ಬಿ. ಖಾತೆ ನೀಡಲು ಆದೇಶದಿಂದ ಜನತೆಗೆ ಅನುಕೂಲ

| Published : Feb 26 2025, 01:03 AM IST

ಸಾರಾಂಶ

ಫೆ. 18 ರಿಂದ ಮೇ 10ರವರೆಗೆ ಬಿ ಖಾತೆ ಮಾಡಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಇದಕ್ಕೆ ಕಾರಣರಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ನಗರಾಭಿವೃದ್ದಿ ಮತ್ತು ಪೌರಾಡಳಿತ ಸಚಿವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ರಾಜ್ಯ ಸರ್ಕಾರ ಬಿ. ಖಾತೆ ನೀಡಲು ಆದೇಶ ಮಾಡಿದ್ದು, ಇದರಿಂದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಜನತೆಗೆ ಅನುಕೂಲವಾಗಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಫೆ. 18 ರಿಂದ ಮೇ 10ರವರೆಗೆ ಬಿ ಖಾತೆ ಮಾಡಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಇದಕ್ಕೆ ಕಾರಣರಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ನಗರಾಭಿವೃದ್ದಿ ಮತ್ತು ಪೌರಾಡಳಿತ ಸಚಿವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪಟ್ಟಣದ ಪುರಸಭೆಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಪಟ್ಟಣದ ಪುರಸಭೆಯ 23 ವಾರ್ಡುಗಳ ಸದಸ್ಯರೊಡಗೂಡಿ ಅಧಿಕಾರಿಗಳ ಜತೆಯಲ್ಲಿ ಎಲ್ಲ ವಾರ್ಡುಗಳಲ್ಲಿಯೂ ಬಿ. ಖಾತಾ ಅಭಿಯಾನ ನಡೆಸಿ ಪಟ್ಟಣದ ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡುವ ಭರವಸೆ ನೀಡಿದರು. ಇದರಿಂದ ಮೂರು ಸಾವಿರ ಮಂದಿ ಫಲಾನುಭವಿಗಳು ಅನುಕೂಲ ಪಡೆಯಲಿದ್ದು, ಸರ್ಕಾರ ನಿಗಧಿಪಡಿಸಿರುವ ಗಡುವಿನೊಳಗೆ ಎಲ್ಲರೂ ಬಿ.ಖಾತೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಟ್ಟಣದ ನಾಲ್ಕು ದಿಕ್ಕಿನಲ್ಲಿ ಜಿ+2 ಇಂದ ಜಿ+3 ಗೆ ಗುಂಪು ಮನೆಗಳನ್ನು ಉನ್ನತೀಕರಿಸಿ ಪ್ರಸ್ತಾವನೆಗೆ ವಸತಿ ಸಚಿವ ಜಮೀರ್ ಅಹಮದ್ ಅವರಿಂದ ಅನುಮೋದನೆ ಪಡೆಯಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ಅಮೃತ್ 2.0 ಯೋಜನೆಯಡಿ 20 ಕೋಟಿ ಅನುದಾನದಲ್ಲಿ ಯುಜಿಡಿ ಕಾಮಗಾರಿಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಟ್ಟಣದ ಪ್ರಮುಖ ವೃತ್ತಗಳಾದ ಕೃಷ್ಣರಾಜೇಂದ್ರ ಮತ್ತು ಪುರಸಭೆ ವೃತ್ತಗಳನ್ನು ಕಾವೇರಿ ಮಾತೆ ಹಾಗೂ ಕೃಷ್ಣರಾಜೇಂದ್ರ ಒಡೆಯರ್ ಪ್ರತಿಮೆಗಳು ಮತ್ತು ಕಾರಂಜಿ ಸಹಿತ ಸೌಂದರ್ಯೀಕರಣ ಮಾಡಲಿದ್ದು, ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರತ್ಯೇಕ ಪಟ್ಟಣ ಪೊಲೀಸ್ ಠಾಣೆ ತೆರೆಯಲು ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದರು.

ಪುರಸಭೆ ಅಧ್ಯಕ್ಷ ಶಿವುನಾಯಕ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಪುರಸಭೆ ಉಪಾಧ್ಯಕ್ಷೆ ವಸಂತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ. ಶಂಕರ್, ಸದಸ್ಯರಾದ ಪ್ರಕಾಶ್, ಕೆ.ಪಿ. ಪ್ರಭುಶಂಕರ್, ಕೆ.ಜಿ. ಸುಬ್ರಮಣ್ಯ, ಕೆ.ಎಲ್. ಜಗದೀಶ್, ಜಾವಿದ್‌ ಪಾಷಾ, ನಟರಾಜು, ಸೈಯದ್‌ ಸಿದ್ದಿಕ್, ಶಂಕರ್‌ಸ್ವಾಮಿ, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್ ಇದ್ದರು.