ಸಾರಾಂಶ
ಹುಬ್ಬಳ್ಳಿ:
ಶಿಕ್ಷಕರು ಸಮಾಜ ರೂಪಿಸುವ ನಿಜವಾದ ಶಿಲ್ಪಿಗಳು. “ಹೊಸ ತಲೆಮಾರನ್ನು ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರಿಗೆ ಸನ್ಮಾನ ಮಾಡುವುದು ಎಂದರೆ ಸಮಾಜದ ಮೌಲ್ಯಗಳಿಗೆ ಗೌರವ ಸಲ್ಲಿಸುವಂತೆಯೇ ಆಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಚೇತನ ಸಮೂಹ ಸಂಸ್ಥೆಗಳು ವತಿಯಿಂದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ “ಶಿಕ್ಷಕ ವಿಕಾಸ ಪ್ರಶಸ್ತಿ-2025” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಎ. ಎಚ್. ಚಚಡಿ ಮಾತನಾಡಿ, “ಶಿಕ್ಷಕರು ಕೇವಲ ಪಾಠ ಮಾಡುವವರಲ್ಲ. ಅವರು ವಿದ್ಯಾರ್ಥಿಗಳ ಜೀವನಕ್ಕೆ ದಾರಿ ತೋರಿಸುವ ದೀಪಸ್ತಂಭಗಳು. ಶಿಕ್ಷಕರನ್ನು ಗೌರವಿಸುವ ಮೂಲಕ ಸಮಾಜ ತನ್ನದೇ ಆದ ಬೆಳಕನ್ನು ಉಳಿಸಿಕೊಂಡಿದೆ ಎಂದು ಹೇಳಿದರು.ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಮಾತನಾಡಿ, ಶಿಕ್ಷಕರು ಕೇವಲ ಜ್ಞಾನ ನೀಡುವವರಲ್ಲ. ಅವರು ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಮಾನವೀಯತೆ ಬೆಳೆಸುವ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈ ಪ್ರಶಸ್ತಿ ಮತ್ತಷ್ಟು ಶಿಕ್ಷಕರಿಗೆ ಪ್ರೇರಣೆ ನೀಡಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಚೇತನ ಬಿಸಿನೆಸ್ ಸ್ಕೂಲ್ ನಿರ್ದೇಶಕ ಡಾ. ವಿಶ್ವನಾಥ. ಎಂ. ಕೊರವಿ ಮಾತನಾಡಿ, ಶಿಕ್ಷಕರ ಪರಿಶ್ರಮ, ತ್ಯಾಗ ಮತ್ತು ಶ್ರೇಷ್ಠ ಸೇವೆಯನ್ನು ಗೌರವಿಸುವುದು ನಮ್ಮೆಲ್ಲರ ಹೊಣೆ. ಈ ಪ್ರಶಸ್ತಿ ಸಮಾರಂಭ ಶಿಕ್ಷಕರಲ್ಲಿ ಹೊಸ ಉತ್ಸಾಹ ಮತ್ತು ಚೇತನವನ್ನು ತುಂಬುತ್ತದೆ ಎಂದರು.ಕಾರ್ಯಕ್ರಮದಲ್ಲಿ 110 ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಈ ವೇಳೆ ಸಂತೋಷ ಹಲಕುರಕಿ, ಮನೀಷ್ ಜೈನ್, ಅಥರ್ ಶೈಖ್, ನಾಗರಾಜ ಮಿರಜಕರ, ಜಗದೀಶ ದ್ಯಾವಪ್ಪನವರ, ಪ್ರಾಚಾರ್ಯ ಡಾ. ಅಶೋಕ ಆರ್. ವಡಕಣ್ಣವರ, ಶೈಕ್ಷಣಿಕ ಸಲಹೆಗಾರ ಡಾ. ಕೆ.ಸಿ. ಪಾಂಗಿ, ಬಿಸಿಎ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಕುಲಕರ್ಣಿ (ಜಡಿಮಠ), ಡಾ. ನಿಧಿ ದೇಶಪಾಂಡೆ, ಪ್ರೊ. ಶರತ್ ರಾಯರ್, ಪ್ರೊ. ಗೌರಿ ಬುಲ್ಲಣ್ಣವರ, ಡಾ. ಭಾರತೀ ಬಡಿಗೇರ, ಪ್ರೊ. ವೀಣಾ ಮತ್ತು ಪ್ರೊ. ಶ್ವೇತಾ ಸಜ್ಜನ್, ಪ್ರೊ. ಪ್ರಿಯದರ್ಶಿನಿ, ಪ್ರೊ. ಸಹನಾ, ಪ್ರೊ. ರೇಣುಕಾ, ಮಹೇಶ್ ಸಂಗಮ, ಭಾಗ್ಯಶ್ರೀ ಬಾಳಿಗಾರ ಹಾಗೂ ಡಾ. ಅಣ್ಣಪೂರ್ಣ ಟಿ. ಉಪಸ್ಥಿತರಿದ್ದರು.