ಕುಮಟಾ, ಹೊನ್ನಾವರದಲ್ಲಿ ಸಂಭ್ರಮದ ವಿಜಯದಶಮಿ

| Published : Oct 13 2024, 01:10 AM IST

ಸಾರಾಂಶ

ಕುಮಟಾ, ಹೊನ್ನಾವರ ತಾಲೂಕಿನ ವಿವಿಧೆಡೆ ವಿಜಯದಶಮಿ ಹಾಗೂ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು, ದೇವಳಗಳಲ್ಲಿ ಶನಿವಾರ ವಿಜೃಂಭಣೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.

ಹೊನ್ನಾವರ: ತಾಲೂಕಿನ ವಿವಿಧೆಡೆ ವಿಜಯದಶಮಿ ಹಾಗೂ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು, ದೇವಳಗಳಲ್ಲಿ ಶನಿವಾರ ವಿಜೃಂಭಣೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.

ನವರಾತ್ರಿ ನಿಮಿತ್ತ ದೇವಿ ದೇವಾಲಯಗಳಲ್ಲಿ 9 ದಿನಗಳ ಕಾಲ ವಿಶೇಷ ಪೂಜೆ-ಪುನಸ್ಕಾರ, ದಿನಂಪ್ರತಿ ಭಜನಾ ಕಾರ್ಯಕ್ರಮಗಳು ನೆರವೇರಿದ್ದವು. ದಶಮಿಯ ಪ್ರಯುಕ್ತ ವಿಶೇಷ ಪೂಜೆ, ಹೋಮ ಹವನಾದಿ ಪ್ರಕ್ರಿಯೆಗಳು ನೆರವೇರಿದವು. ದೇವಿಗೆ ವಿಶೇಷ ಹೂವಿನ ಅಲಂಕಾರ ಸಮರ್ಪಿಸಲಾಯಿತು. ಶ್ರೀ ಕರಿಕಾನ ಪರಮೇಶ್ವರಿ, ಗೇರುಸೊಪ್ಪಾ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿ, ಉಪ್ಪೋಣಿಯ ಚಾಮುಂಡೇಶ್ವರಿ, ಜಲವಳ ಕರ್ಕಿಯ ಶಿವಮ್ಮ ಯಾನೆ ದೇವಾಲಯದಲ್ಲಿ, ಖರ್ವಾ ಗ್ರಾಮದ ಶ್ರೀ ಮಹಾಸತಿ ಶ್ರೀ ಯಕ್ಷಿ ದೇವಿ ದೇವಾಲಯ, ಅಕ್ಕಿಮುಡಿ ದೇವಾಲಯ, ಕುಳಕೋಡದ ಮುದ್ರಿ ಯಲ್ಲಮ್ಮ, ಪಟ್ಟಣದ ದಂಡಿನ ದುರ್ಗಾ ದೇಗುಲದಲ್ಲಿ ಸೇರಿದಂತೆ ಇನ್ನು ಅನೇಕ ದೇವಿ ದೇವಾಲಯಗಳಲ್ಲಿ ವಿಜಯದಶಮಿಯ ವಿಶೇಷ ಪೂಜೆ ನಡೆದವು. ಶ್ರೀ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಉಡಿಸೇವೆ, ಬಾಳೆಗೊನೆ, ಹಣ್ಣುಕಾಯಿ ಸಮರ್ಪಿಸಿ ಶ್ರೀ ದೇವರ ದರ್ಶನ ಪಡೆದರು. ಮಹಾ ಮಂಗಳಾರತಿ ನೆರವೇರಿಸಿದ ನಂತರ ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ವಿಜಯದಶಮಿಯ ನಿಮಿತ್ತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು.ಕುಮಟಾ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ:

ಕುಮಟಾ ತಾಲೂಕಿನಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಹಬ್ಬವನ್ನು ಅತ್ಯಂತ ಸಂಭ್ರಮೋಲ್ಲಾಸದಿಂದ ಆಚರಿಸಲಾಗಿದ್ದು, ಎಲ್ಲೆಡೆ ದೇವಿಗೆ ವಿಜೃಂಭಣೆಯಿಂದ ಪೂಜೆ ಸಮರ್ಪಿಸಿದ ಭಕ್ತಾದಿಗಳು ಇಚ್ಛಾಪ್ರಾಪ್ತಿಗೆ ಪ್ರಾರ್ಥಿಸಿದರು.ನವರಾತ್ರಿಯ ದಿನಗಳಲ್ಲಿ ವಿಶೇಷವಾಗಿ ದುರ್ಗೆಯ ಪ್ರತಿರೂಪವಾಗಿ ಕುಮಾರಿಯರು ಮತ್ತು ಮುತ್ತೈದೆಯರಿಗೆ ಮನೆಗೆ ಕರೆತಂದು ಹೂ, ಹಣ್ಣು, ವಸ್ತ್ರ, ಕಾಸಿನ ಸಹಿತ ಅರಿಶಿನ-ಕುಂಕುಮವಿತ್ತು ಗೌರವಿಸಿದ್ದಾರೆ. ದೇವಾಲಯಗಳಲ್ಲೂ ರಂಗಪೂಜೆಯೊಟ್ಟಿಗೆ ಕೌಮಾರಿಕಾ ಪೂಜನ, ಮುತೈದೆಯರಿಗೆ ಬಾಗಿನ ಸಮರ್ಪಣೆಯಂತಹ ಕಾರ್ಯಕ್ರಮಗಳು ಪ್ರತಿನಿತ್ಯ ನಡೆದಿವೆ. ಚಂಡಿಕಾ ಪಾರಾಯಣ, ಯಾಗದಂತಹ ವೈದಿಕ ಕಾರ್ಯಕ್ರಮಗಳು ಕೂಡಾ ನಡೆದಿವೆ. ಭಜನೆ, ನಾಟ್ಯ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ.ಎಲ್ಲೆಡೆ ದೇವಿ ಪ್ರಧಾನವಾಗಿರುವ ಮಂದಿರಗಳನ್ನು ತಳಿರು ತೋರಣ, ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿದ್ದು ದೇವಿಯು ಹಲವು ರೂಪಗಳಲ್ಲಿ ಸಿಂಗಾರಗೊಂಡು ಭಕ್ತಾದಿಗಳಿಗೆ ದಿವ್ಯದರ್ಶನ ನೀಡಿದ್ದಾಳೆ. ಪಟ್ಟಣದ ಪ್ರಮುಖ ದೇವಾಲಯಗಳಾದ ಗ್ರಾಮದೇವಿ ದೇವರಹಕ್ಕಲ ಶಾಂತಿಕಾ ಪರಮೇಶ್ವರಿ, ಕುಂಭೇಶ್ವರ, ನೆಲ್ಲಿಕೇರಿ ಮಹಾಸತಿ, ಮೂರುಕಟ್ಟೆ ಕಾವೂರ ಕಾಮಾಕ್ಷಿ, ಮಹಾಲಸಾ ನಾರಾಯಣಿ, ರಥಬೀದಿಯ ಶಾಂತೇರಿ ಕಾಮಾಕ್ಷಿ, ಲಕ್ಷ್ಮೀ ವೆಂಕಟರಮಣ, ವನ್ನಳ್ಳಿಯ ಮಹಿಷಾಸುರ ಮರ್ದಿನಿ, ಚಿತ್ರಗಿಯ ಚಂಡಿಕಾ ಪರಮೇಶ್ವರಿ ಸಹಿತ ಹೆಗಡೆಯ ಶಾಂತಿಕಾಂಬಾ, ಬಾಡದ ಕಾಂಚಿಕಾಂಬೆ, ಮೂರೂರು ನೀಲ್ಮನೆ ದುರ್ಗಾದೇವಿ, ಯಲವಳ್ಳಿ ಹಾಗೂ ಕೋನಳ್ಳಿಯ ವನದುರ್ಗೆ, ಮಣಕೋಣದ ಬಂಗಾರಮ್ಮ, ಹೆಬೈಲದ ಮಹಾಲಕ್ಷ್ಮೀ, ಹೆಗಲೆ ಮತ್ತು ಸಿದ್ಧರಮಠದ ರಾಜರಾಜೇಶ್ವರಿ ಸೇರಿದಂತೆ ಧಾರೇಶ್ವರ, ನಾಗತೀರ್ಥ, ಅಳವೆಕೋಡಿ, ಮಿರ್ಜಾನ, ಕೋಡ್ಕಣಿ, ದಿವಗಿ ಮುಂತಾದ ಗ್ರಾಮೀಣ ಭಾಗದ ಎಲ್ಲ ಮಂದಿರಗಳಲ್ಲೂ ದೇವಿಗೆ ವಿಶೇಷ ಪೂಜೆ, ಪುನಸ್ಕಾರ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಟ್ಟಿಗೆ ಅರ್ಚಿಸಲಾಗಿದೆ.

ಅದರಂತೆ ಭಾನುವಾರ ವಿಜಯದಶಮಿ ಪ್ರಯುಕ್ತ ಎಲ್ಲೆಡೆ ಆಯುಧ ಪೂಜೆ ಮಾಡಲಾಗಿದೆ. ಭತ್ತದ ತೆನೆಗಳನ್ನು ತಂದು ಪೂಜಿಸಿ, ಮನೆಮನೆಯಲ್ಲೂ ಸುಖಸಮೃದ್ಧಿಗಾಗಿ ಬೇಡಿಕೊಳ್ಳಲಾಗಿದೆ. ಒಟ್ಟಾರೆ ಉತ್ಸಾಹದಿಂದಲೇ ಸಂಪನ್ನಗೊಂಡ ನವರಾತ್ರಿ ಹಾಗೂ ವಿಜಯದಶಮಿ ಹಬ್ಬದುದ್ದಕ್ಕೂ ಭಕ್ತಾದಿಗಳು ದೇವಿಯ ಪ್ರಸಾದ ಸ್ವೀಕರಿಸಿ ಸಿಹಿಯೂಟ ಮಾಡಿದ್ದಾರೆ. ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ.