ಟ್ಯಾಕ್ಸಿ ಚಾಲಕರು ಒಗ್ಗಟ್ಟು ಪ್ರದರ್ಶಿಸಬೇಕು : ಪ್ರಕಾಶ್

| Published : Aug 30 2024, 01:03 AM IST

ಸಾರಾಂಶ

ಚಿಕ್ಕಮಗಳೂರು, ಟ್ಯಾಕ್ಸಿ ಚಾಲಕರು ಪರಸ್ಪರ ಒಗ್ಗಟ್ಟಿನಿಂದ ಒಂದಾಗಿ ಮುನ್ನಡೆದರೆ ಮಾತ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ರಾಜ್ಯ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆ ರಾಜ್ಯಾಧ್ಯಕ್ಷ ಎಚ್.ಕೆ.ಪ್ರಕಾಶ್ ಮೂಡಿಗೆರೆ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ರಾಜ್ಯ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಟ್ಯಾಕ್ಸಿ ಚಾಲಕರು ಪರಸ್ಪರ ಒಗ್ಗಟ್ಟಿನಿಂದ ಒಂದಾಗಿ ಮುನ್ನಡೆದರೆ ಮಾತ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ರಾಜ್ಯ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆ ರಾಜ್ಯಾಧ್ಯಕ್ಷ ಎಚ್.ಕೆ.ಪ್ರಕಾಶ್ ಮೂಡಿಗೆರೆ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ರಾಜ್ಯ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆ ಉದ್ಘಾಟನಾ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಬ್ಬರೇ ಟ್ಯಾಕ್ಸಿ ಚಾಲಕ ಸರ್ಕಾರದ ಸೌಲಭ್ಯಗಳು ಪಡೆಯಲು ಕಷ್ಟವಾಗಲಿದೆ. ಅದೇ ವೇದಿಕೆ ಅಥವಾ ಸಂಘಟನೆ ಮೂಲಕ ತೆರಳಿ ಸರ್ಕಾರಕ್ಕೆ ಒತ್ತಾಯಿಸಿದರೆ ಖಂಡಿತ ಚಾಲಕರ ವೈಯಕ್ತಿಕ ಜೀವನಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಖುದ್ದು ಮುಂದಾಗಲಿದೆ ಎಂದು ತಿಳಿಸಿದರು.ಹಗಲು, ರಾತ್ರಿ ಎನ್ನದೇ ಚಾಲಕರು ಕರ್ತವ್ಯ ನಿರ್ವಹಿಸುತ್ತಾರೆ. ಆದರೆ, ಈವರೆಗೂ ಯಾವುದೇ ರೀತಿ ಭದ್ರತೆ ದೊರಕಿಲ್ಲ. ಅಪಘಾತ ಅಥವಾ ಇನ್ಯಾವುದೇ ದುರ್ಘಟನೆ ನಡೆದರೆ ಚಾಲಕರ ಕುಟುಂಬ ಬೀದಿಗೆ ಬೀಳಲಿದೆ. ಆದ್ದರಿಂದ ಇವುಗಳನ್ನು ತಪ್ಪಿಸುವ ಸಲುವಾಗಿ ಎಲ್ಲಾ ಚಾಲಕರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು.ವೇದಿಕೆ ರಾಜ್ಯ ಗೌರವಾಧ್ಯಕ್ಷ ಹಾಲಳ್ಳಿ ಮಂಡ್ಯ ರಾಜು ಮಾತನಾಡಿ, ಚಾಲಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಘಟನೆ ಅತ್ಯವಶ್ಯಕ. ಈ ಮೂಲಕ ಸರ್ಕಾರ ಅಥವಾ ಅಧಿಕಾರಿಗಳಿಗೆ ನೇರವಾಗಿ ಪ್ರಶ್ನಿಸಬಹುದು. ನ್ಯಾಯ ದೊರಕದಿದ್ದರೆ ಹೋರಾಟ ಕೈಗೊಳ್ಳಬಹುದು. ಹಾಗಾಗಿ ಚಾಲಕರು ಭಿನ್ನಾಭಿಪ್ರಾಯ ತೊರೆದು ಒಗ್ಗಟ್ಟಿನ ಶಕ್ತಿ ತೋರ್ಪಡಿಸಬೇಕು ಎಂದರು.ಚಾಲಕ, ಅಪಘಾತ ಸಂಭವಿಸಿ ಮೃತರಾದರೆ ಕಾರ್ಮಿಕ ಇಲಾಖೆ ಕೇವಲ 5 ಲಕ್ಷ ರು. ನೀಡಿ ಕೈ ತೊಳೆದುಕೊಳ್ಳಲಿದೆ. ಅಂಗವೈಕಲ್ಯವಾದರೆ 50-60 ಸಾವಿರ ಮಾತ್ರ ನೀಡಲಿದೆ. ಆದರೆ, ಕಟ್ಟಡ ಕಾರ್ಮಿಕರಿಗೆ ಅನೇಕ ಸೌಲಭ್ಯಗಳಿರುವ ಕಾರಣ ಆ ಸೌಲಭ್ಯವನ್ನು ಚಾಲಕರು ವಿಸ್ತರಿಸಬೇಕು ಎಂದು ಮನವಿ ಮಾಡಿದರು.ಚಾಲಕರು ಸಂಪೂರ್ಣ ದಾಖಲಾತಿ, ಸಮವಸ್ತ್ರ, ಸೀಟ್‌ ಬೆಲ್ಟ್ ಧರಿಸಿದರೂ ಅಥವಾ ಟ್ರಾಫಿಕ್ ನಿಯಮಗಳನ್ನು ಪರಿಪಾಲಿಸಿ ದರೂ ಕೆಲವು ಟ್ರಾಫಿಕ್ ಅಧಿಕಾರಿಗಳಿಗೆ ದಂಡ ಕಟ್ಟುವುದು ತಪ್ಪುತ್ತಿಲ್ಲ. ಅಲ್ಲದೇ ಚಾಲಕರ ವೃತ್ತಿಯಲ್ಲಿರುವ ವ್ಯಕ್ತಿಯನ್ನು ಗೌರವಿಸುವುದು ತೀರಾ ವಿರಳ ಎಂದು ಹೇಳಿದರು.ಇದೇ ವೇಳೆ ರಾಜ್ಯ ಶ್ರಮಿಕ ಚಾಲಕರ ವೇದಿಕೆ ನೂತನ ರಾಜ್ಯ ಗೌರವ ಅಧ್ಯಕ್ಷ ಹಾಲಳ್ಳಿ ಮಂಡ್ಯ ರಾಜು, ರಾಜ್ಯಾಧ್ಯಕ್ಷ ಎಚ್.ಕೆ.ಪ್ರಕಾಶ್ ಮೂಡಿಗೆರೆ, ಉಪಾಧ್ಯಕ್ಷ ಸಂಗಪ್ಪ ಅಮೀನಗಡ, ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಸಹ ಕಾರ್ಯದರ್ಶಿ ರಾಜಕುಮಾರ್, ಖಜಾಂಚಿ ಪಿ.ನಾಗರಾಜ್ ಅವರನ್ನು ಆಯ್ಕೆ ಮಾಡಲಾಯಿತು.ಇದೇ ವೇಳೆ ಹಿರಿಯ ವೈದ್ಯ ಡಾ. ರಾಮಾಚಣ ಅಡ್ಯಂತಾಯ, ಪೌರ ಕಾರ್ಮಿಕ ಹಿರಿಯ ಮಹಿಳೆ ಎಸ್.ನಾಗಮ್ಮ ಮತ್ತು ವಾಣಿಜ್ಯ ಬಳಕೆ ವಾಹನ ಸಲಹೆಗಾರ ಅಮರನಾಥ್ ಅವರಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಟ್ಯಾಕ್ಸಿ ವೇದಿಕೆಯ ಲಾಂಛನ ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಚಾಲಕರಾದ ಕೃಷ್ಣಮೂರ್ತಿ, ಸುನೀಲ್, ಗುರುಪ್ರಸಾದ್, ರಮೇಶ್ ಬೇಗಾರ್, ರಮೇಶ್, ರಾಹುಲ್, ರಾಜು, ಹುಚ್ಚಪ್ಪಕೋರೆ, ವೆಂಕಟೇಶ್ ಉಪಸ್ಥಿತರಿದ್ದರು. 29 ಕೆಸಿಕೆಎಂ 5ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆ ಲಾಂಛನ ಬಿಡುಗಡೆಗೊಳಿಸಲಾಯಿತು. ಪ್ರಕಾಶ್‌ ಮೂಡಿಗೆರೆ, ಹಾಲಳ್ಳಿ ಮಂಡ್ಯ ರಾಜು, ಸಂಗಪ್ಪ, ಗಿರೀಶ್‌ ಇದ್ದರು.