ಮಕ್ಕಳಿಗೆ ಯಕ್ಷಗಾನ ಕಲಿಸಿ, ಸಂಸ್ಕಾರಯುತ ಸಮಾಜ ಬೆಳೆಸಿ: ಡಾ. ತಲ್ಲೂರು ಕರೆ

| Published : Feb 13 2025, 12:49 AM IST

ಸಾರಾಂಶ

ಉಚ್ಚಿಲದ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಸಹಯೋಗದಲ್ಲಿ ಉಚ್ಚಿಲ ನಾರಾಯಣ ಗುರು ರಸ್ತೆಯ ವಠಾರದಲ್ಲಿ ‘ಪ್ರತಿಜ್ಞಾ ಭೀಷ್ಮ’ ಯಕ್ಷಗಾನ ಬಯಲಾಟದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾಪು

ಮಕ್ಕಳಿಗೆ ತಂದೆ ತಾಯಿ, ಹಿರಿಯರ ಪ್ರೀತಿ, ವಾತ್ಸಲ್ಯ ಸಿಕ್ಕಿದರೆ ಸಾಲದು, ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಬಲ್ಲ ಸಂಸ್ಕಾರವೂ ಸಿಗಬೇಕು. ಈ ಸಂಸ್ಕಾರ ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ದೊರೆಯುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.

ಭಾನುವಾರ ಇಲ್ಲಿನ ಉಚ್ಚಿಲದ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾಸಂಘದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಸಹಯೋಗದಲ್ಲಿ ಉಚ್ಚಿಲ ನಾರಾಯಣ ಗುರು ರಸ್ತೆಯ ವಠಾರದಲ್ಲಿ ನಡೆದ ‘ಪ್ರತಿಜ್ಞಾ ಭೀಷ್ಮ’ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಮಕ್ಕಳಿಗೆ ಆಧುನಿಕ ಶಿಕ್ಷಣ ಸಿಗುತ್ತಿದೆ, ಆಧುನಿಕ ಸವಲತ್ತುಗಳೂ ದೊರೆಯುತ್ತಿವೆ. ಕೊರತೆ ಏನೆಂದರೆ ಮನೆಯ ಹಿರಿಯರಲ್ಲಿ ಮಾತನಾಡುವವರಿಲ್ಲ. ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರಸಂಗಗಳು ಹೆಚ್ಚುತ್ತಿರುವುದು ಕಳವಳವನ್ನುಂಟು ಮಾಡುತ್ತಿದೆ. ಇದು ನಮ್ಮ ಸಂಸ್ಕೃತಿಗೆ ಶೋಭೆ ತರುವ ವಿಚಾರವಲ್ಲ ಎಂದರು.ಹೀಗಾಗಿ ಭವಿಷ್ಯದಲ್ಲಿ ಮಕ್ಕಳು ಸುಸಂಸ್ಕೃತರಾಗಿ ಬಾಳಬೇಕೇ ಅವರಿಗೆ ಯಕ್ಷಗಾನ ಕಲಿಸಿ. ಯಕ್ಷಗಾನದ ಪುರಾಣ ಪ್ರಸಂಗಗಳು ನೈತಿಕತೆಯ ಪಾಠ ಕಲಿಸುವುದಲ್ಲದೆ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ದಾರಿ ದೀಪವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಸಂಘದ ಅಧ್ಯಕ್ಷ ಸತೀಶ್ ಭಟ್ ಉಚ್ಚಿಲ ವಹಿಸಿದ್ದರು. ಸ್ಥಳೀಯ ಗಣ್ಯರಾದ ಡಾ. ಗುರುಪ್ರಸಾದ್ ನಾವಡ ಯು.ಕೆ., ಗಣೇಶ್ ಡಿ. ಪೂಜಾರಿ ಉಚ್ಚಿಲ, ಬಸವರಾಜ್ ಎ. ರಾವ್ ಉಚ್ಚಿಲ ಮೊದಲಾದವರು ಇದ್ದರು

ನಂತರ ಯಕ್ಷಗಾನ ರಂಗದಲ್ಲಿ ಮರೆಯಾಗುತ್ತಿರುವ ಯಕ್ಷಗಾನ ಪೂರ್ವರಂಗದ ಸೂತ್ರಧಾರ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ ಮತ್ತು ಪಾಂಡವರ ಒಡ್ಡೋಲಗ ಪ್ರದರ್ಶಿಸಲಾಯಿತು.