ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆಯರಿಗೆ ಸಮಾನತೆಯ ಹಕ್ಕಿನೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟಿರುವ ಸಂವಿಧಾನದ ಬಗ್ಗೆ ಮಹಿಳೆಯರು ಅರಿತುಕೊಂಡು ತಮ್ಮ ಮಕ್ಕಳಿಗೆ ತಿಳಿಸಬೇಕು ಎಂದು ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ಮಾಜಿ ವಿಶೇಷ ಅಭಿಯೋಜಕಿ ರೋಹಿಣಿ ಸಾಲ್ಯಾನ್ ಮಹಿಳೆಯರಿಗೆ ಸಂದೇಶ ನೀಡಿದ್ದಾರೆದ.ಕ. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಜಂಟಿಯಾಗಿ ನಗರದ ಉರ್ವಸ್ಟೋರ್‌ನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ ಮಹಿಳಾ ವೈವಿಧ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪುರುಷರಂತೆಯೇ ಬೌದ್ಧಿಕ ಮಟ್ಟವನ್ನು ಹೊಂದಿದ್ದರೂ ಮಹಿಳೆಯರು ತಮ್ಮ ಸಂಕುಚಿತ ಮನೋಭಾವದಿಂದಾಗಿ ಸಮಾಜದಲ್ಲಿ ಹಿಂದುಳಿಯಲು ಮಹಿಳೆಯರೇ ಕಾರಣ. ಸಂಕುಚಿತ ಮನಸ್ಸಿನಿಂದ ಮುಕ್ತಗೊಳ್ಳುವ ಜತೆಗೆ ಸಂವಿಧಾನದಲ್ಲಿನ ಹಕ್ಕುಗಳನ್ನು ಅರಿತುಕೊಂಡು ಪ್ರಶ್ನಿಸುವ ಮನೋಭಾವವನ್ನು ಮಹಿಳೆ ಬೆಳೆಸಿಕೊಳ್ಳಬೇಕು. ಜತೆಗೆ ಆಧುನಿಕ ತಂತ್ರಜ್ಞಾನದ ಹಾವಳಿಗೆ ದಾರಿ ತಪ್ಪುತ್ತಿರುವ ಯುವಜನಾಂಗಕ್ಕೆ ಮಹಿಳೆ ಸಂವಿಧಾನದ ಬಗ್ಗೆ ತಿಳಿ ಹೇಳಬೇಕು. ಮುಂದಿನ ಜನಾಂಗವನ್ನು ಸತ್ಪ್ರಜೆಗಳನ್ನಾಗಿ ಪರಿವರ್ತಿಸುವ, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿಕೊಡುವ ಜವಾಬ್ದಾರಿಯನ್ನು ಮಹಿಳೆಯರು ಮಾಡಿದಾಗ ಸಂವಿಧಾನದ ಆಶಯಗಳು ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ರೋಹಿಣಿ ಸಾಲ್ಯಾನ್ ಸೇರಿದಂತೆ ಮಹಿಳಾ ಸಾಧಕರನ್ನು ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಇವೆಂಟ್ ಕಂಪನಿಯ ಮುಖ್ಯಸ್ಥರಾದ ರಕ್ಷಾ ಭಟ್, ಚಿತ್ರನಟಿ ಸಂಜನಾ, ಪೊಲೀಸ್ ಅಧಿಕಾರಿ ಗೀತಾ ಕುಲಕರ್ಣಿ, ಶಂಕರನಾರಾಯಣ ಚಾರಿಟೇಬಲ್ ಟ್ರಸ್ಟ್ ಹಾಗೂ ಸುಮತಿ ಫೌಂಡೇಶನ್ ಕುಳಾಯಿ ಇದರ ಅಧ್ಯಕ್ಷ ರಮೇಶ್ ಮತ್ತಿತರರಿದ್ದರು. ಒಕ್ಕೂಟದ ಅಧ್ಯಕ್ಷರಾದ ಚಂಚಲ ತೇಜೋಮಯ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ------------ಜಾಥಾದಲ್ಲಿ ಮಿಂಚಿದ ಮಹಿಳಾ ವಾಹನ ಚಾಲಕರು!ಸಭಾ ಕಾರ್ಯಕ್ರಮಕ್ಕೂ ಮೊದಲು ಉರ್ವದ ಪೊಂಪೈ ಮಾತೆಯ ಚರ್ಚ್ ಆವರಣದಿಂದ ಆಕರ್ಷಕ ಮಹಿಳಾ ವಾಹನ ಜಾಥಾ ಏರ್ಪಟ್ಟಿತು. ಉರ್ವಸ್ಟೋರ್‌ನ ಡಾ. ಅಂಬೇಡ್ಕರ್ ಭವನದವರೆಗೆ ಸಾಗಿದ ಮಹಿಳಾ ವಾಹನ ಜಾಥಾದಲ್ಲಿ ಮಹಿಳೆಯರೇ ವಾಹನ ಚಲಾಯಿಸುವ ಮೂಲಕ ಗಮನ ಸೆಳೆದರು. ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ, ಮದರ್ ತೆರೆಸಾ, ಮೀರಾ ಬಾಯಿ ಸೇರಿದಂತೆ ಸಾಧಕರ ಛದ್ಮವೇಷಗಳೊಂದಿಗೆ ಮಹಿಳೆಯರ ಜಾಥಾ ಮಹಿಳಾ ದಿನಾಚರಣೆಗೆ ಹೊಸ ಮೆರುಗು ನೀಡಿತು.