ಸಾರಾಂಶ
ಅಜ್ಜಿಗೆ ಫೋನ್ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ 9 ವರ್ಷದ ವಿದ್ಯಾರ್ಥಿಯ ಮೇಲೆ ಶಿಕ್ಷಕನೊಬ್ಬ ಭೀಕರವಾಗಿ ಹಲ್ಲೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಂಸ್ಕೃತ, ವೇದ ಅಧ್ಯಯನ ಪಾಠಶಾಲೆಯಲ್ಲಿ ನಡೆದಿದೆ.
ನಾಯಕನಹಟ್ಟಿ (ಚಿತ್ರದುರ್ಗ) : ಅಜ್ಜಿಗೆ ಫೋನ್ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ 9 ವರ್ಷದ ವಿದ್ಯಾರ್ಥಿಯ ಮೇಲೆ ಶಿಕ್ಷಕನೊಬ್ಬ ಭೀಕರವಾಗಿ ಹಲ್ಲೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಂಸ್ಕೃತ, ವೇದ ಅಧ್ಯಯನ ಪಾಠಶಾಲೆಯಲ್ಲಿ ನಡೆದಿದೆ. ಕಳೆದ ಫೆಬ್ರುವರಿಯಲ್ಲಿ ನಡೆದ ಘಟನೆ ಕುರಿತ ವಿಡಿಯೋ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ಕುರಿತು ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳೀಯರು ಪಾಠಶಾಲೆಗೆ ನುಗ್ಗಿ ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅದರ ಬೆನ್ನಲ್ಲೇ ಶಿಕ್ಷಕ ತಲೆ ಮರೆಸಿಕೊಂಡಿದ್ದನಾದರೂ ಆತನನ್ನು ಕಲಬುರಗಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಲ್ಲೆ ಸಂಬಂಧ ಆರೋಪಿ ಶಿಕ್ಷಕ, ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದ ವೀರೇಶ್ ವಿರುದ್ಧ ನಾಯಕನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.
ಕರೆ ಮಾಡಿದ್ದಕ್ಕೆ ಹಲ್ಲೆ:
ಸಂತ್ರಸ್ತ ಬಾಲಕ ಅಜ್ಜಿಗೆ ಫೋನ್ ಮಾಡಿದನೆಂಬ ಕಾರಣಕ್ಕಾಗಿ ವಿದ್ಯಾರ್ಥಿ ಮೇಲೆ ಈ ಶಿಕ್ಷಕ ಮನಬಂದಂತೆ ಹಲ್ಲೆ ಮಾಡಿದ್ದು, ಕಾಲಿನಿಂದ ಎದೆ, ಕಪಾಳಕ್ಕೆ ಒದ್ದಿದ್ದಾನೆ. ವಿದ್ಯಾರ್ಥಿ ಪರಿಪರಿಯಾಗಿ ಬೇಡಿಕೊಂಡರೂ ನಿಲ್ಲಿಸದೆ ಥಳಿಸಿದ್ದಾನೆ. ಬೇರೆ ನಂಬರ್‌ನಿಂದ ಅಜ್ಜಿಗೆ ಕರೆ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲೇ ಇದ್ದವನೊಬ್ಬ ಇದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ.
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ, ಮಕ್ಕಳ ಬಳಿ ಮಾಹಿತಿ ಪಡೆದಿದೆ. ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು, ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಲಬುರಗಿಯಲ್ಲಿ ಬಂಧಿಸಲಾಗಿದೆ.
ವಿದ್ಯಾರ್ಥಿಗಳ ಸಂಖ್ಯೆ ಕುಸಿತ:
ನಾಯಕನಹಟ್ಟಿಯ ತಿಪ್ಪೇರುದ್ರ ಸ್ವಾಮಿ ದೇವಾಲಯದ ದಾಸೋಹ ಭವನದ ಮೇಲ್ಬಾಗದ ಕೊಠಡಿಗಳಲ್ಲಿ ಶಾಲೆ ನಡೆಯುತ್ತಿದ್ದು, ಘಟನೆ ನಡೆದ ವೇಳೆ 30ಕ್ಕೂ ಹೆಚ್ಚಿನ ಮಕ್ಕಳು ಇಲ್ಲಿ ವೇದಾಧ್ಯಯನ ಮಾಡುತ್ತಿದ್ದರು. ಪ್ರಸ್ತುತ 4 ಮಕ್ಕಳು ಮಾತ್ರ ಇದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ ಕೂಡ ಬೇರೆ ಶಾಲೆಗೆ ಸೇರಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಕ್ರಮಕ್ಕೆ ಸೂಚನೆ: ಸಚಿವ ರೆಡ್ಡಿಚಿತ್ರದುರ್ಗದ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ಶಿಕ್ಷಕನ ವರ್ತನೆ ಅಮಾನುಷ. ಕೂಡಲೇ ವರದಿ ಪಡೆದು ಶಿಕ್ಷಕ ಮತ್ತು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.
ರಾಮಲಿಂಗಾರೆಡ್ಡಿ, ಮುಜರಾಯಿ ಖಾತೆ ಸಚಿವ