ಒಂದನೇ ತರಗತಿಯಿಂದಲೇ ಮಕ್ಕಳಿಗೆ ಆಯುರ್ವೇದ ಕಲಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಂದನೇ ತರಗತಿಯಿಂದಲೇ ಮಕ್ಕಳಿಗೆ ಆಯುರ್ವೇದ ಕಲಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸಲಹೆ ನೀಡಿದರು.

ಕಜೆ ಆಯುರ್ವೇದ ಚಾರಿಟೇಬಲ್ ಫೌಂಡೇಶನ್ ಮುಖ್ಯಸ್ಥ ಡಾ। ಗಿರಿಧರ ಕಜೆ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ‘ಎರಡನೇ ಆಯುರ್ವೇದ ವಿಶ್ವ ಸಮ್ಮೇಳನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಸದ್ಯ 12ನೇ ತರಗತಿ ಬಳಿಕ ಕೆಲ ವರ್ಷ ಮಾತ್ರ ಆಯುರ್ವೇದ ಹೇಳಿಕೊಡಲಾಗುತ್ತಿದೆ. ಆಯುರ್ವೇದವು ಮಹಾ ಸಮುದ್ರವಾಗಿದ್ದು, ಅದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ವಿದ್ಯೆಯಲ್ಲ. ಆದ್ದರಿಂದ ಪಠ್ಯಕ್ರಮದ ಅಂಗವಾಗಿ ಒಂದನೇ ತರಗತಿಯಿಂದಲೇ ಅಭ್ಯಾಸ ಮಾಡುವಂತಾಗಬೇಕು. ಎಳೆವೆಯಿಂದಲೇ ಮಕ್ಕಳಿಗೆ ಆಯುರ್ವೇದ ಕಲಿಸಿದರೆ ಬಹಳಷ್ಟು ಅನುಕೂಲಗಳಿವೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು. ಸಮ್ಮೇಳನದಲ್ಲಿ ಈ ನಿರ್ಣಯ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ದೇವರ ಸಮ್ಮೇಳನ:

ಜಗತ್ತಿನಲ್ಲಿ ಕೊಲ್ಲುವ ಹಾಗೂ ಕಾಯುವ ಶಕ್ತಿ ಎಂಬ ಎರಡು ಶಕ್ತಿಗಳು ಸದಾ ಇರುತ್ತವೆ. ದೇವರದ್ದು ಕಾಯುವ ಕೆಲಸವಾದರೆ, ರಾಕ್ಷಸರ ಕೆಲಸ ಕೊಲ್ಲುವುದು ಹಾಗೂ ತೊಂದರೆ ನೀಡುವುದಾಗಿದೆ. ದೇವರು ನೇರವಾಗಿ ಸಹಾಯ ಮಾಡುವುದಿಲ್ಲ. ಜೀವ ಉಳಿಸುವ ಕಾರ್ಯವನ್ನು ದೇವರ ರೂಪದಲ್ಲಿ ವೈದ್ಯರು ಮಾಡುತ್ತಾರೆ. ಹಾಗಾಗಿ ಇದು ಕೇವಲ ಆಯುರ್ವೇದ ವೈದ್ಯರ ಸಮ್ಮೇಳನವಲ್ಲ, ಇದು ದೇವರ ಸಮ್ಮೇಳನ. ಡಾ.ಗಿರಿಧರ ಕಜೆ ದೇವರನ್ನೆಲ್ಲಾ ಸೇರಿಸಿ ಸಮ್ಮೇಳನ ಮಾಡುತ್ತಿದ್ದಾರೆ. ಅವರ ಶ್ರಮ ನಾಡಿನ ಅಭಿನಂದನೆಗೆ ಅರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮ್ಮೇಳನದ ರೂವಾರಿಯಾದ ಡಾ.ಗಿರಿಧರ ಕಜೆ ಮಾತನಾಡಿ, ಆಯುರ್ವೇದವು ಪರ್ಯಾಯ ವೈದ್ಯಕೀಯ ಪದ್ಧತಿಯಲ್ಲ. ಅದು ಈ ನೆಲದ ವೈದ್ಯಕೀಯ ಪದ್ಧತಿ. ಹಾಗೆಯೇ ಇದು ಸಮಗ್ರ ಜೀವನ ಪದ್ಧತಿಯೂ ಹೌದು. ಈ ಸಮ್ಮೇಳನ ಹಲವು ದಾಖಲೆಗಳನ್ನು ಬರೆಯಲಿದೆ. ದೇಶ ವಿದೇಶಗಳ 6 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು, ನೂರಾರು ಮಳಿಗೆಗಳು, ಆಯುರ್ವೇದ ಅನುಭವ ಕೇಂದ್ರಗಳು ಸೇರಿ ಹಲವು ವೈಶಿಷ್ಟ್ಯಗಳ ಮೂಲಕ ಇತಿಹಾಸ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆಯುಷ್ ಸಚಿವಾಲಯದ ಸಲಹೆಗಾರ ಡಾ.ಕೌಸ್ತುಭ ಉಪಾಧ್ಯಾಯ, ಪತ್ರಕರ್ತ ರವೀಂದ್ರ ಭಟ್‌ ಐನಕೈ, ಹಿಮಾಲಯ ಕಂಪೆನಿಯ ಸಿ.ಎಫ್.ಓ. ಜಯಶ್ರೀ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.

ಎಲ್ಲಾ ಆರೋಗ್ಯ ಪದ್ಧತಿಗಳ ಮೂಲ ಉದ್ದೇಶವೂ ಆರೋಗ್ಯವನ್ನು ಕಾಪಾಡುವುದೇ ಆಗಿದೆ. ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಪದ್ಧತಿ ಅಳವಡಿಸಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಒಂದು ಪದ್ಧತಿ ಬೇರೊಂದು ಪದ್ಧತಿಯನ್ನು ತೆಗಳುವಂತೆ ಆಗಬಾರದು.

- ಶ್ವಾಸಗುರು ವಚನಾನಂದ ಸ್ವಾಮೀಜಿ---