ತುಂಗಭದ್ರಾ ಜಲಾಶಯದ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈಗ ಜಲಾಶಯದಲ್ಲಿ 34.221 ಟಿಎಂಸಿ ನೀರು ಸಂಗ್ರಹವಾಗಿದೆ.
ಹೊಸಪೇಟೆ : ತುಂಗಭದ್ರಾ ಜಲಾಶಯದ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈಗ ಜಲಾಶಯದಲ್ಲಿ 34.221 ಟಿಎಂಸಿ ನೀರು ಸಂಗ್ರಹವಾಗಿದ್ದು, 19ನೇ ಗೇಟ್‌ಗೆ ಸ್ಟಾಪ್‌ಲಾಗ್ ಅಳವಡಿಕೆ ಮಾಡಿರುವುದನ್ನು ತೆರವುಗೊಳಿಸಿ ಕ್ರಸ್ಟ್ ಗೇಟ್ ನಿರ್ಮಾಣ ಮಾಡುವುದಕ್ಕೂ ಈಗ ಭಾರೀ ಪ್ರಮಾಣದ ಒಳ ಹರಿವು ಅಡ್ಡಿಯಾಗಿದೆ. ಹಾಗಾಗಿ 19ನೇ ಗೇಟ್ ಅಳವಡಿಕೆ ಮಾಡುವ ಕಾರ್ಯ ಇನ್ನಷ್ಟು ದಿನಗಳವರೆಗೆ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟೈಸಿದೆ.
ಗುಜರಾತ ಮೂಲದ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿ 19ನೇ ಗೇಟ್‌ನ ಕ್ರಸ್ಟ್‌ಗೇಟ್ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದೆ. ಈಗಾಗಲೇ ಗೇಟ್ ನಿರ್ಮಾಣ ಕಾರ್ಯವೂ ಅಂತಿಮ ಹಂತ ತಲುಪಿದೆ. ಈಗ ಜಲಾಶಯದ ಒಳ ಹರಿವು ಗುರುವಾರ 51,654 ಕ್ಯುಸೆಕ್ ತಲುಪಿದೆ. ಒಳ ಹರಿವು ಭಾರೀ ಪ್ರಮಾಣದಲ್ಲಿ ಇದೆ. ಇನ್ನೊಂದೆಡೆ ತುಂಗಭದ್ರಾ ಮಂಡಳಿ ಅಧಿಕಾರಿಗಳು ಪರಿಣತ ತಜ್ಞ ಕನ್ನಯ್ಯ ನಾಯ್ಡು ಅಭಿಪ್ರಾಯ ತೆಗೆದುಕೊಂಡಾಗ ಭಾರೀ ಪ್ರಮಾಣದಲ್ಲಿ ಒಳ ಹರಿವು ಇರುವ ಹಿನ್ನೆಲೆ ಈಗಲೇ ಗೇಟ್ ಸ್ಥಾಪನೆ ಮಾಡುವುದು ಬೇಡ, ಸ್ಟಾಪ್ ಲಾಗ್ ಗಟ್ಟಿಯಾಗಿದೆ. ಹಾಗಾಗಿ ಒಳ ಹರಿವು ತಗ್ಗಿದ ಬಳಿಕವಷ್ಟೇ ಗೇಟ್ ನಿರ್ಮಾಣ ಕಾರ್ಯ ನಡೆಯಲಿ ಎಂದು ಸಲಹೆ ನೀಡಿದ್ದಾರೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.
19ನೇ ಗೇಟ್‌ನ ಸ್ಟಾಪ್‌ಲಾಗ್ ತೆರವುಗೊಳಿಸಿ, ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯವನ್ನು ಜೂನ್ ಅಂತ್ಯದೊಳಗೆ ಗುಜರಾತ ಮೂಲದ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿ ಮಾಡಬೇಕಿತ್ತು. ಈಗಾಗಲೇ ಗೇಟ್ ನಿರ್ಮಾಣ ಕಾರ್ಯ ಕೂಡ ಅಂತಿಮ ಹಂತದಲ್ಲಿದೆ. ಜಲಾಶಯದ ಒಳ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಕ್ರಸ್ಟ್ ಗೇಟ್ ಯಾವಾಗ ಅಳವಡಿಕೆ ಮಾಡುವುದು ಯಾವಾಗ ಸೂಕ್ತ ಎಂಬುದರ ಬಗ್ಗೆ ತುಂಗಭದ್ರಾ ಮಂಡಳಿ ಜೂ. 20ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.