ಬಿಜೆಪಿಗೆ ತಕ್ಕ ಪಾಠ ಕಲಿಸಿ: ಸಂತೋಷ್ ಲಾಡ್

| Published : Apr 19 2024, 01:03 AM IST

ಸಾರಾಂಶ

ಬಿಜೆಪಿ ಚುನಾವಣೆಯಲ್ಲಿ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರ ಸಾಲ ಮನ್ನಾ ಮಾಡಲಿಲ್ಲ. ಆದರೆ, ಬಿಜೆಪಿ ಸರ್ಕಾರ ದೊಡ್ಡ ಉದ್ದಿಮೆದಾರರ ₹೧೪.೫೦ ಲಕ್ಷ ಕೋಟಿ ಸಾಲ ಮನ್ನಾ ಮಾಡಿತು ಎಂದು ಸಚಿವ ಸಂತೋಷ ಲಾಡ್‌ ಹೇಳಿದ್ದಾರೆ.

ಸಂಡೂರು: ಈ ಬಾರಿಯ ಲೋಕಸಭಾ ಚುನಾವಣೆ ಸಂವಿಧಾನ ಉಳಿಸುವ ಚುನಾವಣೆ. ಬಿಜೆಪಿಯವರು ಸಂವಿಧಾನವನ್ನು ಕಿತ್ತಿಎಸೆಯುವ ಮಾತನಾಡುತ್ತಿದ್ದಾರೆ. ಆದ್ದರಿಂದ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.

ತಾಲೂಕಿನ ಚೋರುನೂರು ಗ್ರಾಮದಲ್ಲಿ ಗುರುವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು.

ಬಿಜೆಪಿ ಚುನಾವಣೆಯಲ್ಲಿ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನರ ಅಕೌಂಟಿಗೆ ₹೧೫ ಲಕ್ಷ ಹಣ ಬರಲಿಲ್ಲ. ರೈತರ ಆದಾಯ ದ್ವಿಗುಣವಾಗಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಆದರೆ, ಬಿಜೆಪಿ ಸರ್ಕಾರ ದೊಡ್ಡ ಉದ್ದಿಮೆದಾರರ ₹೧೪.೫೦ ಲಕ್ಷ ಕೋಟಿ ಸಾಲ ಮನ್ನಾ ಮಾಡಿತು. ದೇಶದಲ್ಲಿ ಬುಲೆಟ್ ಟ್ರೇನ್ ಓಡಾಡಲಿಲ್ಲ. ಇವುಗಳ ಬಗ್ಗೆ ಬಿಜೆಪಿಯವರು ಚಕಾರ ಎತ್ತುತ್ತಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ೨೦೧೪ರ ವರೆಗೆ ದೇಶದ ಸಾಲ ₹೫೫ ಲಕ್ಷ ಕೋಟಿ ಇತ್ತು. ಬಿಜೆಪಿಯ ಹತ್ತು ವರ್ಷಗಳ ಅವಧಿಯಲ್ಲಿ ₹೧೮೩ ಲಕ್ಷ ಕೋಟಿಯಾಗಿದೆ. ನೋಟ್ ಬ್ಯಾನ್‌ದಿಂದ ಬಡವರಿಗೆ ಯಾವ ಅನುಕೂಲವೂ ಆಗಲಿಲ್ಲ. ಶ್ರೀಮಂತರ ಬ್ಲಾಕ್ ಹಣ ವೈಟ್ ಹಣವಾಗಿ ಪರಿವರ್ತನೆಯಾಯಿತು ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದರು.

ಅಭ್ಯರ್ಥಿ ಈ. ತುಕಾರಾಂ ಮಾತನಾಡಿ, ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕನ್ನು ಅಭಿವೃದ್ಧಿ ಪಡಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ ೧೧ ವಸತಿ ಶಾಲೆಗಳು, ಡಿಪ್ಲೊಮಾ ಹಾಗೂ ೩ ಐಟಿಐ ಕಾಲೇಜು, ೬ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕ್ಲಿನಿಕ್ ಆನ್ ವೀಲ್ ಮುಂತಾದ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ೩೭೧ ಜೆ ಕಲಂ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ, ಉದ್ಯೋಗ, ಮೂಲ ಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದನ್ನು ಬಿಜೆಪಿ ಟೀಕಿಸಿತ್ತು ಎಂದರು.

ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಮಾತನಾಡಿ, ಬಿಜೆಪಿಯವರು ರೈತರ ಪರವಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ಅವರು ರಾಮನಾಮ ಜಪಿಸುತ್ತಾರೆ. ಚುನಾವಣೆ ಮುಗಿದ ಮೇಲೆ ರಾವಣನಂತೆ ವರ್ತಿಸುತ್ತಾರೆ ಎಂದರು.

ಪಕ್ಷದ ಮುಖಂಡರಾದ ಬಿ.ವಿ. ಶಿವಯೋಗಿ, ಸಿದ್ದು ಹಳ್ಳಿಗೌಡ, ಕುರಿ ಶಿವಮೂರ್ತಿ, ಅಂಜಿನಮ್ಮ, ಶಿವಣ್ಣ, ರೋಷನ್ ಜಮೀರ್, ಚಿತ್ರಿಕಿ ಸತೀಶ್ ಕುಮಾರ್, ಜಿ. ಏಕಾಂಬ್ರಪ್ಪ, ಚಿತ್ರಿಕಿ ಮಹಾಬಲೇಶ್ವರ್, ವೆಂಕಟೇಶ್, ಎನ್.ಎಂ. ವೀರೇಶಯ್ಯ, ಅನ್ನಪೂರ್ಣಾ ತುಕಾರಾಂ ಅಭಿಮಾನಿ ಬಳಗದ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.