ಸಾರಾಂಶ
ಶಿವಮೊಗ್ಗ: ಶಿಕ್ಷಕ ಕೇವಲ ತಮ್ಮ ಪಾಠ ಪ್ರವಚನ ಮಾತ್ರ ಮಾಡುವುದಿಲ್ಲ, ಮಾರ್ಗದರ್ಶಕ ಆಗಿರುತ್ತಾನೆ ಎಂದು ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ಹೇಳಿದರು.
ತೀರ್ಥಹಳ್ಳಿ ತಾಲೂಕು ತೂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕುವೆಂಪು ಸಭಾಂಗಣದಲ್ಲಿ 2004 ರಿಂದ 2008ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಬಳಗದಿಂದ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಯಾವುದೇ ವಿದ್ಯಾರ್ಥಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದಾಗ ಅಂತಹ ವಿದ್ಯಾರ್ಥಿಗಳು ಶಿಕ್ಷಕರಲ್ಲಿ ನನ್ನ ವಿದ್ಯಾರ್ಥಿ ಎಂಬ ಭಾವನೆ ಮೂಡುತ್ತದೆ. ಇಂದಿನ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನ ಪೂರೈಸಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸರಸ್ವತಿ, ಮೋಹನ್ ಕುಮಾರ್, ರಾಘವೇಂದ್ರ, ಆನಂದ ರಾಮ್ ಮೃದಂಗ, ಶಂಕರ್ ಶಾಸ್ತ್ರಿ, ಕೆ.ಎಸ್.ಪ್ರಕಾಶ್, ಪ್ರಾಥಮಿಕ ಶಾಲೆಯ ರಾಮಬಾಯಿ , ಸುಮಾವತಿ , ಆರ್ಶಿಯಾ ಬೇಗಂ, ವಿನೋದ, ಶೋಭಾ, ಉಮೇಶ್, ಚೈತ್ರ, ಕಮಲಮ್ಮ, ಗಿರಿರಾಜ್, ಎಸ್‌ಡಿಎಂಸಿ ಸದಸ್ಯರಾದ ಕವಿರಾಜ್ ಹಾಗೂ ಜಲೀಲ್ ಅಹಮದ್, ಪೋಷಕರು, ಶಾಲಾ ವಿದ್ಯಾರ್ಥಿಗಳು ತೂದೂರು ಗ್ರಾಮಸ್ಥರು ಉಪಸ್ಥಿತರಿದ್ದರು.ಎಲ್ಲೆಲ್ಲೂ ಸಂಭ್ರಮದ ವಾತಾವರಣ:ಗುರುವಂದನೆ ಕಾರ್ಯಕ್ರಮ ಹಿನ್ನೆಲೆ ಶಾಲೆಯು ಮದುಮಗಳಂತೆ ಕಂಗೊಳಿಸುತ್ತಿತ್ತು. ಎಲ್ಲೆಲ್ಲೂ ಸಂಭ್ರಮದ ವಾತಾವರಣ. ಹಳೆ ವಿದ್ಯಾರ್ಥಿಗಳು, ನಿವೃತ್ತರಾದ ಶಿಕ್ಷಕರು ವರ್ಗಾವಣೆಗೊಂಡ ಶಿಕ್ಷಕರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಇವರ ಸಮಾಗಮ ಕಾರ್ಯಕ್ರಮಕ್ಕೆ ಮೆರುಗನ್ನು ಹೆಚ್ಚಿಸಿತು. ಹೂವಿನ ಹಾಸಿಗೆಯ ಮೇಲೆ ಗುರು ವೃಂದದವರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ವೇದಿಕೆಯಲ್ಲಿ ಗುರುವೃಂದವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ವೇಳೆ ಹಳೆ ವಿದ್ಯಾರ್ಥಿಗಳು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲೆಯ ಶ್ರೇಯೋಭಿವೃದ್ಧಿಗಾಗಿ ಕೊಡುಗೆ ನೀಡಿದರು.ಹದಿನಾರು ವರ್ಷಗಳ ನಂತರ ಎಲ್ಲರೂ ಒಂದೆಡೆ ಸೇರಿ ತಾವು ಕಲಿತ ಶಾಲೆಯ ಶಿಕ್ಷಕರ ನೆನಪು ಮಾಡಿಕೊಂಡ ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು, ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ನೆನಪುಗಳನ್ನು ವಿನಿಮಯ ಮಾಡಿಕೊಂಡರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.