ನೀರು ಪೂರೈಕೆಯಾಗದಿದ್ದರೂ ಕರ ವಸೂಲಿ: ದರ ಪರಿಷ್ಕರಣೆಗೆ ಆಕ್ರೋಶ

| Published : Mar 22 2025, 02:01 AM IST

ನೀರು ಪೂರೈಕೆಯಾಗದಿದ್ದರೂ ಕರ ವಸೂಲಿ: ದರ ಪರಿಷ್ಕರಣೆಗೆ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಅನಧಿಕೃತ ನಲ್ಲಿಗಳನ್ನು ತೆರವು ಮಾಡುವವರೆಗೂ ದರ ಪರಿಷ್ಕರಣೆಗೆ ನನ್ನ ವಿರೋಧವಿದೆ. ನಲ್ಲಿಗಳಿಗೆ ಮೋಟರ್ ಸಂಪರ್ಕಗಳನ್ನು ಅಳವಡಿಸಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಚಾರಪಡಿಸಿ ಮೋಟರ್ ಅಳವಡಿಕೆ ತಡೆಯಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಮರ್ಪಕ ನೀರು ಪೂರೈಕೆಯಾಗದಿದ್ದರೂ ಕರ ವಸೂಲಿ ಹಾಗೂ ನೀರಿನ ದರ ಪರಿಷ್ಕರಣೆಗೆ ಆಕ್ರೋಶ ವ್ಯಕ್ತಪಡಿಸಿದ ಪುರಸಭೆ ಸದಸ್ಯರು ಕೂಡಲೇ ಅನಧಿಕೃತ ನಲ್ಲಿಗಳನ್ನು ಅಧಿಕೃತಗೊಳ್ಳಬೇಕೆಂದು ಒತ್ತಾಯಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ನಾಗರತ್ನ ತಿಳಿಸುತ್ತಿದ್ದಂತೆ ಉಪಾಧ್ಯಕ್ಷ ಎನ್.ಬಸವರಾಜು ಮಾತನಾಡಿ, ಅನಧಿಕೃತ ನಲ್ಲಿಗಳನ್ನು ತೆರವು ಮಾಡುವವರೆಗೂ ದರ ಪರಿಷ್ಕರಣೆಗೆ ನನ್ನ ವಿರೋಧವಿದೆ ಎಂದರು.

ನಲ್ಲಿಗಳಿಗೆ ಮೋಟರ್ ಸಂಪರ್ಕಗಳನ್ನು ಅಳವಡಿಸಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಚಾರಪಡಿಸಿ ಮೋಟರ್ ಅಳವಡಿಕೆ ತಡೆಯಬೇಕೆಂದು ಸೂಚಿಸಿದರು.

ಪುರಸಭೆ ಸದಸ್ಯ ಎಂ.ಆರ್ ರಾಜಶೇಖರ್ ಮಾತನಾಡಿ, ಹಲವು ವಾರ್ಡ್ ಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ನೀರು ಹೆಚ್ಚಾಗಿ ಹೋಗುವ ವಾರ್ಡ್ ಗಳಲ್ಲಿ ಪುರಸಭೆ ಸಿಬ್ಬಂದಿ ಕರ ವಸೂಲಿಗೆ ಹೋಗುವುದಿಲ್ಲ. ನೀರು ಬಾರದಿದ್ದರೂ ಕೆಲ ವಾರ್ಡ್ ಗಳಿಗೆ ಪ್ರತಿ ತಿಂಗಳು ನೀರಿನ ಕರ ವಸೂಲಿ ಮಾಡುತ್ತಾರೆ. ಈ ಬಗ್ಗೆ ಅಧ್ಯಕ್ಷರು ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸದಸ್ಯ ನೂರುಲ್ಲಾ ಮಾತನಾಡಿ, 6ನೇ ವಾರ್ಡ್ ನಲ್ಲಿ ಒಂದು ವಾರದಿಂದ ಕಸ ತೆಗೆದುಕೊಂಡು ಹೋಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಸರಿಯಾದ ಉತ್ತರ ನೀಡುತ್ತಿಲ್ಲ. ಪ್ರತಿ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸುತ್ತಿದ್ದರೂ ನನ್ನ ಮಾತಿಗೆ ಬೆಲೆ ಇಲ್ಲದಂತಾಗಿದೆಯ ನನ್ನ ಬೇಡಿಕೆಗಳು ಈಡೇರದಿದ್ದರೇ ಬಜೆಟ್ ಮಂಡಿಸುವ ದಿನ ಪುರಸಭೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ನೀರಿನ ದರವನ್ನು ಸಧ್ಯದ ಪರಿಸ್ಥಿತಿಯಲ್ಲಿ ಪರಿಷ್ಕರಣೆ ಮಾಡುವುದು ಬೇಡ ಎಂದಾಗ ಮುಖ್ಯಾಧಿಕಾರಿ 2017ರಲ್ಲಿ ನೀರಿನ ದರ ಪರಿಷ್ಕರಣೆ ಮಾಡಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕೆಂಬ ನಿಯಮವಿದೆ ಎಂದರು.

ಬೀದಿ ದೀಪ, ಹೊರಗುತ್ತಿಗೆ ನೌಕರರ ವೇತನ, ವಾಹನಗಳ ನಿರ್ವಹಣೆ ಸೇರಿದಂತೆ ಇತರೆ ಖರ್ಚುಗಳಿಗೆ ಪ್ರತಿ ತಿಂಗಳು 40 ಲಕ್ಷ ಬೇಕಾಗುತ್ತದೆ. ತೆರಿಗೆ ಹೆಚ್ಚಳ ಬೇಡ ಎಂದರೆ ಪುರಸಭೆ ನಡೆಸುವುದು ಹೇಗೆ ಎಂದು ಪ್ರಶ್ನಿದರು.

ಸದಸ್ಯ ಶಿವಸ್ವಾಮಿ ಮಾತನಾಡಿ, ಪಟ್ಟಣದ ಅನಧಿಕೃತ ನಲ್ಲಿಗಳನ್ನು ಅಧಿಕೃತಗೊಳಿಸಿ ಗೃಹ ಬಳಕೆಗೆ 20 ರು ಹಾಗೂ ವಾಣಿಜ್ಯ ಬಳಕೆಗೆ 100 ಹೆಚ್ಚಳ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕೆ ಇತರೆ ಸದಸ್ಯರು ಸಹಮತ ಸೂಚಿಸಿದರು.

ಸದಸ್ಯ ನಂದಕುಮಾರ್ ಮಾತನಾಡಿ, ಸಾಮಾನ್ಯ ಸಭೆ ಕೇವಲ ಅನುಮೋದನೆ ಪಡೆಯುವುದಕ್ಕೆ ಮಾತ್ರ ಸೀಮಿತಗೊಳ್ಳುತ್ತದೆ. ಸಭೆಯಲ್ಲಿ ಚರ್ಚೆಯಾದ ವಿಷಯಗಳು ಅನುಷ್ಠಾನಕ್ಕೆ ಬರುತ್ತಿಲ್ಲ. ನೀರಿನ ಪೈಪ್ ಹೊಡೆದು ಹೋಗಿರುವುದನ್ನು ಸರಿಮಾಡುವಂತೆ ಬೇಡಿಕೊಂಡರೂ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಸಭೆಯಲ್ಲಿ ಸಮಸ್ಯೆ ಬಗ್ಗೆ ಹೇಳಿದರೆ ಬಂದೆಪುಟ್ಟ ಹೋದೆಪುಟ್ಟ ಎಂಬಂತೆ ಸಭೆಯಲ್ಲಿ ಕೊಡುವ ತಿಂಡಿಯನ್ನು ತಿಂದು ಹೋಗುವಂತಾಗಿದೆ. ಸಮಸ್ಯೆಗಳನ್ನು ಈಡೇರಿಸುತ್ತಿಲ್ಲ. ಆಡಳಿತದ ಅವಧಿ ಮುಗಿದರೂ ಯಾವುದೇ ಅಭಿವೃದ್ದಿ ಕಾರ್ಯಗಳು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಮುಖ್ಯಾಧಿಕಾರಿ ಎಂ.ಸಿ ನಾಗರತ್ನ, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಎನ್. ಬಸವರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್ ಕೃಷ್ಣ ಸೇರಿದಂತೆ ಇತರರು ಇದ್ದರು.