ಸಾರಾಂಶ
ಅಸಾಧಾರಣ ಜ್ಞಾನ ಸಂಪಾದನೆಯಿಂದ ದೇಶದ ಹಲವೆಡೆ ಉನ್ನತ ಸ್ಥಾನಕ್ಕೇರಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ದೇಶದ ಅತ್ಯುನ್ನತ ಭಾರತರತ್ನ ಪ್ರಶಸ್ತಿಗೂ ಭಾಜನರಾಗಿದ್ದರು.
ಕುಮಟಾ: ನಮ್ಮೆಲ್ಲರ ಜೀವನದಲ್ಲೂ ತಂದೆ- ತಾಯಿಗಳಂತೆ ಶಿಕ್ಷಕರ ಪಾತ್ರವು ಬಹಳ ಮಹತ್ವದ್ದು. ಕೈಹಿಡಿದು ಅಕ್ಷರ ತಿದ್ದಿ, ಓದಿಸಿ, ಬರೆಯಲು ಕಲಿಸುವುದು ಮಾತ್ರವಲ್ಲದೇ ಬದುಕಿನ ಕೌಶಲಗಳನ್ನೂ ಕಲಿಸುತ್ತಾ ಜೀವನದಲ್ಲಿ ಮುಂದೆ ಸಾಗುವಂತೆ ಮಾಡುವ ಶಿಕ್ಷಕರು ಒಂದರ್ಥದಲ್ಲಿ ನಮ್ಮ ಬದುಕನ್ನು ರೂಪಿಸುವ ಶಿಲ್ಪಿಗಳು ಎಂದು ಉಪವಿಭಾಗಾಧಿಕಾರಿ ಕಲ್ಯಾಣಿ ವೆಂಕಟೇಶ ಕಾಂಬ್ಳೆ ತಿಳಿಸಿದರು.ಪಟ್ಟಣದ ಗಿಬ್ ಪ್ರೌಢಶಾಲೆಯ ರಾಜೇಂದ್ರ ಪ್ರಸಾದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬದುಕಿನಲ್ಲಿ ನಮ್ಮನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವವರೇ ಶಿಕ್ಷಕರು. ಇಂತಹ ದೈವಸ್ವರೂಪಿ ಶಿಕ್ಷಕರಿಗೆ ಗೌರವ ಸಲ್ಲಿಸುವ ಸಲುವಾಗಿ ಒಂದು ದಿನವನ್ನು ನಿಗದಿ ಪಡಿಸಲಾಗಿದೆ. ಅಸಾಧಾರಣ ಜ್ಞಾನ ಸಂಪಾದನೆಯಿಂದ ದೇಶದ ಹಲವೆಡೆ ಉನ್ನತ ಸ್ಥಾನಕ್ಕೇರಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ದೇಶದ ಅತ್ಯುನ್ನತ ಭಾರತರತ್ನ ಪ್ರಶಸ್ತಿಗೂ ಭಾಜನರಾಗಿದ್ದರು.
ಶಿಕ್ಷಕ ಸಮುದಾಯಕ್ಕೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮಹಾಗುರುಗಳು. ಶಿಕ್ಷಣ ಕ್ಷೇತ್ರದಲ್ಲಿ ಲಿಂಗ ತಾರತಮ್ಯವಿಲ್ಲ. ಸಾವಿತ್ರಿಬಾಯಿ ಫುಲೆ ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿದ್ದರು. ಒಬ್ಬ ಶಿಕ್ಷಕ ಸಮಾಜ, ದೇಶವನ್ನು ಕಟ್ಟುವ ಸಾಮರ್ಥ್ಯ ಹೊಂದಿರುತ್ತಾನೆ. ಅವರ ಕರ್ತವ್ಯಪ್ರಜ್ಞೆ, ನಿಷ್ಠೆಯ ಸೇವೆ ಅದೆಷ್ಟೋ ಮಕ್ಕಳಿಗೆ ಭವಿಷ್ಯದ ಮಾರ್ಗ ಕಲ್ಪಿಸಿಕೊಟ್ಟಿದೆ. ಶಿಕ್ಷಕರು ತಮ್ಮ ವೃತ್ತಿ, ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಸಮಾಜದ ಎಲ್ಲ ವರ್ಗದವರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದರು. ಬಿಇಒ ಆರ್.ಎಲ್. ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಕಲ್ಲನ್ನು ಕೆತ್ತಿ ಸುಂದರ ಮೂರ್ತಿಯನ್ನಾಗಿಸುವ ಶಿಲ್ಪಿಯಂತೆ ಮಕ್ಕಳ ಭವಿಷ್ಯವನ್ನು ರೂಪಿಸುವವರು ಶಿಕ್ಷಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಶಿಕ್ಷಕರೆಂದರೆ ಬರೀ ಪಠ್ಯಪುಸ್ತಕದಲ್ಲಿನ ಪಾಠ ಹೇಳಿಕೊಡುವುದಲ್ಲ. ಇಡೀ ಬದುಕಿನ ಪಾಠ ಹೇಳಿಕೊಡುವವರು. ಶಿಕ್ಷಕ ವೃತ್ತಿ ಕೇವಲ ವೃತ್ತಿಯಲ್ಲ, ಸಾಮಾಜಿಕ ಜವಾಬ್ದಾರಿ ಎಂದರು.ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವ್ಕರ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ, ಸಮನ್ವಯಾಧಿಕಾರಿ ರೇಖಾ ನಾಯ್ಕ, ಬಿ.ಜಿ. ನಾಯ್ಕ, ಮಂಜುನಾಥ ನಾಯ್ಕ, ಸಿ.ಜಿ. ನಾಯ್ಕ, ಅನಿಲ್ ರೊಡ್ರಗೀಸ್ ಇತರರು ಇದ್ದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ನಿವೃತ್ತ ಶಿಕ್ಷಕರು ಹಾಗೂ ಮುಖ್ಯಾಧ್ಯಾಪಕರು, ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಸೇವಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಶಿಕ್ಷಕ ಮಂಜುನಾಥ ನಾಯ್ಕ, ಎನ್.ಆರ್. ನಾಯ್ಕ, ನಾಗರಾಜ ಶೆಟ್ಟಿ ನಿರ್ವಹಿಸಿದರು. ಆರಂಭದಲ್ಲಿ ಗಾಯಕ ವಿದ್ವಾನ್ ಶಿವಾನಂದ ಭಟ್ಟ, ತಬಲಾ ವಾದಕ ಎನ್.ಜಿ. ಹೆಗಡೆ ಕಪ್ಪೆಕೇರಿ, ಮನೋಜ ಕುಮಾರ, ಪ್ರಥಮ ಭಟ್ಟ ತಂಡದಿಂದ ಭಕ್ತಿ ಸುಧೆ ಸಂಗೀತ ಕಾರ್ಯಕ್ರಮ ಎಲ್ಲರ ಮನ ಮುದಗೊಳಿಸಿತು.