ಶಿಕ್ಷಕರು ಬಡವರಾದ್ರು, ಹೃದಯದಿಂದ ಶ್ರೀಮಂತರು

| Published : Sep 12 2025, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಿರಂತರ ಅಧ್ಯಯನ, ಪ್ರಾಮಾಣಿಕತೆ, ಸೃಜನಶೀಲತೆ ಮತ್ತು ಅತ್ಯುತ್ತಮ ಮೌಲ್ಯಗಳನ್ನು ಶಿಕ್ಷಕರು ಹೊಂದಿರಬೇಕು. ಶಿಕ್ಷಕರು ಆರ್ಥಿಕವಾಗಿ ಬಡವರಾದರೂ ಹೃದಯದಿಂದ ಶ್ರೀಮಂತರು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಿರಂತರ ಅಧ್ಯಯನ, ಪ್ರಾಮಾಣಿಕತೆ, ಸೃಜನಶೀಲತೆ ಮತ್ತು ಅತ್ಯುತ್ತಮ ಮೌಲ್ಯಗಳನ್ನು ಶಿಕ್ಷಕರು ಹೊಂದಿರಬೇಕು. ಶಿಕ್ಷಕರು ಆರ್ಥಿಕವಾಗಿ ಬಡವರಾದರೂ ಹೃದಯದಿಂದ ಶ್ರೀಮಂತರು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.

ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಪ್ರತಿಯೊಬ್ಬರಲ್ಲಿಯೂ ಶಿಕ್ಷಕರ ಸ್ವರೂಪವನ್ನು ಕಾಣುವ ಮೂಲಕ ಸಮಾಜದ ಮೌಲ್ಯಗಳನ್ನು ಹೆಚ್ಚಿಸೋಣ ಎಂದು ತಿಳಿಸಿದರು.ಸಹ ಪ್ರಾಧ್ಯಾಪಕ ಡಾ.ಎಂ.ಎಸ್.ಹಿರೇಮಠ ಮಾತನಾಡಿ, ಸರ್ವಪಲ್ಲಿ ಡಾ.ರಾಧಾಕೃಷ್ಣನ ಅವರ ಜೀವನ ಚರಿತ್ರೆ ಮತ್ತು ಜೆ.ಎಸ್.ಎಸ್‌ ಶಿಕ್ಷಣ ಮಹಾವಿದ್ಯಾಲಯದ ಸ್ಥಾಪನೆಯನ್ನು ಶಿಕ್ಷಕರ ದಿನಾಚರಣೆಯಂದೇ ಮಾಡಲಾಗಿದೆ ಎಂದರು.

ಎಸ್.ಎಸ್.ಆವರಣದ ಆಡಳಿತಾಧಿಕಾರಿ ಪ್ರೊ.ಐ.ಎಸ್.ಕಾಳಪ್ಪನವರ ಮಾತನಾಡಿ, ಇಚ್ಛಾಸಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ ಶಿಕ್ಷಕರಿಗೆ ಇರಬೇಕು. ಅಂತರಂಗ ಮತ್ತು ಬಹಿರಂಗ ಎರಡು ಪರಿಶುದ್ಧವಾಗಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ವೃತ್ತಿ ಪದೋನ್ನತಿ ಹೊಂದಿರುವ ಪ್ರಾಚಾರ್ಯೆ ಡಾ.ಭಾರತಿ ಖಾಸನಿಸ್‌ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಂಶೋಧನಾ ವಿದ್ಯಾರ್ಥಿನಿ ಸುಜಾತಾ ಮತ್ತಿವಾಡ ರಚಿಸಿದ ಪುಸ್ತಕದಾಚೆಗಿನ ಪಾಠಗಳು ಆದರ್ಶ ಶಿಕ್ಷಕನ ಪಯಣ ಎಂಬ ಪುಸ್ತಕವನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.

ಸಹಾಯಕ ಪ್ರಾಧ್ಯಾಪಕರಾದ ಡಾ.ಜೆ.ಎಸ್.ಪಟ್ಟಣಶೆಟ್ಟಿ, ಡಾ.ಬಿ.ಎಸ್.ಹಿರೇಮಠ, ಎಸ್.ಎಸ್.ಪಾಟೀಲ, ಪಿ.ಡಿ.ಮುಲ್ತಾನಿ, ಡಾ.ಎಸ್.ಪಿ.ಶೇಗುಣಸಿ, ಎಂ.ಪಿ.ಕುಪ್ಪಿ, ಎಸ್.ಎಸ್.ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯೆ ವಿದ್ಯಾ ಪಾಟೀಲ, ತ್ರಿವೇಣಿ ಜಾನಕಾರ, ಡಾ.ಎಂ.ಬಿ.ಕೋರಿ, ಅಶ್ವಿನಿ ಜಿತ್ತಿ, ಸುಷ್ಮಾ ಸಿದ್ದಾಪುರ, ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.