ಹೊಡಿ ಬಡಿ ಹಾಡಿಗಿಂತ ಜನಪದ ಕಲಿಸಿ: ಗೊಲ್ಲಹಳ್ಳಿ ಶಿವಪ್ರಸಾದ

| Published : Jan 11 2025, 12:46 AM IST

ಹೊಡಿ ಬಡಿ ಹಾಡಿಗಿಂತ ಜನಪದ ಕಲಿಸಿ: ಗೊಲ್ಲಹಳ್ಳಿ ಶಿವಪ್ರಸಾದ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸಂಸ್ಕೃತಿ, ಆಚಾರ, ವಿಚಾರವನ್ನು ಮರೆಯುತ್ತಿದ್ದೇವೆ. ಮುಂದಿನ ಪೀಳಿಗೆಗೆ ಜನಪದ ಕಲೆಯನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಭಟ್ಕಳ: ಮಕ್ಕಳಿಗೆ ಜನಪದ ಹಾಡುಗಳನ್ನು ಬಿಟ್ಟು, ಹೊಡಿ ಬಡಿಯುವ ಹಾಡುಗಳನ್ನು ಕಲಿಸುತ್ತಿದ್ದೇವೆ. ಇದು ಸರಿಯಲ್ಲ. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಎಂದಿಗೂ ಬಿಟ್ಟುಕೊಡಬಾರದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ತಿಳಿಸಿದರು.

ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಗಿರಿಜನರ ಸಂಭ್ರಮ ಕಾರ್ಯಕ್ರಮವನ್ನು ಅವರು ಡೆಕ್ಕೆ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಾವು ನಮ್ಮ ಸಂಸ್ಕೃತಿ, ಆಚಾರ, ವಿಚಾರವನ್ನು ಮರೆಯುತ್ತಿದ್ದೇವೆ. ಮುಂದಿನ ಪೀಳಿಗೆಗೆ ಜನಪದ ಕಲೆಯನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾನಪದ ಅಕಾಡೆಮಿಯಿಂದ ಜನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕೋಸ್ಕರ ಜನಪದದ ನಡೆ ವಿದ್ಯಾರ್ಥಿಗಳ ಕಡೆ, ಜನಪದ ನಡೆ ಜನರ ಕಡೆ ಎಂಬ ವಿನೂತನ ಕಾರ್ಯಕ್ರವನ್ನು ಹಾಕಿಕೊಂಡಿದ್ದೇವೆ ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ನಮ್ಮ ಜಿಲ್ಲೆ ಸುಂದರವಾದ ಪರಿಸರವನ್ನು ಹೊಂದಿದ ಹಲವಾರು ಬುಡಕಟ್ಟು ಜನಾಂಗಗಳಿರುವ ಜಿಲ್ಲೆಯಾಗಿದೆ. ಎಲ್ಲ ಸಮುದಾಯದಲ್ಲೂ ಜಾನಪದ ಸಂಪ್ರದಾಯ ಹಾಸು ಹೊಕ್ಕಿವೆ. ಇಂದು ಆ ಜನಪದ ಕಲೆ ಎಲ್ಲ ಸಮುದಾಯದವರಲ್ಲಿ ಕಾಣೆಯಾಗುತ್ತಿದೆ. ಅದನ್ನು ಉಳಿಸುವ ಕೆಲಸ ಸರ್ಕಾರ ಮಾಡಬೇಕಾಗಿದೆ ಎಂದರು.

ಜನಪದ ಅಕಾಡೆಮಿ ಸದಸ್ಯ ಮತ್ತು ಸಂಚಾಲಕ ಡಾ. ಜಮೀರುಲ್ಲಾ ಷರೀಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಜಾನಪದ ಅಕಾಡೆಮಿಯ ನೋಂದಣಾಧಿಕಾರಿ ಎನ್. ನಮೃತಾ, ಅಕಾಡೆಮಿಯ ಸದಸ್ಯ ಮಲ್ಲಿಕಾರ್ಜುನ್ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ, ಸಾಹಿತಿ ಆರ್.ವಿ. ಸರಾಫ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಎಂ. ನಾಯ್ಕ, ಜನತಾ ವಿದ್ಯಾಲಯದ ಪ್ರಾಂಶುಪಾಲ ಜಿ.ಎಸ್. ಹೆಗಡೆ ಉಪಸ್ಥಿತರಿದ್ದರು. ಪಿ.ಆರ್. ನಾಯ್ಕ ಸ್ವಾಗತಿಸಿದರು. ಶಿಕ್ಷಕ ನಾರಾಯಣ ನಾಯ್ಕ ನಿರ್ವಹಿಸಿದರು. ಪ್ರೊ. ಆರ್.ಎಸ್. ನಾಯಕ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶಿರಾಲಿಯ ವೃತ್ತದಿಂದ ಜನತಾ ವಿದ್ಯಾಲಯದವರೆಗೆ ಜನಪದ ಕಲಾವಿದರ ತಂಡದಿಂದ ಮೆರವಣಿಗೆ ನಡೆಯಿತು. ಹಳಿಯಾಳದ ಡಮಾಮಿ ನೃತ್ಯ, ಭಟ್ಕಳದ ಗೊಂಡರ ಕುಣಿತ, ಹೊನ್ನಾವರದ ಹಾಲಕ್ಕಿ ಸುಗ್ಗಿ ಕುಣಿತ, ತುಮಕೂರಿನ ವೀರಗಾಸೆ, ಶಿರಸಿಯ ಬೇಡರ ವೇಷ, ಸಿದ್ದಾಪುರದ ಡೊಳ್ಳುಕುಣಿತ ತಂಡಗಳು ಮೆರವಣಿಗೆಯಲ್ಲಿ ಕಲಾ ಪ್ರದರ್ಶನ ತೋರಿದರು.

ಸಭಾ ಕಾರ್ಯಕ್ರಮದ ನಂತರ ವಿಚಾರಸಂಕಿರಣ, ವಿವಿಧ ಬುಡಕಟ್ಟು ಜನಾಂಗದವರ ಬಗ್ಗೆ ಪ್ರಬಂಧ ಮಂಡನೆ ನಡೆಯಿತು.