ಮಕ್ಕಳಿಗೆ ಉತ್ತಮ ಶಿಕ್ಷಣ , ಸಂಸ್ಕಾರ ಕಲಿಸಿ

| Published : Mar 17 2024, 01:49 AM IST

ಸಾರಾಂಶ

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜೊತೆಗೆ ಅಕ್ಷರಾಭ್ಯಾಸ ಮಾಡಲು ಒಳ್ಳೆಯ ವಾತಾವರಣವನ್ನು ಮನೆಯಲ್ಲಿ ನೀಡಬೇಕು. ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು, ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ, ಉತ್ತಮ ಶಿಕ್ಷಣ, ಸಂಸ್ಕಾರದಿಂದ ಸಮಾಜದಲ್ಲಿ ಮಕ್ಕಳು ಉತ್ತಮ ವ್ಯಕ್ತಿಗಳಾಗುತ್ತಾರೆ. ಮನೆಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು ಎಂದು ಶ್ರೀ ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ತಿಳಿಸಿದರು.ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾತಾ ಪಿತೃ ವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಆಚಾರ, ವಿಚಾರ ಕಲಿಸಿ

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜೊತೆಗೆ ಅಕ್ಷರಾಭ್ಯಾಸ ಮಾಡಲು ಒಳ್ಳೆಯ ವಾತಾವರಣವನ್ನು ಮನೆಯಲ್ಲಿ ನೀಡಬೇಕು. ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಹಾಗಾಗಿ ಉತ್ತಮ ನಡತೆ, ಆಚಾರ, ವಿಚಾರ ಸಂಗತಿಗಳು ಸಿಗುವ ಹಾಗೆ ನೋಡಿಕೊಳ್ಳಬೇಕು ಎಂದರು.

ಪೊಲೀಸ್ ಉಪ ಅಧೀಕ್ಷಕ ಎಸ್. ಶಿವಕುಮಾರ್ ಮಾತನಾಡಿ, ಮಕ್ಕಳು ಚಿಕ್ಕವಯಸ್ಸಿನಲ್ಲಿ ದುಶ್ಚಟಗಳಿಗೆ ದಾಸರಾಗದೇ ಒಳ್ಳೆಯ ಗುಣಗಳನ್ನು ಬೆಳಸಿಕೊಳ್ಳಬೇಕು. ಒಳ್ಳೆಯ ಸ್ನೇಹಿತರ ಸಹವಾಸವನ್ನು ಮಾಡಬೇಕು. ಹೆಣ್ಣು ಮಕ್ಕಳು ತಂದೆ ತಾಯಿಂದರ ಭಾವನೆಗಳಿಗೆ ಗೌರವವನ್ನು ನೀಡಬೇಕು, ಇಂದಿನ ಕಾಲದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು ಎಚ್ಚರಿಕೆಯಿಂದ ಬದುಕಬೇಕು. ತಂದೆ ತಾಯಿಯರನ್ನು ಎಂದಿಗೂ ನೋಯಿಸಬಾರದು ಎಂದು ತಿಳಿಸಿದರು.ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಡಾ.ಎನ್. ಶಿವರಾಮರೆಡ್ಡಿ ಮಾತನಾಡಿ, ಎಸ್.ಎಸ್.ಎಲ್.ಸಿ ನಂತರ ವಿದ್ಯಾರ್ಥಿಗಳು ಪೋಷಕರ ಮಾತಿಗೆ ಬೆಲೆಕೊಟ್ಟು ನಡೆದುಕೊಂಡು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಕಾಲೇಜಿಗೆ ಹೋದ ಮೇಲೆ ತಮ್ಮ ಜವಾಬ್ಧಾರಿಯನ್ನು ಅರಿತು ತಮ್ಮ ಭವಿಷ್ಯದ ಕಡೆಗೆ ಹೆಚ್ಚಿನ ಗಮನಕೊಡಬೇಕು ಎಂದರು.

ಬಿಜಿಎಸ್ ಇಂಗ್ಲೀಷ್ ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ 190 ವಿದ್ಯಾರ್ಥಿಗಳು ಅವರವರ ತಂದೆ ತಾಯಿಂದರಿಗೆ ಪಾದಪೂಜೆಯನ್ನು ಮಾಡುವುದರ ಮೂಲಕ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಶಾಲೆಯ ಭೋದಕ,ಭೋಧಕೇತರ ಸಿಬ್ಬಂಧಿ, ವಿದ್ಯಾರ್ಥಿಗಳು,ಪೋಷಕರು ಇದ್ದರು.