ನಮ್ಮ ಸಂಸ್ಕೃತಿ ಮಕ್ಕಳಿಗೆ ಕಲಿಸಿ: ಮೇಘರಾಜೇಂದ್ರ ಸ್ವಾಮೀಜಿ

| Published : Oct 14 2024, 01:17 AM IST

ಸಾರಾಂಶ

ಇತ್ತೀಚಿನ ದಿನಮಾನಗಳಲ್ಲಿ ಧರ್ಮ ನಶಿಸಿ ಹೋಗುತ್ತಿದೆ, ಅಧರ್ಮ ಬೆಳೆಯುತ್ತಿದೆ.

ಶ್ರೀಕಾಳಿಕಾದೇವಿಯ ಮಹಾಪುರಾಣ ಹಾಗೂ 115ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಇತ್ತೀಚಿನ ದಿನಮಾನಗಳಲ್ಲಿ ಧರ್ಮ ನಶಿಸಿ ಹೋಗುತ್ತಿದೆ, ಅಧರ್ಮ ಬೆಳೆಯುತ್ತಿದೆ. ನಮ್ಮ ಸಂಸ್ಕೃತಿ ನಾಶವಾಗುತ್ತಿದೆ. ನಮ್ಮ ಮಕ್ಕಳಿಗೆ ಆಚಾರ, ವಿಚಾರ ಸಂಸ್ಕೃತಿ ಕಲಿಸಬೇಕು ಎಂದು ಮುರನಾಳ ಮಳೆರಾಜೇಂದ್ರಸ್ವಾಮಿಗಳ ಮಠದ ಮೇಘರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಶ್ರೀಕಾಳಿಕಾದೇವಿಯ ಮಹಾಪುರಾಣ ಹಾಗೂ 115ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಮಕ್ಕಳಿಗೆ ಆಚಾರ, ವಿಚಾರ ಸಂಸ್ಕೃತಿ ಕಲಿಸುವ ಮೂಲಕ ಸಂಸ್ಕೃತಿ ಉಳಿಸಿ, ಬೆಳೆಸಬೇಕಾಗಿದೆ ಎಂದರು.

ನಮ್ಮ ಜೀವನ ಚರಿತ್ರೆ ದೇಹದ ಪುರಾಣ ಇದ್ದಂತೆ. ದೇವಿ ಪುರಾಣದಲ್ಲಿ ದೇವಿಯು ದುಷ್ಟರನ್ನು ಸಂಹಾರ ಮಾಡುವಂತೆ, ನಮ್ಮ ದೇಹದ ಪುರಾಣದಲ್ಲಿ ನಾವೂಗಳು ನಮ್ಮ ದುರಾಸೆ ಸಂಹಾರ ಮಾಡಬೇಕು. ಅರಿಷಡ್ವರ್ಗಗಳನ್ನು ನಾಶ ಮಾಡಿಕೊಳ್ಳಬೇಕು. ಮೌಲ್ಯಯುತವಾದ ಶಕ್ತಿ ಪಡೆಯಬೇಕಾದರೆ ನಾವು ಧರ್ಮ ಓದಬೇಕು. ದೇವಿ ಪಾರಾಯಣ ಮಾಡಬೇಕು ಎಂದರು.

ಲಿಂಗನಬಂಡಿಯ ಉಳವೇಂದ್ರ ಸ್ವಾಮೀಜಿ, ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸವನಗೌಡ ಬಯ್ಯಾಪೂರ , ನಾಗಲಿಂಗಮಠ ವೀರೇಂದ್ರ ಸ್ವಾಮೀಜಿ, ಡಾ. ಗಂಗಾಧರಸ್ವಾಮಿಗಳು ಮಾತನಾಡಿದರು.

ಮೆರವಣಿಗೆ: ಕುಷ್ಟಗಿ ಪಟ್ಟಣದ ಶ್ರೀಬುತ್ತಿಬಸವೇಶ್ವರ ದೇವಸ್ಥಾನದಿಂದ ಶ್ರೀಕಾಳಿಕಾದೇವಿ ಭಾವಚಿತ್ರದ ಮೆರವಣಿಗೆಯೂ ಸಕಲ ಮಂಗಳ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಹಿಳೆಯರು ಮಕ್ಕಳು ಕಳಸ ಹಿಡಿದು ಪಾಲ್ಗೊಂಡಿದ್ದರು.

ಈ ಸಂದರ್ಭ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶರಣಪ್ಪ, ರಾಮಣ್ಣ ಬ್ಯಾಲಿಹಾಳ, ವಿಜಯ ಕುಮಾರ, ದೇವಪ್ಪ ಗಂಗನಾಳ, ಈಶಪ್ಪ ಬಡಿಗೇರ, ಬಸವರಾಜ ಅಂಗಡಿ, ಜಗದೀಶ ನವಲಹಳ್ಳಿ, ಗೋಪಾಲ ಚನ್ನದಾಸರ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ಶರಣಪ್ಪ ಲೈನದ ನಿರೂಪಿಸಿದರು. ಶ್ರೀದೇವಿ ಪ್ರಾರ್ಥನೆಗೈದರು. ಹಲವರಿಗೆ ಸನ್ಮಾನ, ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.