ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಚಿಕ್ಕಂದಿನಿಂದಲೇ ಸಂಗೀತ ಜ್ಞಾನವನ್ನು ಕಲಿಸಬೇಕು. ಸಂಗೀತದಲ್ಲಿ ಅಪಾರ ಶಕ್ತಿ ಮತ್ತು ಜ್ಞಾನ ಅಡಗಿದ್ದು, ಅದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದು ಗುರು ರಾಘವೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ರಮೇಶ್ ಸಿಂಗ್ ಹೇಳಿದರು.

ನಗರದ ವಾಣಿ ವಿಲಾಸ ಸಂಯುಕ್ತ ಪ್ರೌಢಶಾಲೆ ಆವರಣದಲ್ಲಿ ರಹಮಾನಿಯ ಸಾಂಸ್ಕೃತಿಕ ಕಲಾ ಸಂಘ ಆಯೋಜಿಸಿದ್ದ ವಚನ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದ ಜೊತೆಗೆ ಶಿಸ್ತು ಹಾಗೂ ಸಂಗೀತ ಕಲೆಯನ್ನು ಮಕ್ಕಳಲ್ಲಿ ಬೆಳೆಸಿದರೆ ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಂಗೀತ ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಜೀವನ ಮೌಲ್ಯಗಳನ್ನು ಬೆಳೆಸುತ್ತದೆ ಎಂದು ಹೇಳಿದರು.

ಟೌನ್ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಮಾತನಾಡಿ, ಸಂಗೀತ ಮತ್ತು ವಚನಗಳು ಮಕ್ಕಳ ಕಲಿಕೆಗೆ ಸ್ಫೂರ್ತಿ ನೀಡುವ ಶಕ್ತಿಯನ್ನು ಹೊಂದಿವೆ. ಸಂಗೀತದಲ್ಲಿ ಲಯ, ತಾಳ, ಸಾಹಿತ್ಯ ಹಾಗೂ ಜ್ಞಾನ ಅಡಕವಾಗಿದ್ದು, ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸುವುದರ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶದ ಜನಪದ ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ತಿಳಿಸಿದರು.


ಸಾಹಿತಿ ನಾಗತಿಹಳ್ಳಿ ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿ ವಿಲಾಸ ಸಂಯುಕ್ತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕ ಮೋಹನ್ ಕುಮಾರ್, ವೆಂಕಟೇಶ್, ಮಧು, ಮಲ್ಲಿಕಾರ್ಜುನ್, ವಿರೂಪಣ್ಣ ನಾಯಕ, ಸಂಗೀತ ಕಲಾವಿದರಾದ ಓ. ಮೂರ್ತಿ, ಸರಸ್ವತಿ, ಪೀಲಾಪುರ ಆರ್. ಕಂಠೇಶ್, ಸುಬ್ರಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ರಹಮಾನಿಯ ಸಾಂಸ್ಕೃತಿಕ ಕಲಾ ಸಂಘದ ಮುಖ್ಯಸ್ಥೆ ಶಬಿನಾ ಬಾನು ಕಾರ್ಯಕ್ರಮವನ್ನು ನಿರೂಪಿಸಿದರು.