ಸಾರಾಂಶ
ಸೋಮವಾರ ಡಾ.ಹೆಗ್ಗಡೆ ಜನ್ಮದಿನ ಹಿನ್ನೆಲೆಯಲ್ಲಿ ನಿರೀಕ್ಷಾ ಹೊಸ್ಮಾರು ಜನ್ಮದಿನದ ಶುಭಾಶಯ ಕೋರುವ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡಿದರು. ಜೈನ್‌ಮಿಲನ್ ವತಿಯಿಂದ ಹೆಗ್ಗಡೆ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಅರ್ಪಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಾಹಿತ್ಯಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬಂಧವಿದ್ದು, ಅಂತರಾತ್ಮದಲ್ಲಿ ದೇವರನ್ನು ಸ್ಮರಿಸಿ ಧ್ಯಾನ ಮಾಡಿ ರಾಗ, ತಾಳ, ಲಯ ಬದ್ಧವಾಗಿ ಭಜನೆ ಹಾಡಿದರೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಮಕ್ಕಳಿಗೂ, ನಿತ್ಯವೂ ಭಜನೆ ಹಾಡುವ ಸಂಸ್ಕಾರ ನೀಡಿದರೆ ಅವರು ಧರ್ಮದ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಭಾನುವಾರ ಬೆಳ್ತಂಗಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಭಾರತೀಯ ಜೈನ್‌ಮಿಲನ್ ನೇತೃತ್ವದಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಶಾಖೆಯ ಸಹಯೋಗದೊಂದಿಗೆ ಆಯೋಜಿಸಿದ ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾಧ್ಯವಾದರೆ ಮಕ್ಕಳೇ ಸಾಹಿತ್ಯ ರಚನೆ ಮಾಡಿ ರಾಗ, ಭಾವ, ತಾಳ ಸಂಯೋಜನೆಯೊಂದಿಗೆ ಭಜನೆ ಹಾಡುವ ಅಭ್ಯಾಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.ಸೋಮವಾರ ಡಾ.ಹೆಗ್ಗಡೆ ಜನ್ಮದಿನ ಹಿನ್ನೆಲೆಯಲ್ಲಿ ನಿರೀಕ್ಷಾ ಹೊಸ್ಮಾರು ಜನ್ಮದಿನದ ಶುಭಾಶಯ ಕೋರುವ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡಿದರು. ಜೈನ್‌ಮಿಲನ್ ವತಿಯಿಂದ ಹೆಗ್ಗಡೆ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಅರ್ಪಿಸಲಾಯಿತು.
ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷೆ ಅನಿತಾ ಸುರೇಂದ್ರಕುಮಾರ್, ಉಜಿರೆಯ ಸೋನಿಯಾ ಯಶೋವರ್ಮ, ಪೂರನ್‌ವರ್ಮ, ಪೆರಿಂಜೆ ಪಡ್ಯಾರಬೆಟ್ಟು ಕೊಡಮಣಿತ್ತಾಯ ದೈವಸ್ಥಾನದ ಆಡಳಿತಮೊಕ್ತೇಸರ ಜೀವಂಧರ ಕುಮಾರ್, ಭಾರತೀಯ ಜೈನ್ ಮಿಲನ್ ವಲಯ ೮ರ ಕಾರ್ಯಾಧ್ಯಕ್ಷ ಪ್ರಸನ್ನಕುಮಾರ್, ಮೂಡುಬಿದಿರೆ ನೋಟರಿ ಶ್ವೇತಾ ಜೈನ್, ಕಾರ್ಕಳದ ಶಶಿಕಲಾ ಹೆಗ್ಡೆ, ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣಕುಮಾರ್ ಇಂದ್ರ ಮತ್ತು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹಾಗೂ ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷ ಡಾ. ನವೀನ್ ಕುಮಾರ್ ಜೈನ್ ಇದ್ದರು.ಸುದರ್ಶನ್ ಜೈನ್ ಬಂಟ್ವಾಳ ಸ್ವಾಗತಿಸಿದರು. ಉಜಿರೆಯ ಬಿ. ಸೋಮಶೇಖರ ಶೆಟ್ಟಿ ವಂದಿಸಿದರು. ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಉಪನ್ಯಾಸಕಿ ದಿವ್ಯಾ ಕುಮಾರಿ ನಿರ್ವಹಿಸಿದರು. ಭಜನಾ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ೪೫ ತಂಡಗಳು ಹಾಗೂ ಕಿರಿಯರ ವಿಭಾಗದಲ್ಲಿ ೩೨ ತಂಡಗಳು ಸೇರಿದಂತೆ ಒಟ್ಟು 500ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.