ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸಿ, ಆ ದಿಕ್ಕಿನಲ್ಲೇ ಶಿಕ್ಷಣ ನೀಡುವಲ್ಲಿ ಶಾಲೆಗಳು ಮಂದಾಗಬೇಕು, ಇದರಿಂದ ಮಕ್ಕಳಿಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಸಾಧ್ಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ತಿಳಿಸಿದರು.ಪಟ್ಟಣದ ಬಾಗೂರು ರಸ್ತೆಯಲ್ಲಿರುವ ಆವಿಷ್ಕಾರ ಗ್ಲೋಬಲ್ ಎಜುಕೇಷನ್ ಸಂಸ್ಥೆಯೂ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮ ಮತ್ತು ಕಲಿಕಾ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬರೀ ಓದುವುದು, ಬರೆಸುವ ಶಿಕ್ಷಣದಿಂದ ಮಕ್ಕಳಲ್ಲಿ ವಿದ್ಯೆ ಕುರಿತಾಗಿ ಆಸಕ್ತಿ ಕುಂದುವುದು ಸಹಜ, ಆಟಗಳ ಮೂಲಕ ಕಲಿಕೆಗೆ ಮುಂದಾದರೆ ಮಕ್ಕಳು ಹೆಚ್ಚು ಖುಷಿಯಿಂದ ಕಲಿಕೆಗೆ ಸಹಕರಿಸುತ್ತಾರೆ. ಇದನ್ನು ಮನಗಂಡು ಸಂಸ್ಥೆಯೂ ಹತ್ತಾರು ವಿವಿಧ ಆಟಗಳು, ಚಟುವಟಿಕೆಗಳ ಮೂಲಕ ಕಲಿಕೆಗೆ ಮುಂದಾಗಿರುವುದು ಮಾದರಿ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕು. ಅವರಿಗಾಗಿ ಆಸ್ತಿ ಮಾಡಿಟ್ಟರೇ ಕಳ್ಳಕಾಕರ ಭಯವಿರುತ್ತದೆ. ಶಿಕ್ಷಣವನ್ನೆ ಆಸ್ತಿಯಾಗಿ ಕೊಟ್ಟರೇ ಸಮಾಜದಲ್ಲಿ ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಬದುಕು ರೂಪಿಸಿಕೊಳ್ಳುತ್ತಾರೆ ಎಂದರು.
ಸಂಸ್ಥೆಯ ವ್ಯವಸ್ಥಾಪಕಿ ನಾಗರಾಣಿ ಮಾತನಾಡಿ, ಮಕ್ಕಳು ಮೊಬೈಲ್‌ನಲ್ಲೆ ಕಾಲ ಕಳೆದು ಕಂಠಪಾಠದ ಕಲಿಕೆಯಲ್ಲಿ ತೊಡಗಿದ್ದಾರೆ. ಸ್ವಂತಿಕೆ, ಕ್ರಿಯಾಶೀಲತೆ ಕಣ್ಮರೆಯಾಗುತ್ತಿದೆ. ಅವರಲ್ಲಿ ಸೃಜನಶೀಲತೆ ತುಂಬುವುದು, ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು ನಮ್ಮ ಸಂಸ್ಥೆಯ ಗುರಿಯಾಗಿ, ಅವರಿಗೆ ಹಾಡು, ಕಥೆಗಳ ಮೂಲಕ ಶಿಕ್ಷಣ ನೀಡುವುದು, ದೇಶಿ ಆಟಗಳಾದ ಲಗೋರಿ, ಕುಂಟಪಿಲ್ಲೆ, ಚೌಕಬಾರ, ಹಳಗುಳಿಮಣೆ ಸೇರಿ ಹತ್ತಾರು ಕ್ರೀಡೆಗಳನ್ನಾಡಿಸುವ, ಫೇಸ್ ಪೇಂಟ್, ಆರ್ಟ್ ಪೇಂಟ್, ಕ್ರಾಫ್ಟ್, ಮನರಂಜನಾ ಆಟಗಳು, ಅಜ್ಜಿ ಕಾಲದ ಕಥೆಗಳನ್ನು ಹೇಳುವುದು, ಕುತೂಹಲ ಮೂಡಿಸಲು ಮ್ಯಾಜಿಕ್ ಶೋ ಸೇರಿ ಹತ್ತಾರು ರೀತಿಯ ಚಟುವಟಿಕೆಗಳಿಂದ ಮಕ್ಕಳಿಗೆ ಹೊಸ ಚೈತನ್ಯ ನೀಡಲಾಗುತ್ತಿದೆ ಎಂದರು.ಮಕ್ಕಳು ಚಟುವಟಿಕೆಯಾಧರಿತ ಶಿಕ್ಷಣದಲ್ಲಿ ಹೆಚ್ಚು ಸಂಭ್ರಮದಿಂದ ತೊಡಗಿಕೊಳ್ಳುವುದನ್ನು ನೋಡಿ ಪೋಷಕರು ಸಂತಸ ವ್ಯಕ್ತಪಡಿಸಿ, ವಿಭಿನ್ನ ಮಾದರಿ ಶಿಕ್ಷಣದ ಮೂಲಕ ಮಕ್ಕಳ ಮನಸ್ಸು ಗೆದ್ದಿರುವ ಸಂಸ್ಥೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ವೇಳೆ ಆವಿಷ್ಕಾರ್ ಗ್ಲೋಬರ್ ಎಜುಕೇಷನ್ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್, ನಿರ್ದೇಶಕಿ ಶಾಲಿನಿ ವಿಶ್ವನಾಥ್, ಮುಖ್ಯ ಶಿಕ್ಷಕಿ ಸೌರಭಕಿರಣ್ ಸೇರಿ ಶಿಕ್ಷಕರು ಇದ್ದರು.