ಮಕ್ಕಳಿಗೆ ನೈತಿಕ ಮೌಲ್ಯಗಳ ಕಲಿಸಿ

| Published : Mar 31 2024, 02:12 AM IST

ಸಾರಾಂಶ

ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಮೊದಲು ತಂದೆ-ತಾಯಿಗಳಲ್ಲಿ ಸಂಸ್ಕಾರ ಇರಬೇಕಾಗುತ್ತದೆ.

ಕನ್ನಡ ಪ್ರಭ ವಾರ್ತೆ, ಮುಧೋಳ

ತಂದೆ - ತಾಯಿಗಳು ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕಾರ ಕಲಿಸಬೇಕು. ಇದರಿಂದ ಅವರು ಜೀವನ ಪರ್ಯಂತ ಸಂತೋಷ, ನೆಮ್ಮದಿಯಾಗಿ ಇರಬಹುದು. ಮಕ್ಕಳಿಗೆ ವಿದ್ಯೆಯ ಜೊತೆಗೆ ನೈತಿಕ ಮೌಲ್ಯಗಳ ಕುರಿತು ಅರಿವು ಮೂಡಿಸಬೇಕು ಎಂದು ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹಲಗಲಿ ಗ್ರಾಮದ ಶ್ರೀ ಕಲ್ಮಠದಲ್ಲಿ ತಿಂಗಳ ಸಂಗಮ ಮಾಸಿಕ ಕಾರ್ಯಕ್ರಮದಲ್ಲಿ ಗೌರವಾಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಮೊದಲು ತಂದೆ-ತಾಯಿಗಳಲ್ಲಿ ಸಂಸ್ಕಾರ ಇರಬೇಕಾಗುತ್ತದೆ ಎಂದರು.

ಶ್ರೀಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಪಾಲಕರು ಮಕ್ಕಳಿಗೆ ಕೊಟ್ಟ ಸಂಸ್ಕಾರವೇ ಅವರ ವ್ಯಕ್ತಿತ್ವವನ್ನು ಕಾಪಾಡುತ್ತದೆ, ಮನುಷ್ಯನ ನಡೆ - ನುಡಿ ಚೆನ್ನಾಗಿದ್ದರೆ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.

ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾವಕಾರ ಅಧ್ಯಕ್ಷತೆವಹಿಸಿ ಮಾತನಾಡಿ ತಾಯಿ ಮಗುವಿಗೆ ಪ್ರೀತಿ ಕೊಟ್ಟರೆ, ತಂದೆ ಪ್ರೀತಿ ಜೊತೆಗೆ ಶಿಸ್ತನ್ನು ಕಲಿಸಿ ಕೊಡುವನು. ಪಾಲಕರು ಮಕ್ಕಳಿಗೆ ಶಿಸ್ತನ್ನು ಕಲಿಸುವುದರ ಜೊತೆಗೆ ಸಮಯದ ಮಹತ್ವ ಕಲಿಸಿ ಕೊಡಬೇಕು. ವಿದ್ಯೆ ಪಡದವನು ಭ್ರಷ್ಟನಾಗಬಹುದು. ಆದರೆ, ಸಂಸ್ಕಾರ ಪಡೆದವ ಎಂದೂ ಭ್ರಷ್ಟನಾಗಲಾರ. ಸಂಸ್ಕಾರದ ಕೊರತೆಯಿಂದ ಉನ್ನತ ಶಿಕ್ಷಣ ಪಡೆದುಕೊಂಡವರೇ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.

ಬೀಳಗಿ ತಾಲೂಕು ಕಜಾಪ ಅಧ್ಯಕ್ಷ ಬಸವರಾಜ ದಾವಣಗೆರೆ ಅವರು ಮಕ್ಕಳ ಮೌಲ್ಯಗಳ ನಿರ್ಮಾಣದಲ್ಲಿ ಹೆತ್ತವರ ಪಾತ್ರ ವಿಷಯದ ಕುರಿತು ಮಾತನಾಡಿದರು. ಮುಖ್ಯೋಪಾಧ್ಯಾಯ ರವೀಂದ್ರ ಉಪ್ಪಾರ, ಮಲ್ಲಯ್ಯ ದೇವನಾಳಮಠ, ರಾಚಣ್ಣ ತಿಮ್ಮನ್ನವರ, ಈರಪ್ಪ ದಿವಾನದ, ಗಿರೀಶ ಕುಸುಗಲ್, ಸುರೇಶ ಹೊಸಮನಿ, ಅಶೋಕ ಕೋಮಾರ, ಹೊಳಬಸಯ್ಯ ಮಠಪತಿ ಮತ್ತಿತರರು ಇದ್ದರು.