ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ: ಪ್ರಿಯಾಂಕ್‌

| Published : Apr 02 2024, 01:10 AM IST / Updated: Apr 02 2024, 08:42 AM IST

ಸಾರಾಂಶ

ಕಳೆದ ಲೋಕಸಭೆ ಚುನಾವಣೆಯಲ್ಲಿ ಕೋಲಿ ಮತ್ತು ಕುರುಬ ಸಮಾಜಕ್ಕೆ ಎಸ್.ಟಿ. ಮಾಡುವುದಾಗಿ ಸುಳ್ಳು ಭರವಸೆ ನೀಡಿ ಮತ ಪಡೆದುಕೊಂಡವರು 5 ವರ್ಷದ ಅವಧಿಯಲ್ಲಿ ಆ ಸಮಾಜಕ್ಕೆ ಯಾವುದೇ ಕೊಡಗೆ ನೀಡದೆ ಅನ್ಯಾಯ ಮಾಡಿದ್ದಾರೆ.

 ಅಫಜಲ್ಪುರ :  ಕಳೆದ ಲೋಕಸಭೆ ಚುನಾವಣೆಯಲ್ಲಿ ಕೋಲಿ ಮತ್ತು ಕುರುಬ ಸಮಾಜಕ್ಕೆ ಎಸ್.ಟಿ. ಮಾಡುವುದಾಗಿ ಸುಳ್ಳು ಭರವಸೆ ನೀಡಿ ಮತ ಪಡೆದುಕೊಂಡವರು 5 ವರ್ಷದ ಅವಧಿಯಲ್ಲಿ ಆ ಸಮಾಜಕ್ಕೆ ಯಾವುದೇ ಕೊಡಗೆ ನೀಡದೆ ಅನ್ಯಾಯ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಅವರು ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‌ನಲ್ಲಿ ನಡೆದ ಅಫಜಲ್ಪುರ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಭಾವನಾತ್ಮಕ ವಿಷಯಗಳನ್ನು ಹೇಳಿ ಮತದಾರರ ಮತ ಕೇಳುವುದಿಲ್ಲ. ನಮ್ಮ ಅಭಿವೃದ್ಧಿ ಕೆಲಸಗಳು ಹೇಳಿ ಮತ ಕೇಳುತ್ತೇವೆ, ಬಡವರಿಗಾಗಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳು ನೀಡಿದಂತೆ ಜಾರಿಗೆ ತಂದಿದೆ. ನುಡಿದಂತೆ ನಡೆದಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 10 ವರ್ಷದ ಅವಧಿಯಲ್ಲಿ ಈ ಭಾಗಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಕೇವಲ ಸುಳ್ಳು ಹೇಳುವುದು ಬಿಜೆಪಿ ಕೆಲಸವಾಗಿದೆ. ಯಾವುದೇ ಧರ್ಮ, ಜಾತಿ ನೋಡದೆ 5 ಗ್ಯಾರಂಟಿಗಳು ಎಲ್ಲರಿಗೂ ಕೊಟ್ಟಿದ್ದೇವೆ. 5 ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ 52 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 1 ಲಕ್ಷ 20 ಸಾವಿರ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದರೆ ಬಿಜೆಪಿಯವರು ಬಿಟ್ಟಿ ಭಾಗ್ಯ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ತೆರಿಗೆ ರೂಪದಲ್ಲಿ ಸಂಗ್ರಹವಾದ ಜನರ ದುಡ್ಡು ಜನರಿಗೆ ಕೊಡುವಾಗ ಈ ರೀತಿ ವ್ಯಂಗ್ಯವಾಗಿ ಹೇಳುವವರಿಗೆ ತಕ್ಕ ಪಠ ಕಲಿಸಬೇಕು ಎಂದರು

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ 371(ಜೆ) ಜಾರಿಗೆ ತರಲಾಗಿದೆ. ಇದರಿಂದಾಗಿ ಪ್ರತಿ ವರ್ಷ ಒಂದು ಸಾವಿರ ವೈದ್ಯಕೀಯ ಸೀಟುಗಳು ಸಿಗುತ್ತಿವೆ. ನಯಾಪೈಸೆ ಹಣ ತೆಗೆದುಕೊಳ್ಳದೆ ಕಳೆದ ನಮ್ಮ ಸರ್ಕಾರ ಅವಧಿಯಲ್ಲಿ 30 ಸಾವಿರ ಯುವಕರಿಗೆ ಉದ್ಯೋಗ ನೀಡಿದ್ದೇವೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಟ್ಯಾಂತರ ಹಣ ತೆಗೆದುಕೊಂಡು ಹಗರಣ ಮಾಡಿದ್ದಾರೆ. ಹಲವು ಚುನಾವಣೆಯಲ್ಲಿ ಅಫಜಲ್ಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರಂತರವಾಗಿ ಹಿನ್ನಡೆಯಾಗಿದೆ. 

ಡಾ.ಮಲ್ಲಿಕಾರ್ಜುನ ಖರ್ಗೆಯವರು ಈ ಭಾಗಕ್ಕೆ ಅಭಿವೃದ್ಧಿ ಮಾಡಿದ್ದಾರೆ.50 ವರ್ಷದ ರಾಜಕೀಯ ಜೀವನದಲ್ಲಿ ಹಲವು ಖಾತೆಗಳು ನಿಭಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದೆ. ಇಡೀ ಕಲಬುರಗಿ ಜಿಲ್ಲೆಯ ಜನರು ಗಮನಿಸುತ್ತಿದ್ದಾರೆ ಈ ಬಾರಿ ಅಫಜಲ್ಪುರ ಕ್ಷೇತ್ರ ಜನರು ಲೋಕಸಭೆ ಚುನಾವಣೆಯಲ್ಲಿ ಏನು ಮಾಡುತ್ತಾರೆ ಎಂದು ನೋಡುತ್ತಿದ್ದಾರೆ.ಈ ಬಾರಿಯಾದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರಿಗೆ ಹೆಚ್ಚಿನ ಮತಗಳು ನೀಡುವ ಮೂಲಕ ಗೆಲ್ಲಿಸಬೇಕು ಎಂದು ಹೇಳಿದರು.

ಶಾಸಕ ಎಂ ವೈ ಪಾಟೀಲ ಮಾತನಾಡಿ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಅಫಜಲಪುರ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರಿಗೆ ಹೆಚ್ಚಿನ ಮತಗಳು ನೀಡಲಾಗುವುದು.ಬಿಜೆಪಿ ಸಂಸದರು ಕಳೆದ 5 ವರ್ಷದ ಅವಧಿಯಲ್ಲಿ ಅಫಜಲ್ಪರ ಮತಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕೊಡುಗೆ ನೀಡಿಲ್ಲ.ಹೀಗಾಗಿ ಅವರಿಗೆ ತಕ್ಕಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತಗಳು ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಾಬುರಾವ ಚಿಂಚನಸೂರ ಶಾಸಕ ಅಲ್ಲಮಪ್ರಭು ಪಾಟೀಲ, ರೇವೂನಾಯಕ ಬೆಳಮಗಿ, ಶರಣಪ್ಪ ಮಟ್ಟೂರ, ಬಾಬುರಾವ ಚಿಂಚನಸೂರ, ಚಂದ್ರಶೇಖರ ಪಾಟೀಲ ಹುಮನಾಬಾದ್,ಕೆಪಿಸಿಸಿ ಸದಸ್ಯ ಅರುಣಕುಮಾರ ಎಂ.ವೈ. ಪಾಟೀಲ, ಪಪ್ಪು ಪಟೇಲ, ಜೆ.ಎಂ. ಕೊರಬು, ಜಗದೇವ ಗುತ್ತೇದಾರ, ಮತೀನ ಪಟೇಲ, ಪ್ರಕಾಶ ಜಮಾದಾರ, ರಮೇಶ ಪೂಜಾರಿ, ಮಶಾಕ ಪಟೇಲ, ಶರಣು ಕುಂಬಾರ, ಶಿವಾನಂದ ಗಾಡಿ ಸಾಹುಕಾರ, ಮಹೆಬೂಬ ಪಟೇಲ್, ಎಸ್.ಎಸ್. ಪಾಟೀಲ ಸುರೇಶ ತಿಬಶೆಟ್ಟಿ, ಕೇಶವ ಮೋಟಗಿ, ಜ್ಯೋತಿ ಮರಗೋಳ ಜ್ಞಾನೇಶ್ವರಿ ಪಾಟೀಲ ಇತರರಿದ್ದರು.