ಹನುಮಸಾಗರ: ಗ್ರಾಮೀಣ ಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಸಂಕಷ್ಟಗಳ ಮಧ್ಯೆಯೂ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿವೆ ಎಂದು ಸಂಪನ್ಮೂಲ ವ್ಯಕ್ತಿ ಬಸವರಾಜ ಕಲ್ಮನಿ ಹೇಳಿದರು.
ಸಮೀಪದ ಬೆನಕನಾಳ ಗ್ರಾಮದಲ್ಲಿ ಶ್ರೀ ವೀರಾಂಜನೇಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸ್ನೇಹ ಸಮ್ಮಿಲನ, ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣಗಳಲ್ಲಿ ಇದೇ ಶಿಕ್ಷಣಕ್ಕೆ ಪಾಲಕರು ಲಕ್ಷಾಂತರ ಹಣ ವ್ಯಯಿಹಿಸಬೇಕಾಗುತ್ತದೆ. ಇನ್ನೂ ಶಾಲೆಯಲ್ಲಿ ಕೇವಲ ಪಠ್ಯ ಒಂದೇ ಹೇಳಿದರೆ ಸಾಲದು, ನಾನಾ ರೀತಿಯ ಕೌಶಲಗಳನ್ನು ಕಲಿಸಬೇಕು. ನೃತ್ಯ, ಕ್ರೀಡೆ ಹಾಗೂ ಸ್ಪರ್ಧಾತ್ಮಕ ಮನೋಭಾವನೆ ಕಲಿಸಬೇಕು. ಅದು ಶ್ರೀ ವೀರಾಂಜನೇಯ ಶಾಲೆ ಪ್ರಾಥಮಿಕ ಹಂತದಲ್ಲಿ ಮಾಡುತ್ತಿದೆ ಎಂದರು.ಉಪನ್ಯಾಸಕ ಶಿವಕುಮಾರ ಹಾಲಕೇರಿ, ಸಿಆರ್‌ಪಿ ಶೇಖರಪ್ಪ ಕುರಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಬಾರದು. ಹೆಚ್ಚು ಪುಸ್ತಕಗಳನ್ನು ಓದುವಂತೆ ತಿಳಿ ಹೇಳಿ, ಜ್ಞಾನವಂತರನ್ನಾಗಿ ಮಾಡಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಡಾ. ಮೈಲಾರಪ್ಪ ಬಿಲ್ಕಾರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಹಾಂತೇಶ ನೇಲಾಗಣಿ, ಭೂಮೇಶ ಅಂಗಡಿ, ನೀಲಪ್ಪ ಮೇಟಿಯವರ, ಬಸವರಾಜ ಭಂಗಿ, ಹನುಮಪ್ಪ ಜೋಗಿನ್, ಉಸ್ಮಾನ್‌ಸಾಬ್ ಹೂಲಗೇರಿ, ಹನುಮಂತ ಭೋವಿ, ಹನುಮಪ್ಪ ಮುಗಳಿ, ಕವಿತಾ ಉಪ್ಪಾರ, ಪ್ರೇಮಾ ಕುಟುಗಮರಿ, ಗೌರಮ್ಮ ಪೊಲೀಸ್ ಪಾಟೀಲ್ ಇತರರು ಇದ್ದರು.ಉಪನ್ಯಾಸಕ ಮಹಾಂತೇಶ ನೇಲಾಗಣಿ ಕಾರ್ಯಕ್ರಮ ನಿರ್ವಹಿಸಿದರು.