ಮಕ್ಕಳ ಭವಿಷ್ಯಕ್ಕೆ ಶಿಕ್ಷಕರೇ ಮಾರ್ಗದರ್ಶಕರು: ಸಂಸದ

| Published : Sep 26 2025, 01:00 AM IST

ಮಕ್ಕಳ ಭವಿಷ್ಯಕ್ಕೆ ಶಿಕ್ಷಕರೇ ಮಾರ್ಗದರ್ಶಕರು: ಸಂಸದ
Share this Article
  • FB
  • TW
  • Linkdin
  • Email

ಸಾರಾಂಶ

ಮಾಲೂರು ತಾಲೂಕಿನಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬದಲಾವಣೆಗೆ ಪ್ರಯತ್ನ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಪೋಷಕರು ತಮಗೆ ಎಷ್ಟೇ ಕಷ್ಟಗಳಿದ್ದರೂ ಸಹ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮಕ್ಕಳ ದಾಖಲಾತಿಗೆ ಮುಂದಾಗಲಿ.

ಕನ್ನಡಪ್ರಭ ವಾರ್ತೆ ಮಾಲೂರು

ಶಿಕ್ಷಕರು ಈ ದೇಶದ ಆಧಾರ ಸ್ತಂಭಗಳು, ಪೋಷಕರು ಮಕ್ಕಳಿಗೆ ಜನ್ಮ ನೀಡಿದರೆ ಗುರುಗಳು ಮಕ್ಕಳ ಭವಿಷ್ಯದ ಮಾರ್ಗದರ್ಶಕರಾಗಿ ಶಿಕ್ಷಣ ನೀಡುತ್ತಾರೆ ಎಂದು ಸಂಸದ ಮಲ್ಲೇಶ್‌ ಬಾಬು ಹೇಳಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಮಾಲೂರು ಬೆಂಗಳೂರು ರಸ್ತೆಯ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಭಾರತ ರತ್ನ ಡಾ. ಎಸ್. ರಾಧಾಕೃಷ್ಣನ್ ರವರ ೧೩೭ನೇ ಜನ್ಮ ದಿನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲಾ ಕಟ್ಟಡ ದುರಸ್ತಿ ಮಾಡಿಸಿ

ತಾಲೂಕಿನಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬದಲಾವಣೆಗೆ ಪ್ರಯತ್ನ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಪೋಷಕರು ತಮಗೆ ಎಷ್ಟೇ ಕಷ್ಟಗಳಿದ್ದರೂ ಸಹ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ತಮ್ಮ ಶಾಲೆಗಳ ಬಳಿ ಉತ್ತಮ ಪರಿಸರ ನಿರ್ಮಿಸಿ ಗ್ರಾಪಂ ಅನುದಾನದಲ್ಲಿ ಕಟ್ಟಡಗಳನ್ನು ದುರಸ್ತಿ ಮಾಡಿಸಿಕೊಂಡು ಮಕ್ಕಳ ದಾಖಲಾತಿ ಹೆಚ್ಚಿಸಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದರು.

ಗುರುಭವನ ಕಾಮಗಾರಿ

ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ಶಿಕ್ಷಣ ಇಲಾಖೆಯ ಶಾಲಾ ಕಾಲೇಜುಗಳಿಗೆ ೬೦ ಕೋಟಿ ರು. ಗಳನ್ನು ಬಿಡುಗಡೆ ಮಾಡಿಸಲಾಗಿದೆ, ಕೆಲವು ಶಾಲೆಗಳಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮಾಸ್ತಿಯವರ ಹೆಸರಿನಲ್ಲಿ ವಸತಿ ಶಾಲೆ ನಿರ್ಮಾಣವಾಗಿದೆ, ಮಾರುತಿ ಬಡಾವಣೆಯಲ್ಲಿ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಗುರುಭವನ ಕಾಮಗಾರಿ ಪ್ರಾರಂಭಿಸಲಾಗಿದ್ದು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತಾಪಂ ಇಒ ವಿ. ಕೃಷ್ಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ. ಮುನೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಯ್ಯ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಪ್ರೌಢಶಾಲಾ ಬಡ್ತಿ ಮುಖ್ಯಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟಪ್ಪ ಮಾತನಾಡಿದರು.

ನಗರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಯಿಂ ಉಲ್ಲಾಖಾನ್, ತಹಸೀಲ್ದಾರ್ ಎಂ.ವಿ.ರೂಪ, ಬಿಇಒ ಕೆಂಪಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಂಜಿನಪ್ಪ, ಎ.ಕೆ.ವೆಂಕಟೇಶ್, ಕ್ಷೇತ್ರ ಸಮನ್ವಯ ಅಧಿಕಾರಿ ಟಿ. ವೆಂಕಟಸ್ವಾಮಿ ಇನ್ನಿತರರು ಇದ್ದರು.