ತಾತಯ್ಯನವರ ಕಾಲಜ್ಞಾನ ಇಂದಿಗೂ ಪ್ರಸ್ತುತ

| Published : Mar 26 2024, 01:02 AM IST

ಸಾರಾಂಶ

ಸರಳ ಭಾಷೆಯಲ್ಲಿ, ಸುಲಲಿತವಾಗಿ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಕೀರ್ತನೆಗಳನ್ನು ರಚಿಸಿದ ಕೈವಾರ ತಾತಯ್ಯ ಕಾಲಜ್ಞಾನಿಯಾಗಿದ್ದರು ಎಂದು ತಾಲೂಕು ಬಲಿಜ ಸಂಘದ ಅಧ್ಯಕ್ಷ ತಿಮ್ಮಶೆಟ್ರು ಅಭಿಪ್ರಾಯಪಟ್ಟರು.

ಬಲಿಜ ಸಂಘದ ಅಧ್ಯಕ್ಷ ತಿಮ್ಮಶೆಟ್ರು ಅಭಿಮತ । ಕಲ್ಲನ್ನು ಕಲ್ಲುಸಕ್ಕರೆ ಆಗುವವರೆಗೆ ತಪಸ್ಸು ಮಾಡಿದರೆಂಬ ಪ್ರತೀತಿ

ಕನ್ನಡಪ್ರಭ ವಾರ್ತೆ ಹಿರಿಯೂರು

ಸರಳ ಭಾಷೆಯಲ್ಲಿ, ಸುಲಲಿತವಾಗಿ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಕೀರ್ತನೆಗಳನ್ನು ರಚಿಸಿದ ಕೈವಾರ ತಾತಯ್ಯ ಕಾಲಜ್ಞಾನಿಯಾಗಿದ್ದರು ಎಂದು ತಾಲೂಕು ಬಲಿಜ ಸಂಘದ ಅಧ್ಯಕ್ಷ ತಿಮ್ಮಶೆಟ್ರು ಅಭಿಪ್ರಾಯಪಟ್ಟರು. ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀಯೋಗಿ ನಾರೇಯಣ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಯೋಗಿ ನಾರೇಯಣ ಯತಿಂದ್ರರು ಕೈವಾರ ತಾತಯ್ಯ ಎಂದೇ ಪ್ರಸಿದ್ಧಿ. ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಅವರ ಪುಣ್ಯಕ್ಷೇತ್ರವಾಗಿದ್ದು ತಾತಯ್ಯನವರು ಬಾಲ್ಯದಿಂದಲೇ ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡಿದ್ದರು. ಕೈವಾರದ ಕೂಲಿ ಮಠದಲ್ಲಿ ಸಂಸ್ಕೃತ, ತೆಲುಗು, ಕನ್ನಡ ಭಾಷೆಯಲ್ಲಿ ಪ್ರೌಢಿಮೆ ಪಡೆದರು. ಕಲ್ಲು ಬಾಯಲ್ಲಿಟ್ಟುಕೊಂಡು ಅದು ಕಲ್ಲು ಸಕ್ಕರೆ ಆಗುವವರೆಗೂ ತಪಸ್ಸು ಮಾಡಿದರೆಂಬ ಪ್ರತೀತಿಯಿದೆ.ಅವರು ರಚಿಸಿದ ಕಾಲಜ್ಞಾನ ಇಂದಿಗೂ ಹಲವು ಸತ್ಯಗಳನ್ನು ಹೊರ ಹಾಕುತ್ತಲೇ ಇದೆ.ವರ್ತಮಾನದಲ್ಲಿ ನಡೆಯುವ ಘಟನೆಗಳನ್ನು ಅವರು ಅಂದೇ ಬರೆದಿಟ್ಟಿದ್ದರು.ಅಂತಹ ಮೇರುಪುರುಷ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದರು. ತಹಸೀಲ್ದಾರ್ ರಾಜೇಶ್ ಕುಮಾರ್ ಮಾತನಾಡಿ, ಅಲ್ಪ ಮಾನವರಾಗಬೇಡಿ, ವಿಶ್ವ ಮಾನವರಾಗಿ ಎಂಬ ಅವರ ನುಡಿಯಂತೆ ಎಲ್ಲರೂ ಬದುಕಬೇಕಾಗಿದೆ. ಅವರನ್ನು ಒಂದು ಜನಾಂಗಕ್ಕೆ ಸೀಮಿತಗೊಳಿಸದೇ ಎಲ್ಲಾ ಜನಾಂಗದವರು ಅವರ ತತ್ವ ಆದರ್ಶಗಳನ್ನು ಪಾಲಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ಅಶೋಕ್ ಬಾಬು ರಂಗನಾಥ್, ಬಿಜಿ ಪದ್ಮನಾಭ್, ಬಿ ಎನ್ ಪ್ರಕಾಶ್, ವೆಂಕಟಾಚಲ, ಸೂರ್ಯನಾರಾಯಣ, ಅಣ್ಣೀಶ್, ವೆಂಕಟೇಶ್, ಶ್ರೀನಿವಾಸ್, ಸಿದ್ದಪ್ಪ, ಸುಧಾಶೆಟ್ಟಿ, ಮಂಜುಳಾ ಮುಂತಾದವರು ಹಾಜರಿದ್ದರು.