ಟಿಬಿ ಡ್ಯಾಂ ಅನಾಹುತ; ನದಿ ಪಾತ್ರದ ಜನ ಭಯಭೀತ

| Published : Aug 12 2024, 12:45 AM IST

ಟಿಬಿ ಡ್ಯಾಂ ಅನಾಹುತ; ನದಿ ಪಾತ್ರದ ಜನ ಭಯಭೀತ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದ 19ನೇ ಗೇಟ್‌ ಕಡಿತಗೊಂಡಿದ್ದರಿಂದ ಅಪಾರ ಪ್ರಮಾಣದಲ್ಲಿ ನದಿಗೆ ಬೀರು ಹರಿಸುತ್ತಿರುವುದು.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ನ ಚೈನ್ ಲಿಂಕ್ ಕಡಿತಗೊಂಡಿದ್ದರಿಂದಾಗಿ ಜಿಲ್ಲೆಯ ನದಿಪಾತ್ರದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.

ಲಕ್ಷಾಂತರ ಕ್ಯುಸೆಕ್‌ ನೀರು ನದಿಗೆ ಹರಿಬಿಡುತ್ತಿರುವುದರಿಂದ ತುಂಗಭದ್ರಾ ನದಿ ವ್ಯಾಪ್ತಿಗೆ ಬರುವ ಜಿಲ್ಲೆಯ ಸಿಂಧನೂರು, ಮಾನ್ವಿ ಮತ್ತು ರಾಯಚೂರು ತಾಲೂಕು ಸೇರಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಅಚ್ಚುಕಟ್ಟು ಪ್ರದೇಶದಲ್ಲಿ ಅನಿರೀಕ್ಷಿತ ನೆರೆ ಭೀತಿ ಶುರುವಾಗಿದೆ.

ಪಕ್ಕದ ವಿಜಯನಗರ ಜಿಲ್ಲೆ ಮುನಿರಾಬಾದ್‌ ಸಮೀಪ ತುಂಗಭದ್ರಾ ಜಲಾಶಯವಿದ್ದು, 130 ಟಿಎಂಸಿ ಸಾಮರ್ಥ್ಯದ್ದಾಗಿದೆ. 33 ಕ್ರಸ್ಟ್‌ ಗೇಟ್‌ಗಳಿರುವ ಈ ಟಿಬಿ ಡ್ಯಾಂ 1953 ನಿರ್ಮಾಣಗೊಂಡಿದೆ. ಜಲಾಶಯದಲ್ಲಿ ಸುಮಾರು 27-30 ಟಿಎಂಸಿಯಷ್ಟು ಹೂಳು ತುಂಬಿದ್ದರಿಂದ ಸದ್ಯಕ್ಕೆ 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇತ್ತೀಚೆಗೆ ಮಲೆನಾಡಲ್ಲಿ ಭಾರಿ ಮಳೆಯಾಗಿದ್ದರಿಂದ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಲಕ್ಷಾಂತರ ಕ್ಯುಸೆಕ್‌ ನೀರನ್ನು ನದಿಗೆ ಬಿಟ್ಟಿದ್ದರಿಂದ ಹಲವು ದಿನಗಳ ನಂತರ ತುಂಗಭದ್ರಾ ನದಿ ಭರ್ತಿಯಾಗಿ ತುಂಬಿ ಹರಿಯುತ್ತಿದೆ. 2019ರಲ್ಲಿ ಮುನಿರಾಬಾದ್‌ ಸಮೀಪ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ ಬಳಿ ಗೇಟ್‌ ಮುರಿದಿದ್ದು ಬಿಟ್ಟರೆ, ಇಡೀ ಟಿಬಿ ಡ್ಯಾಂನ 70 ವರ್ಷದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಂಥದ್ದೊಂದು ದೊಡ್ಡ ಅನಾಹುತ ಸಂಭವಿಸಿದೆ. ನದಿಪಾತ್ರದಲ್ಲಿ ನೀರಿನ ಪ್ರಮಾಣವು ಏಕಾಏಕಿ ಹೆಚ್ಚಾಗಿದೆ.

ಅನಿರೀಕ್ಷಿತ ನೆರೆ: ಟಿಬಿ ಡ್ಯಾಂ ಭರ್ತಿಯಾಗಿದ್ದರಿಂದ 19ನೇ ಗೇಟ್‌ ರಿಪೇರಿಗೆ ಅಡ್ಡಿಯಾಗಿದೆ. ಸುಮಾರು 20 ಅಡಿ ನೀರಿನ ಮಟ್ಟ ಕಡಿಮೆ ಮಾಡಬೇಕಾಗಿದೆ. 55 ರಿಂದ 60 ಟಿಎಂಸಿಯಷ್ಟು ನೀರನ್ನು ಹೊರ ಬಿಡಬೇಕಾಗಿದೆ. ಇದರಿಂದಾಗಿ ವಿಜಯನಗರ ಸೇರಿ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಅನಿರೀಕ್ಷಿತ ನೆರೆ ಅನಿವಾರ್ಯವಾಗಿದೆ. ಈಗಾಗಲೇ ಲಕ್ಷಾಂತರ ಕ್ಯುಸೆಕ್‌ ನೀರನ್ನು ನದಿಗೆ ಹರಿಸುತ್ತಿದ್ದು, ಜಿಲ್ಲೆ ಮೂರು ತಾಲೂಕುಗಳ ನದಿಪಾತ್ರದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ನದಿಗೆ 5 ಲಕ್ಷ ಕ್ಯುಸೆಕ್‌ ನೀರು ಹರಿಸಿದ್ದೇ ಆದಲ್ಲಿ ಜಿಲ್ಲೆಯ ಸಿಂಧನೂರು, ಮಾನ್ವಿ ಮತ್ತು ರಾಯಚೂರು ತಾಲೂಕುಗಳ ಸುಮಾರು 33 ಗ್ರಾಮಗಳಿಗೆ ನೆರೆ ಆತಂಕ ಉಂಟಾಗಲಿದೆ. ಈಗಾಗಲೇ ಜಿಲ್ಲಾಡಳಿತದಿಂದ ನದಿಪಾತ್ರದಲ್ಲಿ ಕಟ್ಟೆಚ್ಚರ ವಹಿಸದ್ದು, ಜನರು ನದಿ ಸಮೀಪಕ್ಕೆ ಹೋಗದಂತೆ ಮುನ್ಸೂಚನೆ ಸಹ ನೀಡಲಾಗಿದೆ.

ಜಲಾಶಯ ನಿವರ್ಹಣೆಗೆ ಎಂಜಿನಿಯರ್‌ಗಳ ಕೊರತೆ: ಟಿಬಿ ಡ್ಯಾಂ ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಅವಘಡ ಜರುಗಿದೆ. ಬೇಸಿಗೆ ಅವಧಿಯಲ್ಲಿ ಜಲಾಶಯದಲ್ಲಿ ಕಡಿಮೆ ಪ್ರಮಾಣ ನೀರು ಇರುವಾಗ ಪ್ರತಿ ಗೇಟ್‌ಗಳನ್ನು ಪರಿಶೀಲಿಸಬೇಕಾಗಿತ್ತು. ಗೇಟ್‌ಗಳಿಗೆ ಗ್ರಿಸಿಂಗ್ ಮಾಡಬೇಕಿತ್ತು. ಜಲಾಶಯ ನಿರ್ವಹಣೆ ಮಾಡಲು ಎಂಜಿನಿಯರ್‌ಗಳ ಕೊರತೆಯಿದೆ. ಎಂಜಿನಿಯರ್‌ಗಳ ನಿರ್ಲಕ್ಷವೇ ಈಗಿನ ಅನಾಹುತಕ್ಕೆ ಕಾರಣ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಎಂಜಿನಿಯರ್ಗಳ ನಿವೃತ್ತಿ ಅಂಚಿನದಲ್ಲಿದ್ದಾರೆ. ಅವರಿಂದ ಸಮರ್ಪಕ ಕರ್ತವ್ಯ ನಿರ್ವಹಣೆ ಸಾಧ್ಯವಾಗಿಲ್ಲ. ಈ ಅನಾಹುತದಿಂದ ಬೆಳೆಗಳಿಗೆ ಬಹುತೇಕ ನೀರು ಕೊರತೆಯಾಗುವ ಸಾಧ್ಯತೆಯಿದೆ. ಜಲಾಶಯದ ನೀರಿನ ಮೂಲ ಪ್ರದೇಶಗಳಲ್ಲಿ ಬರುವ ದಿನಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ಮತ್ತೊಮ್ಮೆ ಜಲಾಶಯ ಭರ್ತಿಯಾಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಎಡದಂಡೆ, ಬಲದಂಡೆ, ಕೆಳದಂಡೆ, ಮೇಲ್ದಂಡೆ ಸೇರಿದಂತೆ ಇತರೆ ಕಾಲುವೆಗಳ ವ್ಯಾಪ್ತಿಯಲ್ಲಿ ಒಟ್ಟು 15 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯುವ ಬೆಳೆಗಳಿಗೆ ತೊಂದರೆಯಾಗಿಲಿದೆ. ಈ ಬಾರಿ ಒಂದು ಬೆಳೆಗೆ ನೀರು ಕೊರತೆಯಾಗುವ ಸಾಧ್ಯತೆಯಿದೆ. ಬರುವ ಬೇಸಿಗೆ ವೇಳೆಯಲ್ನೀಲಿ ರಿಗೆ ತೀವ್ರ ಸಂಕಷ್ಟ ಸೃಷ್ಟಿಯಾಗಿಲಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಗೌರವಾಧ್ಯಕ್ಷರಾದ ಚಾಮರಸ ಮಾಲಿಪಾಟೀಲ್‌ ಹೇಳಿದ್ದಾರೆ.