ಶಿಕ್ಷಕರ ಕ್ರಿಯಾಶೀಲತೆ ಬೋಧನೆ ಮಕ್ಕಳ ಕಲಿಕೆಗೆ ಸಹಕಾರಿ: ಬಸವರಾಜು

| Published : Apr 13 2025, 02:07 AM IST

ಶಿಕ್ಷಕರ ಕ್ರಿಯಾಶೀಲತೆ ಬೋಧನೆ ಮಕ್ಕಳ ಕಲಿಕೆಗೆ ಸಹಕಾರಿ: ಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರು ಕ್ರಿಯಾಶೀಲತೆಯಿಂದ ಬೋಧಿಸಿದಾಗ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು.

ಕಲಿಕಾ ಪ್ರಗತಿ ಪರಿಶೀಲನೆ

ಚಿತ್ರದುರ್ಗ: ಶಿಕ್ಷಕರು ಕ್ರಿಯಾಶೀಲತೆಯಿಂದ ಬೋಧಿಸಿದಾಗ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು.

ತಾಲೂಕಿನ ಹಲಗಪ್ಪನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2 ನೇ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲಿ ಸ್ಪಷ್ಟ ಓದು, ಶುದ್ಧ ಬರಹ, ಸಂಖ್ಯಾಜ್ಞಾನದಲ್ಲಿ ಸಾಮರ್ಥ್ಯ ಬೆಳೆಸಿದಾಗ ಉನ್ನತ ಹಂತದ ಶಿಕ್ಷಣ ಪಡೆಯಲು ಸುಲಭವಾಗುತ್ತದೆ. ಭಾಷಾ ಕೌಶಲ್ಯ ಅಭಿವೃದ್ಧಿಪಡಿಸಲು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂದರು.

ಪುಸ್ತಕಗಳು ಜ್ಞಾನಾಭಿವೃದ್ದಿಗೆ ಪೂರಕವಾಗಿದ್ದು ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಅಭಿವ್ಯಕ್ಯಿ ಸಾಮರ್ಥ್ಯ ಬೆಳೆಸಿ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತವೆ. ವಿದ್ಯಾರ್ಥಿಗಳು ಬುನಾದಿ ಸಾಕ್ಷರತೆ ಸಂಖ್ಯಾ ಜ್ಞಾನ ಕಲಿಕಾ ಸಾಮರ್ಥ್ಯದಲ್ಲಿ ಉತ್ತಮ ಸಾಧನೆ ಮಾಡಿದ್ದು ಶಿಕ್ಷಕರ ಬೋಧನಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣ ಸಂಯೋಜಕ ಕೆ.ಆರ್.ಲೋಕೇಶ್ ಮಕ್ಕಳ ಪ್ರಗತಿ ಪತ್ರ, ಉತ್ತರ ಪತ್ರಿಕೆ, ಅಭ್ಯಾಸ ಪುಸ್ತಕ, ಕೃತಿ ಸಂಪುಟ ಪರಿಶೀಲಿಸಿ ಮಾತನಾಡಿ, ಶಿಕ್ಷಕರು ರೂಪಣಾತ್ಮಕ ಮೌಲ್ಯಮಾಪನವನ್ನು ಪರಿಕಲ್ಪನೆಗಳಿಗೆ ಪೂರಕವಾದ ಚಟುವಟಿಕೆಗಳನ್ನು ಆಯೋಜಿಸಿ ನಿರ್ವಹಿಸಬೇಕು ಎಂದರು.

ಸಂಕಲನಾತ್ಮಕ ಮೌಲ್ಯಮಾಪನವನ್ನು ನೀಲನಕಾಶೆ ಆಧಾರದ ಮೇಲೆ ಪ್ರಶ್ನೆ ಪತ್ರಿಕೆಗಳನ್ನು ರಚಿಸಿಕೊಂಡು ನಿರ್ವಹಿಸಬೇಕು. ಪರಿಕಲ್ಪನೆಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥಮಾಡಿಸಲು ಕಲಿಕಾ ಸಾಮಗ್ರಿಗಳ ಬಳಕೆ ಮಾಡಿಕೊಂಡು ಪ್ರಯೋಗಾಧಾರಿತ ಚಟುವಟಿಕೆ ಮೂಲಕ ಬೋಧನೆ ಮಾಡಬೇಕು ಎಂದರು.

ಶಿಕ್ಷಣ ಸಂಯೋಜಕ ಆಂಜನಪ್ಪ, ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕಿ ಪ್ರಶಾಂತಿ ಮತ್ತು ವಿದ್ಯಾರ್ಥಿಗಳು ಇದ್ದರು.