ಎಸ್‌ಟಿಜಿ ಕಾಲೇಜಿನ ವಿದ್ಯಾರ್ಥಿ ಮಂತ್ರಿಮಂಡಲಕ್ಕೆ ಪ್ರತಿಜ್ಞಾ ವಿಧಿ ಬೋಧನೆ

| Published : Oct 21 2025, 01:00 AM IST

ಎಸ್‌ಟಿಜಿ ಕಾಲೇಜಿನ ವಿದ್ಯಾರ್ಥಿ ಮಂತ್ರಿಮಂಡಲಕ್ಕೆ ಪ್ರತಿಜ್ಞಾ ವಿಧಿ ಬೋಧನೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಯಕರಾಗಿ ಆಯ್ಕೆಯಾಗಿರುವ ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಪಕ್ಷಪಾತದಿಂದ ಕೆಲಸ ಮಾಡದೆ ನಿಷ್ಪಕ್ಷಪಾತವಾಗಿ ತಮ್ಮ ಹೊಣೆಯನ್ನು ಹೊರಬೇಕು. ಅಷ್ಟೇ ಅಲ್ಲದೆ ನಾಯಕನಾದವನು ಮತ್ತಷ್ಟು ನಾಯಕರನ್ನು ಹುಟ್ಟುಹಾಕುವ ಗುಣವನ್ನು ಹೊಂದಿರಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಚುನಾವಣಾ ಸಮಿತಿ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಘಟಕದ ಸಹಯೋಗದೊಂದಿಗೆ ಚುನಾಯಿತ ವಿದ್ಯಾರ್ಥಿಗಳ ಪದಗ್ರಹಣ ಹಾಗೂ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಚಿನಕುರಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಲಿಂಗೇಗೌಡ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಸಮಾಜದ ಎಲ್ಲಾ ಸ್ತರಗಳಲ್ಲೂ ವಿವಿಧ ರೀತಿಯ ಸಂಘಟನೆಗಳಲ್ಲೂ ಸಾಧನೆ ಮಾಡಿರುವ ಸಾವಿರಾರು ನಾಯಕರು ನಮ್ಮ ಕಣ್ಣಮುಂದೆ ನಿದರ್ಶನವಾಗಿದ್ದು ನಮಗೆ ಸ್ಫೂರ್ತಿ ನೀಡಿದ್ದಾರೆ ನೀಡುತ್ತಿದ್ದಾರೆ. ಹೀಗೆ ಒಬ್ಬ ಉತ್ತಮ ನಾಯಕನನ್ನು ರೂಪಿಸುವ ಹೊಣೆಹೊತ್ತಿರುವ ಕಾಲೇಜು ಪಠ್ಯದೊಂದಿಗೆ ಪಠ್ಯೇತರ ಭಾಗವಾಗಿ ವಿದ್ಯಾರ್ಥಿಗಳಿಂದ ಚುನಾವಣೆ ನಡೆಸಿದೆ. ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಪದಗ್ರಹಣದೊಂದಿಗೆ ಬ್ಯಾಡ್ಜ್ ವಿತರಿಸಿ ಪ್ರತಿಜ್ಞೆ ಬೋಧಿಸಿ ಜವಾಬ್ದಾರಿಯನ್ನು ಹಂಚಿಕೆ ಮಾಡಿದೆ. ಇದರಿಂದ ಅವರಲ್ಲಿರುವ ನಾಯಕತ್ವ ಗುಣವನ್ನು ಹೊರತೆಗೆಯುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ನಾಯಕರಾಗಿ ಆಯ್ಕೆಯಾಗಿರುವ ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಪಕ್ಷಪಾತದಿಂದ ಕೆಲಸ ಮಾಡದೆ ನಿಷ್ಪಕ್ಷಪಾತವಾಗಿ ತಮ್ಮ ಹೊಣೆಯನ್ನು ಹೊರಬೇಕು. ಅಷ್ಟೇ ಅಲ್ಲದೆ ನಾಯಕನಾದವನು ಮತ್ತಷ್ಟು ನಾಯಕರನ್ನು ಹುಟ್ಟುಹಾಕುವ ಗುಣವನ್ನು ಹೊಂದಿರಬೇಕು. ಆಗ ಮಾತ್ರ ಆತ ನಿಜವಾದ ನಾಯಕನಾಗುತ್ತಾನೆ ಎಂದು ವಿದ್ಯಾರ್ಥಿಗಳಗೆ ಅವರವರ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಹಾಗೂ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಿ.ಪಿ.ಶಿವರಾಜು ಸಹಕಾರಕ್ಕೆ ಕೃತಜ್ಞತೆ ಅರ್ಪಿಸಿದರು. ವೇದಿಕೆಯಲ್ಲಿ ಆಂತರಿಕ ಗುಣಮಟ್ಟ ಭರವಸೆಯ ಘಟಕದ ಸಂಯೋಜಕ ರಘುನಂದನ್, ಕಾಲೇಜು ಚುನಾವಣಾಧಿಕಾರಿ ಬಿ.ಎಸ್.ಕುಮಾರ್ ಉಪಸ್ಥಿತರಿದ್ದರು. ವಿವಿಧ ವಿದ್ಯಾರ್ಥಿಗಳು ನಿರೂಪಣೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಹಾಸನಾಂಬೆಯಲ್ಲಿ ಏಳೂ ದಿನಗಳ ಕಾಲ ಸೇವೆ ಸಲ್ಲಿಸಿದ ರೋವರ್ಸ್‌ ಮತ್ತು ರೇಂಜರ್ಸ್ ಗಳಿಗೆ ಪ್ರಮಾಣಪತ್ರ ನೀಡಲಾಯಿತು.