ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಶಿಕ್ಷಕನೊಬ್ಬ ವಿದ್ಯಾರ್ಥಿನಿಯರೊಂದಿಗೆ, ಶಿಕ್ಷಕಿಯರೊಂದಿಗೆ ಸೇರಿದಂತೆ ಎಸ್‌ಡಿಎಂಸಿ ಆಡಳಿತ ಮಂಡಳಿಯೊಂದಿಗೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಶಿಕ್ಷಕರು ಮತ್ತು ಎಸ್‌ಡಿಎಂಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೆಟ್ಟಿಲೇರಿದೆ.ತಾಲೂಕಿನ ಗಡಿ ಸೋಮನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎ.ಜಿ.ತಿಲಕ ವಿರುದ್ಧ ವಿದ್ಯಾರ್ಥಿನಿಯರು, ಶಿಕ್ಷಕಿಯರು ಸೇರಿ ಆಡಳಿತ ಮಂಡಳಿಯವರು ವಿವಿಧ ಆರೋಪಗಳನ್ನು ಮಾಡಿದ್ದು, ಆತನನ್ನು ಕೆಲಸದಿಂದ ವಜಾ ಮಾಡುವಂತೆ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬೀರಪ್ಪ ಪೂಜಾರಿ, ಶಿಕ್ಷಕ ಎ.ಜಿ.ತಿಲಕ ಶಾಲಾ ಮಕ್ಕಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ ಶಾಲೆಯ ಶಿಕ್ಷಕಿಯರು ಮತ್ತು ಮುಖ್ಯಗುರುಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆ. ಶಾಲೆಯಲ್ಲಿ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು, ಮಕ್ಕಳಿಗೆ ಬೆದರಿಸುತ್ತಿದ್ದಾನೆ ಎಂದು ಬಿಇಒಗೆ ದೂರು ನೀಡಿದ್ದಾಗಿ ತಿಳಿಸಿದರು.
ಶಿಕ್ಷಕ ಎ.ಜಿ.ತಿಲಕ ೨೦೧೯ರಲ್ಲಿ ಚವನಭಾವಿ ಗ್ರಾಮದ ಶಾಲೆಯಲ್ಲಿಯೂ ಇದೇ ರೀತಿ ನಡೆದುಕೊಂಡಿದ್ದಕ್ಕೆ ಗಡಿ ಸೋಮನಾಳ ಗ್ರಾಮಕ್ಕೆ ವರ್ಗಾವಣೆ ಮಾಡಿದ್ದರು. ಅದೇ ರೀತಿ ವರ್ತನೆ ಮುಂದುವರೆಸಿದ್ದರಿಂದ ಗ್ರಾಮಸ್ಥರು, ಎಸ್‌ಡಿಎಂಸಿ ಮತ್ತು ಮಕ್ಕಳ ದೂರಿನ ಮೇರೆಗೆ ಹಗರಗುಂಡ ಶಾಲೆಗೆ ೨೦೨೧ರಲ್ಲಿ ವರ್ಗಾವಣೆಗೊಂಡಿದ್ದ. ನಂತರ ಹುಲಗಬಾಳ ಶಾಲೆಗೆ ವರ್ಗಾಯಿಸಲಾಯಿತು. ನಂತರ ಮುದೂರ ಶಾಲೆ, ಅಲ್ಲಿಂದ ಘಾಳಪೂಜಿಗೆ ವರ್ಗಾಯಿಸಿದರು. ಈಗ ೨೦೨೪ರ ಡಿಸೆಂಬರ್‌ನಲ್ಲಿ ಮತ್ತೆ ಮೂಲ ಗಡಿಸೋಮನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂಗ್ಲಿಷ್ ಶಿಕ್ಷಕನಾಗಿ ವರ್ಗ ಮಾಡಿದ್ದಾರೆ. ಇಲ್ಲಿಯೂ ಅದೇ ವರ್ತನೆ ಮುಂದುವರಿದಿದೆ ಎಂದು ಆರೋಪಿಸಿದರು.ಮುಖ್ಯಗುರು ಟಿ.ಎಸ್.ಲಮಾಣಿ ಮಾತನಾಡಿ, ಶಿಕ್ಷಕನಾಗಿ ಪರಿಜ್ಞಾನವೇ ಇಲ್ಲದ ಎ.ಜಿ.ತಿಲಕನಿಂದ ಶಾಲಾ ವಾತಾವರಣವೇ ಹದಗೆಡುತ್ತಿದೆ. ಇದು ಮಕ್ಕಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳ ಪಾಲಕರು ಶಾಲೆಗೆ ಆಗಮಿಸಿ ತಿಳಿ ಹೇಳಿದರೂ ಆತ ಸುಧಾರಣೆಯಾಗಿಲ್ಲ. ಇದರಿಂದ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಈ ವೇಳೆ ಶಿಕ್ಷಕಿಯರಾದ ಬಿ.ಎಸ್.ಹಿರೇಮಠ, ದ್ರಾಕ್ಷಾಯಿಣಿ ಹೂಗಾರ, ಶಶಿಕಲಾ, ಜಯಶ್ರೀ ಶಿಲವಂತ, ದೀಪಿಕಾ ಕಲಕೇರಿ, ಎಂ.ವಿ.ಕೋರವಾರ, ಗ್ರಾಪಂ ಸದಸ್ಯರಾದ ಭೀಮನಗೌಡ ತಂಗಡಗಿ, ಹಳ್ಳುರಾಯ ಕರೇಕಲ್ಲ, ಶಾಂತು ರಾಠೋಡ, ಸುಗಪ್ಪಸಾಹುಕಾರ ಕಂಗಳ, ವೀರೇಶ ಕಾಜಗಾರ, ಸಂತೋಷ ಪೂಜಾರಿ, ಮುತ್ತುಗೌಡ, ರಾಮನಗೌಡ ಕಾಚಾಪೂರ, ಮುತ್ತು ಧೂಳೇಕರ ಮುಂತಾದವರು ಇದ್ದರು.----
ಕೋಟ್ಶಿಕ್ಷಕ ಎ.ಜಿ.ತಿಲಕ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದು, ಶಿಕ್ಷಕಿಯರಿಗೆ ಮತ್ತು ಎಸ್‌ಡಿಎಂಸಿ ಅವರೊಂದಿಗೆ ಅನುಚಿತವಾಗಿ ವರ್ತಿಸುವ ಬಗ್ಗೆ ದೂರುಗಳು ಬಂದಿವೆ. ಆ ಶಿಕ್ಷಕನ ಮೇಲೆ ಸೂಕ್ತ ಕ್ರಮಕ್ಕೆ ಕಮಿಷನರ್‌ಗೆ ಕಳುಹಿಸಿದ್ದೆವು. ಅವರು ಡಿಡಿಪಿಐಗೆ ಬರೆಯಲು ಹೇಳಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಲು ವರದಿ ಕಳುಹಿಸಲಾಗುವುದು. ಎ.ಜಿ.ತಿಲಕ ಶಾಲೆಗೆ ಸೇರಿದ ನಂತರ ಎಲ್ಲೆಲ್ಲಿ ಯಾವ ಯಾವ ಆರೋಪಗಳ ಮೇಲೆ ಅಮಾನತು ಮತ್ತು ವರ್ಗಾವಣೆಗೊಂಡಿರುವುದರ ಬಗ್ಗೆ ಮತ್ತು ಸದ್ಯದ ದೂರಿನ ಬಗ್ಗೆ ಸಮಗ್ರ ವರದಿಯೊಂದಿಗೆ ಸೂಕ್ತ ಕ್ರಮಕ್ಕೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕಳುಹಿಸಿಕೊಡುತ್ತೇನೆ.- ಬಸವರಾಜ ಸಾವಳಗಿ, ಮುದ್ದೇಬಿಹಾಳ ಬಿಇಒ