ಸಾರಾಂಶ
ಶಿರಸಿ: ಶಾಸ್ತ್ರೀಯ ಸಂಗೀತವು ಪ್ರತಿ ಕಲಾಪ್ರಕಾರಗಳಿಗೆ ಮೂಲಗಳೆಂದು ಹಿರಿಯ ತಜ್ಞರು ಉಲ್ಲೇಖಿಸಿದ್ದು, ಜೀವನದ ಸಾಧನೆಗೆ ಹಾಗೂ ವೈಯಕ್ತಿಕ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಒಳ್ಳೆಯ ವೇದಿಕೆ ಎಂದು ಧಾರವಾಡ ಹಾಲು ಒಕ್ಕೂಟ ಹಾಗೂ ಶಿರಸಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದರು.
ನಗರದ ಯೋಗಮಂದಿರ ಸಭಾಭವನದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನ ಸ್ವರ್ಣವಲ್ಲೀ ಸಂಸ್ಥಾನದ ಶ್ರೀಗಳ ೩೩ನೇ ಪೀಠಾರೋಹಣದ ಅಂಗವಾಗಿ ಪ್ರತಿ ತಿಂಗಳ ಮೊದಲ ಸೋಮವಾರದಂದು ಸಂಘಟಿಸುತ್ತಿರುವ ಗುರು ಅರ್ಪಣೆ ಕಲಾ ಅನುಬಂಧ ಸಂಗೀತ ಕಾರ್ಯಕ್ರಮದಲ್ಲಿ ಸಾಧಕ ಕಲಾವಿದರಿಬ್ಬರನ್ನು ಸನ್ಮಾನಿಸಿ ಮಾತನಾಡಿದರು.ಚಿಕ್ಕಮಕ್ಕಳಿರುವಾಗಲೇ ಶಾಸ್ತ್ರೀಯ ಕಲೆಯ ಸಂಸ್ಕಾರವನ್ನು ಮಾರ್ಗದರ್ಶನ ಮಾಡಿದರೆ ಮುಂದೊಂದು ದಿನ ಆ ಮಕ್ಕಳು ಸಾಧನೆ ಹಾಗೂ ಊರಿಗೆ ಕೀರ್ತಿ ತರಲು ಸಾಧ್ಯವಾಗುತ್ತದೆ. ಇದಕ್ಕೆ ಹತ್ತಾರು ಉದಾಹರಣೆಗಳನ್ನು ಸಮಾಜದಲ್ಲಿ ಕಾಣಬಹುದಾಗಿದೆ ಎಂದರು.
ಪ್ರಾದೇಶಿಕ ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಜಿ.ಎಸ್. ಹೆಗಡೆ ಹಲಸರಿಗೆ ಮಾತನಾಡಿ, ದೈನಂದಿನ ಕೆಲಸದ ಒತ್ತಡದಲ್ಲಿ ಶಾಸ್ತ್ರೀಯ ಸಂಗೀತಗಳನ್ನು ಆಲಿಸಿದಾಗ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಮತ್ತು ಏಕಾಗ್ರತೆ ಭಾವನೆ ಹೊರಹೊಮ್ಮಿಸಲು ನಮ್ಮ ಕೆಲಸಗಳನ್ನು ಸುಗಮವಾಗಿ ನಡೆಸಲು ಸಹಕಾರಿಯಾಗುತ್ತದೆ ಎಂದರು.ಸನ್ಮಾನ ಸ್ವೀಕರಿಸಿ, ಭಾಗವತ ಹಿಲ್ಲೂರ ರಾಮಕೃಷ್ಣ ಹೆಗಡೆ ಕೃತಜ್ಞತೆ ತಿಳಿಸುತ್ತ, ಅಪೇಕ್ಷೆಯ ಮೇರೆಗೆ ಭಾಮಿನಿಯಲ್ಲಿ ಸುಂದರವಾಗಿ ದೇವಿ ಸ್ತುತಿ ಹಾಡಿ ಸಭೆಯನ್ನು ಮಂತ್ರಮುಗ್ಧಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ನಿವೃತ್ತ ಉದ್ಯೋಗಿ ಸಂಗೀತಾಭಿಮಾನಿ ಆರ್.ಎನ್. ಭಟ್ಟ ಸುಗಾವಿ ಮಾತನಾಡಿ, ಮಕ್ಕಳು ಅಭ್ಯಾಸ ಮಾಡುವಾಗ ನಿರ್ಲಕ್ಷ್ಯ ವಹಿಸದೇ ತಪಸ್ಸನ್ನಾಚರಿಸಿದಂತೆ ಅಭ್ಯಸಿಸಿ ಹಾಗೂ ಪ್ರಚಾರದ ಗೀಳಿಗೆ ಹೋಗದೇ ಸಾಧನೆ ಮಾರ್ಗದಲ್ಲಿ ತೊಡಗಿಕೊಂಡರೆ ತನ್ನಿಂದ ತಾನೆಯೇ ಗೌರವ, ಕೀರ್ತಿ ಲಭಿಸುತ್ತದೆ ಎಂದರು.ವೇದಿಕೆಯಲ್ಲಿ ರಾಗಮಿತ್ರ ಪ್ರತಿಷ್ಠಾನದ ಅಧ್ಯಕ್ಷ ಎಂ.ಎನ್. ಹೆಗಡೆ ಮಾಳೆನಳ್ಳಿ ಉಪಸ್ಥಿತರಿದ್ದರು. ನಂತರ ನಡೆದ ಕಲಾನುಬಂಧ ಸಂಗೀತದ ಭಕ್ತಿ ಸಂಗೀತದಲ್ಲಿ ವಾನಳ್ಳಿಯ ನಾರಿಶಕ್ತಿ ಮಹಿಳಾ ತಂಡದ ಮಾತೆಯರು ಸುಂದರವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಹಾರ್ಮೋನಿಯಂನಲ್ಲಿ ಗಾಯಕಿ ಸುಮಾ ಹೆಗಡೆ ವಾನಳ್ಳಿ, ತಬಲಾದಲ್ಲಿ ಸಮರ್ಥ ಹೆಗಡೆ ಸಹಕರಿಸಿದರು.