ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ತಾಲೂಕು ಕೃಷಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದ ವತಿಯಿಂದ 49 ಲಕ್ಷ ರೂ. ವೆಚ್ಚದಡಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಡಿ. ಹರೀಶ್ ಗೌಡ ಗುದ್ದಲಿಪೂಜೆ ನೆರವೇರಿಸಿದರು.ಶನಿವಾರ ನಗರದ ಟಿಎಪಿಸಿಎಂಎಸ್ ನ ಹಳೆಯ ವಾಣಿಜ್ಯ ಸಂಕೀರ್ಣ ವ್ಯಾಪ್ತಿಯ ಅಕ್ಕಿಗಿರಣಿಯ ಎದುರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದೊಂದು ವರ್ಷದಲ್ಲಿ ಟಿಎಪಿಸಿಎಂಎಸ್ ವತಿಯಿಂದ ಒಟ್ಟು 1 ಕೋಟಿ ರೂ. ವೆಚ್ಚದಡಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ. 6 ತಿಂಗಳ ಹಿಂದೆ ಆರಂಭಗೊಂಡ 10 ಮಳಿಗೆಗಳ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಇದೀಗ ಮತ್ತೆ 10 ಮಳಿಗೆಗೆಳನ್ನು ನಿರ್ಮಿಸಲಾಗುತ್ತಿದೆ. ಟಿಎಪಿಸಿಎಂಎಸ್ ಸಹಕಾರ ಸಂಸ್ಥೆಯನ್ನು ಅಭಿವೃದ್ಧಿಪಡಿಸುವುದಾಗಿ ವರ್ಷದ ಹಿಂದೆ ಮಾತುಕೊಟ್ಟಿದೆ. ಇದೀಗ ಷೇರುದಾರರಿಗೆ ಲಾಭದಾಯಕವಾಗುವಂತೆ ಕ್ರಮವಹಿಸಿದ್ದೇನೆ ಎಂದರು.
ಟಿಎಪಿಸಿಎಂಎಸ್ ನ 60 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಲಿತ ಸಮಾಜದ ಹಿರಿಯ ಮುಖಂಡ ಬಸವಲಿಂಗಯ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೇ ಉಪಾಧ್ಯಕ್ಷರಾಗಿ ವಾಲ್ಮೀಕಿ ಸಮಾಜದ ನಾಗರಾಜು ಅವರನ್ನು ಆಯ್ಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದೇವೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಹಿರಿಯ ಮುಖಂಡ ಬಸವಲಿಂಗಯ್ಯರ ಅಧ್ಯಕ್ಷತೆಯಲ್ಲಿ ಒಂದು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿ ನಡೆದಿರುವುದು ಎಲ್ಲರ ಹೆಮ್ಮೆಗೆ ಕಾರಣವಾಗಿದೆ. ಹಾಲಿ ಇರುವ ರೈತ ಭವನದ ಅಭಿವೃದ್ಧಿಗೂ ಕ್ರಮವಹಿಸುವುದಾಗಿ ಅವರು ತಿಳಿಸಿದರು.ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿರುವ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಪ್ರತಾಪ್ ಸಿಂಹ ಸಂಸದರಾಗಿ ಹುಣಸೂರು ತಾಲೂಕಿಗೆ ಮತ್ತು ಸಂಸದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮೈಸೂರು ಕುಶಾಲನಗರ ರೈಲ್ವೆ ಯೋಜನೆ, ಹುಣಸೂರು ಬೈಪಾಸ್ ರಸ್ತೆ ಅಭಿವೃದ್ಧಿಗೆ ವಾರದ ಹಿಂದೆ 86 ಕೋಟಿ ರೂ. ಯೋಜನೆ ಜಾರಿ, ಮರದೂರು ಏತ ನೀರಾವರಿ ಯೋಜನೆ, ಕಾವೇರಿ ಕುಡಿಯುವ ನೀರಿನ ಯೋಜನೆ ಹೀಗೆ ನೂರಾರು ಕೋಟಿ ರೂ.ಗಳ ಅಬಿವೃದ್ಧಿ ಯೋಜನೆ ಹುಣಸೂರಿಗೆ ನೀಡಿದ್ದಾರೆ. ಅವರಿಗೆ ಟಿಕೇಟ್ ಸಿಗಬಹುದೆಂಬ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ ಅವರ ಪಕ್ಷ ತೀರ್ಮಾನಿಸಿದೆ.
ಬಿಜೆಪಿ ಜೆಡಿಎಸ್ ಮೈತ್ರಿಪಕ್ಷವಾಗಿ ನಾವು ಮೈತ್ರಿಧರ್ಮ ಪಾಲನೆ ಮಾಡುತ್ತೇವೆ. ನಿಯೋಜಿತ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಜೆಡಿಎಸ್ ಬೆಂಬಲಿಸಲಿದೆ ಎಂದು ತಿಳಿಸಿದರು.ಅಧ್ಯಕ್ಷ ಬಸವಲಿಂಗಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಪ್ರೇಮ್ ಕುಮಾರ್, ವೆಂಕಟೇಶ್, ಎಚ್.ಟಿ. ಬಾಬು, ಅಸ್ವಾಳು ಕೆಂಪೇಗೌಡ, ಗೌರಮ್ಮ, ಮಂಗಳಗೌರಮ್ಮ, ರೇವಣ್ಣ, ಕಾರ್ಯದರ್ಶಿ ಹೇಮಾ ಮೊದಲಾದ ಷೇರುದಾರರು ಇದ್ದರು.