ಸಾರಾಂಶ
ಲಂಗು ಲಗಾಮಿಲ್ಲದೇ ಸೋಶಿಯಲ್ ಮೀಡಿಯಾಗಳು ಹುಚ್ಚು ಹಿಡಿಸುತ್ತಿವೆ. ಕೇವಲ ಮೊಬೈಲ್ ಕೊಡಿಸಿಲ್ಲ ಎನ್ನುವ ಕಾರಣಕ್ಕೆ ಪೋಷಕರ ಮೇಲೆಯೆ ಹಲ್ಲೆ ಮಾಡಿರುವ ಪ್ರಕರಣ ಸಾಕಷ್ಟಿವೆ. ಆದ್ದರಿಂದ ಮೊಬೈಲ್ ಬಳಕೆ ಕಡಿಮೆಗೊಳಿಸಿ. ಪುಸ್ತಕದ ಕಡೆಗೆ ಒಲವು ತೋರಿದಲ್ಲಿ ಯಶಸ್ಸು ಸಿಗಲಿದೆ.
ಬ್ಯಾಡಗಿ: ಯುವಕರ ಆತ್ಮಹತ್ಯೆ ಹಾಗೂ ವಿವಾಹ ವಿಚ್ಚೇದನದ ಅಂಕಿಸಂಖ್ಯೆಗಳನ್ನು ಅವಲೋಕಿಸಿದರೆ ಪ್ರತಿಕ್ಷಣವೂ ಸಮಾಜ ನೈತಿಕವಾಗಿ ಅಧಃಪತನಗೊಳ್ಳುತ್ತಿದೆ ಎಂದು ಹಾವೇರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಕಾಂತೇಶ ಅಂಬಿಗೇರ ಖೇದ ವ್ಯಕ್ತಪಡಿಸಿದರು.ಶಿಡೇನೂರಿನ ಡಾ. ಬಿ.ಆರ್. ಅಂಬೇಡ್ಕರ ಶಿಕ್ಷಣ ಸಂಸ್ಥೆ ಹಾಗೂ ಬ್ಯಾಡಗಿ ರೋಟರಿ ಕ್ಲಬ್ ಆಶ್ರಯದಲ್ಲಿ ನಡೆದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಬದುಕಿನ ಮೌಲ್ಯವನ್ನು ಅರಿತ ಯುವಕರು ಜೀವನದಲ್ಲಿ ಎಂದಿಗೂ ಸೋಲಲು ಸಾಧ್ಯವಿಲ್ಲ. ಭಾವನಾತ್ಮಕ ಬುದ್ಧಿವಂತಿಕೆ ಆತ್ಮವಿಶ್ವಾಸವೇ ಯುವಕರಲ್ಲಿ ಇಲ್ಲದಂತಾಗಿದ್ದು, ದೈನಂದಿನ ಕಾರ್ಯನಿರ್ವಹಣೆಯಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ತಿಳಿಸಿಕೊಡಬೇಕಿದೆ ಎಂದರು.ಸಂಸ್ಕಾರಹೀನತೆ: ಇತ್ತೀಚೆಗೆ ವಿದ್ಯಾರ್ಥಿಗಳು ಶಿಕ್ಷಣವಂತರಾಗುತ್ತಾ ಹೋದಂತೆ ಸಂಸ್ಕಾರವನ್ನು ಕಳೆದುಕೊಳ್ಳುತ್ತಿದ್ದಾರೆ. ಶಿಕ್ಷಣದ ಜತೆಗೆ ಸಂಸ್ಕಾರ ಕಲಿತ ವಿದ್ಯಾರ್ಥಿ ಸಾಧನೆಯ ಶಿಖರವನ್ನೇರಿ ಎಲ್ಲರಿಂದ ಗೌರವ ಗಳಿಸಲಿದ್ದಾನೆ. ಒಬ್ಬ ಸಂಸ್ಕಾರವಂತ ವ್ಯಕ್ತಿ ಸಮಾಜಕ್ಕೆ ದೊಡ್ಡ ಕೊಡುಗೆಯಾಗಬಲ್ಲ ಎಂದರು.ಸೋಶಿಯಲ್ ಮೀಡಿಯಾ ಹುಚ್ಚು: ಲಂಗು ಲಗಾಮಿಲ್ಲದೇ ಸೋಶಿಯಲ್ ಮೀಡಿಯಾಗಳು ಹುಚ್ಚು ಹಿಡಿಸುತ್ತಿವೆ. ಕೇವಲ ಮೊಬೈಲ್ ಕೊಡಿಸಿಲ್ಲ ಎನ್ನುವ ಕಾರಣಕ್ಕೆ ಪೋಷಕರ ಮೇಲೆಯೆ ಹಲ್ಲೆ ಮಾಡಿರುವ ಪ್ರಕರಣ ಸಾಕಷ್ಟಿವೆ. ಆದ್ದರಿಂದ ಮೊಬೈಲ್ ಬಳಕೆ ಕಡಿಮೆಗೊಳಿಸಿ. ಪುಸ್ತಕದ ಕಡೆಗೆ ಒಲವು ತೋರಿದಲ್ಲಿ ಯಶಸ್ಸು ಸಿಗಲಿದೆ ಎಂದರು.ಸಮಾಜಮುಖಿ ಕಾರ್ಯ: ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಹಣಕ್ಕಿಂತ ಗುಣ ಹಾಗೂ ಸಂಸ್ಕಾರ ಹಾಗೂ ಕೌಶಲ್ಯಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ. ನಾವು ಮಾಡುವ ಸಮಾಜಮುಖಿ ಕಾರ್ಯಗಳೆ ನಮ್ಮ ವ್ಯಕ್ತಿತ್ವ ತಿಳಿಸಲಿದೆ ಎಂದರು. ಇದೇ ವೇಳೆ ಕಾಂತೇಶ ಅಂಬಿಗೇರ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಶಿಡೇನೂರ ಅಂಬೇಡ್ಕರ ಕಾಲೇಜು ಪ್ರಾಚಾರ್ಯ ಶಿವಾನಂದ ಬೆನ್ನೂರ ಅವರನ್ನು ರೋಟರಿ ಕ್ಲಬ್ ಪರವಾಗಿ ಸನ್ಮಾನಿಸಲಾಯಿತು. ಡಾ. ಅಂಬೇಡ್ಕರ ಶಿಕ್ಷಣ ಸಂಸ್ಥೆ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಶಿವಾನಂದ ಬೆನ್ನೂರ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಅನಿಲ ಬೊಡ್ಡಪಾಟಿ, ಸದಸ್ಯರಾದ ನಿರಂಜನ ಶೆಟ್ಟಿಹಳ್ಳಿ, ಪರಶುರಾಮ ಮೇಲಗಿರಿ, ಮಾಲತೇಶ ಅರಳಿಮಟ್ಟಿ, ಶಿವರಾಜ ಚೂರಿ, ಪವಾಡೆಪ್ಪ ಆಚನೂರ ನಿವೃತ್ತ ಪ್ರಾಚಾರ್ಯ ತಿಪ್ಪಣ್ಣ ಹಾಗೂ ಇತರರು ಉಪಸ್ಥಿತರಿದ್ದರು.