ಚನ್ನಪಟ್ಟಣ: ಶಿಕ್ಷಕರು ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಾಗಿದ್ದು, ವಿದ್ಯಾರ್ಥಿಗಳಲ್ಲಿ ಜ್ಞಾನ, ಮೌಲ್ಯ ಹಾಗೂ ಮಾನವೀಯ ಗುಣಗಳನ್ನು ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಹೇಳಿದರು

ಚನ್ನಪಟ್ಟಣ: ಶಿಕ್ಷಕರು ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಾಗಿದ್ದು, ವಿದ್ಯಾರ್ಥಿಗಳಲ್ಲಿ ಜ್ಞಾನ, ಮೌಲ್ಯ ಹಾಗೂ ಮಾನವೀಯ ಗುಣಗಳನ್ನು ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಹೇಳಿದರು.

ನಗರದ ಬಿಇಒ ಕಚೇರಿ ಮುಂದಿರುವ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರತಿಮೆಗೆ ತಾಲೂಕು ಶಿಕ್ಷಕ ಸಂಘಟನೆ ಹಾಗೂ ಶಿಕ್ಷಕರ ವೃಂದದಿಂದ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಕೇವಲ ಪಾಠ ಬೋಧಿಸುವುದಕ್ಕೆ ಸೀಮಿತವಾಗಿರದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದ ಮಹತ್ತರ ಜವಾಬ್ದಾರಿ ಒಳಗೊಂಡಿದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶಗಳನ್ನು ಸ್ಮರಿಸುವುದರ ಜೊತೆಗೆ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆ, ಬದ್ಧತೆ ಮತ್ತು ಸೇವಾ ಮನೋಭಾವ ಅಳವಡಿಸಿಕೊಳ್ಳಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ರಾಜಶೇಖರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಶಿಕ್ಷಕರು ಹೊಂದಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಪ್ರಗತಿಗೆ ಆದ್ಯತೆ ನೀಡಿ, ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕ ಯೋಗೇಶ್ ಚಕ್ಕೆರೆ ನಿರೂಪಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣ ಶಿಕ್ಷಕರ ದಿನಾಚರಣೆ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮೂರ್ತಿ, ಜಿಲ್ಲಾ ಕಾರ್ಯದರ್ಶಿ ಅರಳಾಪುರ ಬಸವರಾಜು, ನಿಕಟ ಪೂರ್ವ ಕಾರ್ಯದರ್ಶಿ ಕೃಷ್ಣಕುಮಾರ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಸ್.ಎಂ. ನಾಗೇಶ್, ಕುಮಾರಸ್ವಾಮಿ, ಶೈಲಾಜಾರವಿ, ಶ್ವೇತಾಶಿವಕುಮಾರ್, ಹಿರೇಮಠ್ , ಗಂಗಾಧರಮೂರ್ತಿ, ಪಂಚಲಿಂಗಯ್ಯ, ವಿಜಯಕಾಂತ್ ಇತರರಿದ್ದರು.

ಪೊಟೋ೬ಸಿಪಿಟಿ೨:

ಚನ್ನಪಟ್ಟಣದ ಬಿಇಒ ಕಚೇರಿ ಮುಂದಿರುವ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರತಿಮೆಗೆ ತಾಲೂಕು ಶಿಕ್ಷಕರ ಸಂಘಟನೆ ಹಾಗೂ ಶಿಕ್ಷಕರ ವೃಂದದಿಂದ ಪುಷ್ಪ ನಮನ ಸಲ್ಲಿಸಲಾಯಿತು.