ್ಲೆಯ ಆಡಳಿತ ಸೂತ್ರ ಹಿಡಿದಿರುವ ಅಧಿಕಾರಿಗಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ದೊರಕಿಸುವ ಬಗ್ಗೆ ಆಸಕ್ತಿ ಇಲ್ಲ. ಹೊಸ ತಂತ್ರಜ್ಞಾನವನ್ನು ತಾವೂ ಕಲಿತುಕೊಂಡು ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ಇಚ್ಛಾಶಕ್ತಿ ಐಟಿಐ ಕಾಲೇಜುಗಳ ಶಿಕ್ಷಕರಿಗೂ ಇಲ್ಲ. ಇನ್ನು ದೊಡ್ಡ ಕೈಗಾರಿಕೆ, ಕಾರ್ಖಾನೆಗಳಲ್ಲಿ ಕೆಲಸ ಮಾಡಲು ತಾಂತ್ರಿಕವಾಗಿ ನೈಪುಣ್ಯತೆ ಹೊಂದಿರುವವರು ಸೃಷ್ಟಿಯಾಗುವುದಾದರೂ ಹೇಗೆ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ.
ಬಾಡಿಗೆ, ವಿದ್ಯುತ್ ಬಿಲ್ ಪಾವತಿಸಿಲ್ಲ:ಒಂದೂವರೆ ವರ್ಷದಿಂದ ಈ ಕಟ್ಟಡಕ್ಕೆ ಬಾಡಿಗೆ ಪಾವತಿಸಿಲ್ಲ. ಕೋಟ್ಯಂತರ ರು. ಬೆಲೆ ಬಾಳುವ ಯಂತ್ರೋಪಕರಣಗಳು, ವಾಹನಗಳು ಇದ್ದಲ್ಲೇ ತುಕ್ಕು ಹಿಡಿಯುತ್ತಿವೆ. ವಿದ್ಯುತ್ ಬಿಲ್ ಪಾವತಿಸದೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಸೌಲಭ್ಯವಿಲ್ಲದ ಕಾರಣ ಯಂತ್ರೋಪಕರಣಗಳು, ಬ್ಯಾಟರಿಗಳು ಹಾಳಾಗಿವೆ. ತಂತ್ರಜ್ಞಾನ ಆಧಾರಿತ ಶಿಕ್ಷಣ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಕನಸಾಗಿಯೇ ಉಳಿದಿದೆ.
ರಾಜೀವ್ ಚಂದ್ರಶೇಖರ್ ಕೊಡುಗೆ:ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಐಟಿಐ ಕೋರ್ಸ್‌ಗಳನ್ನು ತಾಂತ್ರಿಕವಾಗಿ ಉನ್ನತೀಕರಿಸುವ ದೃಷ್ಟಿಯಿಂದ ೨೦೨೧-೨೨ನೇ ಕೇಂದ್ರ ಬಜೆಟ್‌ನಲ್ಲಿ ೧ ಲಕ್ಷ ಕೋಟಿ ರು. ಹಣವನ್ನು ಮೀಸಲಿಟ್ಟಿದ್ದರು. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಯೋಜನೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಕರ್ನಾಟಕದ ೧೫೦ ಕಾಲೇಜುಗಳಿಗೆ ೫ ಸಾವಿರ ಕೋಟಿ ರು. ಅನುದಾನ ಒದಗಿಸಿದರು. ಟಾಟಾ ಟೆಕ್ನೋಲಜಿ ಸಹಯೋಗದೊಂದಿಗೆ ಪ್ರತಿ ಐಟಿಐ ಕಾಲೇಜಿಗೆ ೩೩ ಕೋಟಿ ರು. ಹಣ ದೊರಕಿಸಲಾಗಿತ್ತು. ಅದರಂತೆ ಮಂಡ್ಯದ ಏಳು ಐಟಿಐ ಕಾಲೇಜುಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿತ್ತು.--------