ಸಾರಾಂಶ
ಬೆಳ್ತಂಗಡಿ: ಆಯುಧಪೂಜೆ ವೇಳೆ ಹೃದಯಾಘಾತದಿಂದ ಯುವಕ ಮೃತಪಟ್ಟಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಅತ್ತಾಜೆ ರಮೇಶ್ ಭಟ್ ಮತ್ತು ಶಾರದ ದಂಪತಿಯ ಪುತ್ರ ಆದಿತ್ಯ ಭಟ್ (29) ಮೃತರು.
ಆದಿತ್ಯ ಅವರು ಶುಕ್ರವಾರ ತಮ್ಮ ಮನೆಯಲ್ಲಿ ನಡೆದ ಆಯುಧ ಪೂಜಾ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನಂತರ, ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಬಳಿಕ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಆದಿತ್ಯ ಅವರು ಜರ್ಮನಿಯಲ್ಲಿ ಸ್ವಂತ ಸ್ಟಾರ್ಟಪ್ ನಡೆಸುತ್ತಿದ್ದರು. ವರ್ಕ್ ಫ್ರಮ್ ಹೋಮ್ ನಲ್ಲಿ ಮನೆಯಲ್ಲೇ ಇದ್ದರು. ಅವರು ತಂದೆ-ತಾಯಿ, ಸಹೋದರಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. -----
ಬಸ್ಸು ಸಿಬ್ಬಂದಿ ಹೊಡೆದಾಟ: ಇತ್ತಂಡ ದೂರು ದಾಖಲು
ಮಂಗಳೂರು: ಎರಡು ಖಾಸಗಿ ಬಸ್ಸುಗಳ ಸಿಬ್ಬಂದಿ ಪರಸ್ಪರ ಹೊಡೆದಾಡಿಕೊಂಡ ಪ್ರಕರಣ ಅ.10ರಂದು ಕಂಕನಾಡಿಯಲ್ಲಿ ನಡೆದಿದ್ದು, ಇತ್ತಂಡಗಳಿಂದ ದೂರು- ಪ್ರತಿದೂರು ದಾಖಲಾಗಿದೆ.ನಗರದ ಸ್ಟೇಟ್‌ಬ್ಯಾಂಕ್‌ನಿಂದ ವಿಟ್ಲಕ್ಕೆ ತೆರಳುವ ಸೆಲಿನಾ ಬಸ್ಸು ಹಾಗೂ ಧರಿತ್ರಿ ಬಸ್ಸಿನ ಸಿಬ್ಬಂದಿಗಳ ನಡುವೆ ಕಂಕನಾಡಿ ಬಳಿ ಹೊಡೆದಾಟ ನಡೆದಿತ್ತು.ಸೆಲಿನಾ ಬಸ್ಸು ನಿರ್ವಾಹಕ ಭುವನೇಶ್ವರ ನೀಡಿದ ದೂರಿನಂತೆ ಧರಿತ್ರಿ ಬಸ್ಸಿನ ಡ್ರೈವರ್ ಸುರೇಶ್ ಹಾಗೂ ನಿರ್ವಾಹಕ ರಾಕೇಶ್ ವಿರುದ್ಧ ಕಲಂ 126 (2), 115(2), 118(1), 351(2), 352 ಜತೆಗೆ 3(5) ಬಿ.ಎನ್.ಎಸ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ, ಧರಿತ್ರಿ ಬಸ್ಸಿನ ಚಾಲಕ ಸುರೇಶ್ ನೀಡಿದ ದೂರಿನಂತೆ, ಸೆಲಿನಾ ಬಸ್ಸು ನಿರ್ವಾಹಕ ಭುವನೇಶ್ವರನ ವಿರುದ್ಧ ಕಲಂ 126(2), 115(2), 118(1), 351(2) ಬಿ.ಎನ್.ಎಸ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಎರಡೂ ಪ್ರಕರಣಗಳು ತನಿಖೆಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.